ನ್ಯೂಸ್

ಮಾಹಿತಿ ಸಂಗ್ರಹಕ್ಕಾಗಿ ಸ್‌ಟಾವೇರ್ ದತ್ತಾಂಶ ಬಳಸಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಪುರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸುವ ಮುನ್ನ ಸರ್ಕಾರ ಆ ಸಂಸ್ಥೆಗಳಿಗೆ ಯಾವ್ಯಾವ ವರ್ಗಗಳ ಜನರು ಆಯ್ಕೆಯಾಗಿದ್ದಾರೆಂಬ ಮಾಹಿತಿ ಸಂಗ್ರಹಿಸಲು ಸ್‌ಟಾವೇರ್ ದತ್ತಾಂಶ ಬಳಸಿಕೊಳ್ಳಬೇಕು ಮತ್ತು ಆನಂತರ ಸ್ಥಾನಗಳ ಮೀಸಲು ಅಖೈರುಗೊಳಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಸೇರಿ ಐದು ಪಟ್ಟಣ ಪಂಚಾಯಿತಿಗಳಲ್ಲಿ ಎಸ್‌ಸಿ, ಎಸ್‌ಟಿ ಮೀಸಲು ವರ್ಗದ ಅಡಿಯಲ್ಲಿ ಯಾವುದೇ ಮಹಿಳಾ ಕೌನ್ಸಿಲರ್‌ಗಳು ಆಯ್ಕೆಯಾಗಿಲ್ಲವೆಂಬ ಕಾರಣಕ್ಕೆ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಖಾಲಿ ಇರುವುದನ್ನು ಗಮನಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಚುನಾಯಿತ ಪುರಸಭೆ ಪ್ರತಿನಿಧಿಗಳ ದತ್ತಾಂಶ ಸಂಗ್ರಹಿಸಿ ಮೀಸಲಾತಿ ಪಟ್ಟಿ ಮಾಡಿದರೆ ಮತ್ತು ಮೀಸಲು ವರ್ಗಕ್ಕೆ ಯಾವುದೇ ಅಭ್ಯರ್ಥಿ ಕಂಡುಬಂದಿಲ್ಲವಾದರೆ, ಅದಕ್ಕೆ ಅನುಗುಣವಾಗಿ ಸೂಕ್ತ ಬದಲಾವಣೆಗಳನ್ನು ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.

‘ಮೀಸಲಾತಿ ಎರಡು ಹಂತಗಳಲ್ಲಿ ಅನ್ವಯಿಸುತ್ತದೆ. ಒಂದು ಪುರಸಭೆಗೆ ಆಯ್ಕೆಯಾಗುವ ಸಮಯ ಮತ್ತು ನಂತರ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಸಂದರ್ಭದಲ್ಲಿ. ಹಾಗಾಗಿ ಯಾವ್ಯಾವ ವರ್ಗದ ಅಭ್ಯರ್ಥಿಗಳು ಅಯ್ಕೆಯಾಗಿದ್ದಾರೆಂಬ ದತ್ತಾಂಶ ಸಂಗ್ರಹಿಸಿ ಹುದ್ದೆಗಳಿಗೆ ಮೀಸಲು ಪಟ್ಟಿ ಮಾಡಿದರೆ ಮತ್ತು ಒಂದು ಹುದ್ದೆಗೆ ಮೀಸಲಾತಿ ನೀಡಿದರೆ ಮತ್ತು ಆ ವರ್ಗಕ್ಕೆ ಯಾವುದೇ ಅಭ್ಯರ್ಥಿ ಕಂಡುಬಂದಿಲ್ಲವಾದರೆ ಸೂಕ್ತ ಬದಲಾವಣೆಗಳನ್ನು ಮಾಡಲು ಸರ್ಕಾರಕ್ಕೆ ಅವಕಾಶವಿರಲಿದೆ. ಇಲ್ಲವಾದರೆ ಆ ಹುದ್ದೆಗಳು ಹಾಗೆಯೇ ಉಳಿಯುತ್ತವೆ. ಆಗ ಮೀಸಲು ಉದ್ದೇಶ ಸಾರ್ಥಕವಾಗುವುದಿಲ್ಲ’ ಎಂದು ನ್ಯಾಯಾಲಯ ಆದೇಶಿಸಿದೆ.

ಹಾಲಿ ನಿಗದಿಪಡಿಸಿರುವ ಅವಧಿ ಮುಗಿಯುವವರೆಗೆ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳನ್ನು ಖಾಲಿ ಬಿಡಬೇಕು ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ನ್ಯಾಯಾಲಯ, ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳನ್ನು ಖಾಲಿ ಬಿಟ್ಟರೆ ಸಂಸ್ಥೆಗಳ ಆಡಳಿತ ನಿರ್ವಹಣೆಗೆ ತೊಂದರೆ ಆಗುತ್ತದೆ. ಹಾಗಾಗಿ ಸರ್ಕಾರ ಆ ಹುದ್ದೆಗಳ ಮೀಸಲು ಮುಕ್ತವಾಗಿಟ್ಟು ಚುನಾವಣೆಯನ್ನು ನಡೆಸಬಹುದು ಎಂದು ತಿಳಿಸಿದೆ.