ನ್ಯೂಸ್

ಜ್ಞಾನವಾಪಿಯಂತೆ ಭೋಜಶಾಲಾ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್‌ ಸೂಚನೆ

ಮಧ್ಯಪ್ರದೇಶ: ಜ್ಞಾನವಾಪಿಯಂತೆ, ಧಾರ್‌ನಲ್ಲಿರುವ 11ನೇ ಶತಮಾನದ ಭೋಜಶಾಲಾ ದೇವಸ್ಥಾನ ಅಥವಾ ಕಮಲ್ ಮೌಲಾ ಮಸೀದಿ ಕಟ್ಟಡದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಮಧ್ಯಪ್ರದೇಶ ಹೈಕೋರ್ಟ್ ಮಾ.11ರಂದು ಆದೇಶಿಸಿದೆ.

ಈ ಕಟ್ಟಡವನ್ನು ಹಿಂದೂಗಳು ವಾಗ್ದೇವಿಯ ಭೋಜಶಾಲಾ ದೇವಸ್ಥಾನ ಎಂದರೆ, ಮುಸ್ಲಿಮರು ಕಮಲ್ ಮೌಲಾ ಮಸೀದಿ ಎನ್ನುತ್ತಾರೆ.

‘ಹಿಂದಿ ಫ್ರಂಟ್ ಫಾರ್ ಜಸ್ಟೀಸ್’ ಎಂಬ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್‌.ಎ ಧರ್ಮಾಧಿಕಾರಿ ಮತ್ತು ದೇವನಾರಾಯಣ ಮಿಶ್ರಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಲಾಗಿದೆ.

ವರದಿಗಳ ಪ್ರಕಾರ, ಎಎಸ್‌ಐನ ನಿರ್ದೇಶಕರು ಅಥವಾ ಹೆಚ್ಚುವರಿ ನಿರ್ದೇಶಕರ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸುವಂತೆ ಮತ್ತು ಆರು ವಾರಗಳಲ್ಲಿ ಸಮೀಕ್ಷೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಭೋಜಶಾಲಾ ದೇವಸ್ಥಾನ ಅಥವಾ ಕಮಲ್ ಮೌಲಾ ಮಸೀದಿ ಕಟ್ಟಡಗಳು ಪುರಾತತ್ವ ಇಲಾಖೆಯಡಿ ಸಂರಕ್ಷಿತ ಸ್ಮಾರಕವಾಗಿರುವುದರಿಂದ 1991ರ ಪೂಜಾ ಸ್ಥಳಗಳ ಸಂರಕ್ಷಣೆ ಕಾಯ್ದೆ ಇಲ್ಲಿ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಮಂಗಳವಾರ ವಾಗ್ದೇವಿಗೆ ಪೂಜೆ, ಶುಕ್ರವಾರ ನಮಾಝ್
2003ರಲ್ಲಿ ಪುರಾತತ್ವ ಸರ್ವೇಕ್ಷಣಾ ಇಲಾಖೆ ರೂಪಿಸಿದ ವ್ಯವಸ್ಥೆಯಂತೆ ಭೋಜಶಾಲಾ ದೇವಸ್ಥಾನ ಅಥವಾ ಕಮಲ್ ಮೌಲಾ ಮಸೀದಿ ಕಟ್ಟಡದಲ್ಲಿ ಪ್ರತಿ ಮಂಗಳವಾರ ಹಿಂದೂಗಳು ವಾಗ್ದೇವಿಗೆ ಪೂಜೆ ಮಾಡುತ್ತಾರೆ ಮತ್ತು ಪ್ರತಿ ಶುಕ್ರವಾರ ಮುಸ್ಲಿಮರು ನಮಾಝ್ ಮಾಡುತ್ತಿದ್ದಾರೆ.

ಈ ವಿಚಾರವಾಗಿ ಹಲವು ಭಾರೀ ಸಂಘರ್ಷ ಉಂಟಾಗಿದೆ. ಈ ಹಿಂದೆ ಹಿಂದೂಗಳ ಬಸಂತ್ ಪಂಚಮಿ ಶುಕ್ರವಾರ ಬಂದಿತ್ತು. ಅಂದು ಮುಸ್ಲಿಮರ ಪ್ರಾರ್ಥನಾ ದಿನವಾದ ಕಾರಣ, ಹಿಂದೂಗಳು ಪೂಜೆ ಸಲ್ಲಿಸಲು ಸರತಿ ಸಾಲಿನಲ್ಲಿ ಕಾಯಬೇಕಾದ ಅನಿವಾರ್ಯತೆ ಉಂಟಾಗಿತ್ತು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಾಗ್ದೇವಿ (ಸರಸ್ವತಿ ದೇವಿ)ಯ ವಿಗ್ರಹವನ್ನು ಪುರಾತನ ಕಟ್ಟಡದೊಳಗೆ ಹಿಂದೂಗಳು ಇರಿಸಿದ್ದರು. ಇದು ಉದ್ವಿಗ್ನತೆಯನ್ನು ಉಂಟು ಮಾಡಿತ್ತು. ಬಳಿಕ ಪೊಲೀಸರು ಕಟ್ಟಡದ ಬಳಿ ಸರ್ಪಗಾವಲು ಹಾಕಿ ವಿಗ್ರಹ ತೆರವುಗೊಳಿಸಿದ್ದರು.