ನ್ಯೂಸ್

ತಿರಸ್ಕರಿಸಿದ ಕಸುಬು ಮುಂದುವರಿಸಲು ಒತ್ತಾಯ ಸಲ್ಲ ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು:  ಒಂದು ನಿರ್ದಿಷ್ಟ ಸಮುದಾಯ ಸಾಂಪ್ರದಾಯಿಕವಾಗಿ ಅನುಸರಿಸಿಕೊಂಡು ಬಂದಿರುವ ಕಸುಬನ್ನು ತಿರಸ್ಕರಿಸಿದ ಬಳಿಕವೂ ಮುಂದುವರಿಸುವಂತೆ ಒತ್ತಾಯಿಸುವುದು ಸಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ತಮಟೆ ಬಾರಿಸುವ ಕುಲ ಕಸುಬು ತಿರಸ್ಕರಿಸಿದ ಬಳಿಕವೂ ಅದೇ ವೃತ್ತಿ ಮುಂದುವರಿಸುವಂತೆ ಒತ್ತಾಯಿಸಿದ್ದನ್ನು ಪ್ರಶ್ನಿಸಿ ಮಾದಿಗ ದಂಡೋರ ಸಮುದಾಯದವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ಒಬ್ಬ ವ್ಯಕ್ತಿ ಮತ್ತೊಬ್ಬರನ್ನು ತನ್ನಂತೆ ಮನುಷ್ಯರೆಂದು ಕಾಣಬೇಕು. ಅದನ್ನು ಮರೆತು ವರ್ತಿಸುವುದು ಒಪ್ಪುವಂತಹದ್ದಲ್ಲ. ಇತ್ತೀಚಿನ ದಿನಗಳಲ್ಲಿ ಹಬ್ಬದ ಸಮಯದಲ್ಲಿ ಹಿಂಸಾಚಾರ ಅಥವಾ ಕೋಮು ಸಂಘರ್ಷಗಳಿಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತಿದೆ. ಸಮಾಜದ ಎಲ್ಲ ಸಮುದಾಯಗಳು ಭಾಗಿಯಾಗುವಂತಹ ಹಾಗೂ ಸಮುದಾಯಗಳ ನಡುವೆ ಶಾಂತಿ ಮತ್ತು ಸಾಮರಸ್ಯ ಹರಡುವಂತಹ ಹಬ್ಬಗಳ ಆಚರಣೆಗೆ ಸರ್ಕಾರಗಳು ಉತ್ತೇಜಿಸಬೇಕು ಎಂದು ಪೀಠ ಸಲಹೆ ನೀಡಿದೆ.

ಯಾದಗಿರಿ ಜಿಲ್ಲೆಯಲ್ಲಿ ಹಿಂದುಗಳು ಮತ್ತು ಮುಸ್ಲಿಮರು ಪರಸ್ಪರ ಸಮುದಾಯದ ಹಬ್ಬಗಳಲ್ಲಿ ಭಾಗವಹಿಸುವ ಮೂಲಕ ಕೋಮು ಸಾಮರಸ್ಯ ಕಾಪಾಡುತ್ತಿದ್ದಾರೆ. ಶರಣ ಬಸವೇಶ್ವರ ದೇವಸ್ಥಾನ, ಖಾಜಾ ಬಂದೇ ನವಾಜ್ ದರ್ಗಾದಂತಹ ಸಂಸ್ಥೆಗಳು ಕೋಮು ಸಾಮರಸ್ಯದ ಉದಾಹರಣೆಗಳಾಗಿದ್ದು, ಇಡೀ ದೇಶ ಇದನ್ನು ಅನುಸುವಂತಾಗಬೇಕು ಎಂದು ಪೀಠ ಹೇಳಿತು. ಅಲ್ಲದೆ, ಅರ್ಜಿದಾರರ ಮನವಿಯ ಸಂಬಂಧ ಈ ರೀತಿಯ ಸಮಾರಂಭಗಳಲ್ಲಿ ಭಾಗವಹಿಸುವ ಎಲ್ಲ ವರ್ಗದವರನ್ನು ವಿಚಾರಣೆ ನಡೆಸಿ ಕಾನೂನಿನ ಪ್ರಕಾರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಪೀಠ ಸೂಚನೆ ನೀಡಿತು.