ಬೆಂಗಳೂರು: ರಜೆ ಪಡೆಯದೆ ಅನಧಿಕೃತವಾಗಿ ಕೆಲಸಕ್ಕೆ ಗೈರಾಗುವುದು ದುರ್ನಡತೆ ತೋರಿದಂತೆ. ಹಾಗಾಗಿ ಶಿಸ್ತು ಕ್ರಮ ಜರುಗಿಸಬಹುದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ನೌಕರನ ಅನಧಿಕೃತ ರಜೆಯನ್ನು ಕಾರ್ಮಿಕ ನ್ಯಾಯಾಲಯಗಳು ಲಘುವಾಗಿ ಪರಿಗಣಿಸಬಾರದು ಎಂದು ಸೂಚನೆ ಕೊಟ್ಟಿದೆ.
ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾದ ಹಿನ್ನೆಲೆಯಲ್ಲಿ ಚಾಲಕ ಕಂ.ನಿರ್ವಾಹಕನನ್ನು ವಜಾಗೊಳಿಸಿದ ಬಿಎಂಟಿಸಿ ಆದೇಶವನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ ಎತ್ತಿಹಿಡಿದಿದೆ. ರಾಯಚೂರಿನ ಟಿ.ದೇವಪ್ಪ ಅವರನ್ನು ವಜಾಗೊಳಿಸಿದ್ದ ಕ್ರಮವನ್ನು ರದ್ದುಪಡಿಸಿದ್ದ ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿಎಂಟಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಉದ್ಯೋಗಕ್ಕೆ ಹಾಜರಾಗಬೇಕಾದ ಸಮಯದಲ್ಲಿ ಸಕಾರಣವಿಲ್ಲದೆ ಗೈರಾಗಬಾರದು ಎಂಬ ಹೊಣೆಗಾರಿಕೆ ಉದ್ಯೋಗಿಯ ಮೇಲಿರುತ್ತದೆ. ಔದ್ಯೋಗಿಕ ಕ್ಷೇತ್ರದಲ್ಲಿ ರಜೆ ಮಂಜೂರಾಗದೆ ಗೈರಾಗುವುದು ದುರ್ನಡತೆಯಾಗಲಿದೆ. ಅದು ಶಿಸ್ತು ಕ್ರಮ ಜರುಗಿಸಲು ಅರ್ಹವಾಗಿರುತ್ತದೆ. ರಜೆ ಮಂಜೂರಾಗದೆ ಗೈರಾಗುವುದನ್ನು ಹಕ್ಕು ಎಂಬುದಾಗಿ ಉದ್ಯೋಗಿಗಳು ಪರಿಗಣಿಸಬಾರದು ಎಂದು ತಿಳಿಸಿದೆ.
ತಪ್ಪಿತಸ್ಥ ಉದ್ಯೋಗಿಯ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಸಮರ್ಥನೀಯವಾಗಿದೆ. ಈ ಪ್ರಕರಣದಲ್ಲಿ ರಜೆ ಕೋರಿ ಅರ್ಜಿ ಸಲ್ಲಿಸದೆ ಮತ್ತು ಉನ್ನತಾಧಿಕಾರಿಗಳ ಪೂರ್ವಾನುಮತಿಯಿಲ್ಲದೆ ಉದ್ಯೋಗಕ್ಕೆ ಅನಧಿಕೃತವಾಗಿ ಗೈರಾಗಿದ್ದರೂ ದೇವಪ್ಪನನ್ನು ಸೇವೆಗೆ ಮರು ನಿಯೋಜಿಸಲು ಬಿಎಂಟಿಸಿಗೆ ನಿರ್ದೇಶಿಸಿದ ಕಾರ್ಮಿಕ ನ್ಯಾಯಾಲಯದ ಆದೇಶ ದೋಷಪೂರಿತವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಸೂಚಿಸಿದೆ.