ನ್ಯೂಸ್

ದುರಂತಕ್ಕೆ ಹೈಕೋರ್ಟ್ ಕಳವಳ : ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ ನ್ಯಾಯಾಲಯ

 ಬೆಂಗಳೂರು: ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸರ್ಕಾರಕ್ಕೆ ಚಾಟಿ ಬೀಸಿದೆ.

ದುರಂತದ ಬಗ್ಗೆ ಮಾಧ್ಯಮಗಳ ವರದಿ ಪರಿಗಣಿಸಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಘಟನೆ ತಡೆಗೆ ಎಸ್‌ಒಪಿ ಇರಬೇಕಲ್ಲವೇ? ವೈದ್ಯಕೀಯ ಸಿಬ್ಬಂದಿ, ಸಿದ್ಧತೆ, ಆಂಬುಲೆನ್ಸ್ ವ್ಯವಸ್ಥೆ, ಕಾಲ್ತುಳಿತವಾದಾಗ ಏನು ಮಾಡಬೇಕೆಂಬ ಬಗ್ಗೆ ಪೂರ್ವಸಿದ್ಧತೆ ಇರಬೇಕಲ್ಲವೇ? ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಬೇಕಲ್ಲವೇ? ಇಂತಹ ಮಾರ್ಗಸೂಚಿ ಪಾಲಿಸಿದ್ದೀರಾ? ಕಾರ್ಯಕ್ರಮ ಆಯೋಜಕರು ಯಾರು? ಸಾವಿನ ಘಟನೆ ಸ್ಟೇಡಿಯಂ ಬಳಿ ಮಾತ್ರ ನಡೆದಿದೆಯೇ? ಎಂದು ಸರ್ಕಾರಕ್ಕೆ ಪ್ರಶ್ನೆ ಇಟ್ಟಿತು.

ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್ ಜನರಲ್, ರಾಯಲ್ ಚಾಲೆಂಜರ್ಸ್ ಟಿಕೆಟ್ ಹಂಚಿಕೆ ಮಾಡುತ್ತದೆ. ಸ್ಟೇಡಿಯಂನ ಎಲ್ಲ ವ್ಯವಸ್ಥೆಯನ್ನು ಅವರೇ ಮಾಡುತ್ತಾರೆ. ಕೆಎಸ್‌ಸಿಎ ಸಹಯೋಗ ನೀಡುತ್ತದೆ. 2 ಲಕ್ಷ ಜನ ಸ್ಟೇಡಿಯಂ ಸುತ್ತಲೇ ಇದ್ದರು. ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಜನ ಬಂದಿದ್ದರು. ಬೆಂಗಳೂರಿನ ಜಿಲ್ಲಾ ಉಸ್ತುವಾರಿ ಸಚಿವರೂ ಪರಿಶೀಲಿಸುತ್ತಿದ್ದರು ಎನ್ನುತ್ತಲೇ ಸಾವು ಸಂಭವಿಸಿದ ಸ್ಥಳದ ಮ್ಯಾಪ್ ಸಲ್ಲಿಕೆ ಮಾಡಿದರು. ಆ ಕೂಡಲೇ ಪೀಠ, ಮೈದಾನದಲ್ಲಿ ಎಷ್ಟು ಗೇಟ್‌ಗಳಿವೆ, ಎಷ್ಟು ತೆರೆದಿತ್ತು? ಎಂದು ಕೇಳಿದರು.

21 ಗೇಟುಗಳಿವೆ, ಎಲ್ಲ ಗೇಟ್‌ಗಳನ್ನೂ ತೆರೆದಿತ್ತೆಂಬ ಮಾಹಿತಿಯಿದೆ ಎಂದು ಎಜಿ ವಿವರಿಸಿದರು. ಪ್ರಕರಣ ಸಂಬಂಧ ಆರ್‌ಸಿಬಿ ಆಡಳಿತ ಮಂಡಳಿ, ಕೆಎಸ್‌ಸಿಎ, ಚಿನ್ನಸ್ವಾಮಿ ಆಡಳಿತ ಮಂಡಳಿ ವಿರುದ್ಧ ಈಗಾಗಲೇ ಎ್ಐಆರ್ ದಾಖಲಾಗಿದೆ. ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಲಾಗಿದೆ. 15 ದಿನದಲ್ಲಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ಹಾಜರುಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಅವಘಡಕ್ಕೆ ಕಾರಣವೇನು? ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ವಿಚಾರವಾಗಿ ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಅದನ್ನು ಆಧರಿಸಿ ತೀರ್ಪು ಪ್ರಕಟಿಸಲಾಗುವುದು ಎಂದು ವಿಚಾರಣೆಯನ್ನು ಜೂ.10 ಕ್ಕೆ ಮುಂದೂಡಿದೆ.