ನ್ಯೂಸ್

ಫೇಸ್‌ಬುಕ್‌ ನಲ್ಲಿ ಬೇಕಾಬಿಟ್ಟಿ ಬರೆಯೋರಿಗೆ ‘ಹೈ’ ಕ್ಲಾಸ್! : ಏಕವಚನ ಬಳಕೆ ಮಾಡಿದ ಕ್ರಮಕ್ಕೆ ತೀವ್ರ ಅಸಮಾಧಾನ

ಪವಿತ್ರಾ ಕುಂದಾಪುರ ಬೆಂಗಳೂರು

ನ್ಯಾಯಮೂರ್ತಿಗಳ ಬಗ್ಗೆ ಫೇಸ್‌ಬುಕ್‌ ನಲ್ಲಿ ಇಷ್ಟಿಷ್ಟುದ್ದ ಬರೆಯುತ್ತೀರಿ? ಹೌದೋ ಅಲ್ಲವೋ? ಏಕವಚನವನ್ನೂ ಬಳಕೆ ಮಾಡಿದ್ದೀರಿ? ಸುಪ್ರೀಂ ಕೋರ್ಟನ್ನೂ ಬಿಟ್ಟಿಲ್ಲ... ಜಡ್ಜ್ ವಿರುದ್ಧ ಬಳಕೆ ಮಾಡಿರುವ ಭಾಷೆಯನ್ನು ನೋಡಿ ‘ಇಟ್ಸ್ ಬಿಲೋ ದಿ ಬೆಲ್ಟ್...! ಇದು ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಮೂರ್ತಿಗಳ ವಿರುದ್ಧ ಮನಬಂದಂತೆ ಟೀಕೆಗಳನ್ನು ವ್ಯಕ್ತಪಡಿಸುತ್ತಿರುವವರ ಬಗ್ಗೆ ಹೈಕೋರ್ಟ್ ಅಸಮಾಧಾನ ಹೊರಹಾಕಿದ ಪರಿ.

ನ್ಯಾಯಾಂಗದ ವಿಷಯಗಳ ಕುರಿತು ಸಾಮಾಜಿಕ ವೇದಿಕೆಗಳ ದುರ್ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಹಲವು ಬಾರಿ ಕಳವಳ ವ್ಯಕ್ತಪಡಿಸಿರುವ ಬೆನ್ನಲ್ಲೇ ಇದೀಗ ಜಡ್ಜ್‌ಗಳ ಕುರಿತು ಬೇಕಾಬಿಟ್ಟಿ ಬರೆಯುವವರ ವಿರುದ್ಧ ಕರ್ನಾಟಕ ಹೈಕೋರ್ಟ್ ಕೂಡ ಕೆಂಡಾಮಂಡಲವಾಗಿದೆ. ಫೇಸ್‌ಬುಕ್‌ ನಲ್ಲಿ ಉದ್ದುದ್ದ ಬರೆಯುವವರಿಗೆ ನ್ಯಾಯಪೀಠ ಎಚ್ಚರಿಕೆ ಕೊಟ್ಟಿದೆ.

ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ. ಶ್ರೀಷಾನಂದ, ಇತ್ತೀಚೆಗೆ ದೇಶ ತೊರೆಯುವ ಸಂಬಂಧ ಪಾಕಿಸ್ತಾನದ ಪ್ರಜೆಗಳು ಸಲ್ಲಿಸಿದ್ದ ಅರ್ಜಿ ವಿಚಾರವಾಗಿ ಸುಪ್ರೀಂ ಕೋರ್ಟ್ ಹೊರಡಿಸಿದ ತೀರ್ಪನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಜಡ್ಜ್ ವಿರುದ್ಧ ಬಳಕೆ ಮಾಡಿದ ಭಾಷೆಯ ಬಗ್ಗೆ ಪ್ರಸ್ತಾಪಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್ 482 ಅನ್ವಯ ಜಾಮೀನು ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಆತನ ಪರ ವಕೀಲರು ವಾದ ಮಂಡಿಸಿ, ಪೊಲೀಸರು ಬಂಧನಕ್ಕೆ ಯಾವುದೇ ಕಾರಣ ನೀಡಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಈ ಪ್ರಕರಣದಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 482 ಅನ್ವಯವೇ ಆಗುವುದಿಲ್ಲ. ಬಂಧನಕ್ಕೆ ಕಾರಣ ಕೊಟ್ಟಿಲ್ಲವೆಂದರೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಯಾಕೆ ಹೋದಿರಿ? ರಿಮ್ಯಾಂಡ್ ಕೊಟ್ಟಾಗ ನ್ಯಾಯಪೀಠಕ್ಕೆ ತಿಳಿಸಬೇಕಲ್ಲವೇ? ನಾನೇನು ಮಾಡಿಲ್ಲ. ನಮಗೇನು ಗೊತ್ತಿಲ್ಲ ಎಂದು ಹೇಳಬೇಕಲ್ಲವೇ? ನೋಟಿಸ್ ಕೊಟ್ಟಾಗ ಅವರ ತಂದೆ-ತಾಯಿ ಸಹಿ ಹಾಕಿದ್ದಾರಲ್ಲ. ಅವರಿಗೆ ಗೊತ್ತಿಲ್ಲವೇ? ಮುಖ್ಯದ್ವಾರದಲ್ಲಿ ಬರುವುದನ್ನು ಬಿಟ್ಟು ಕಳ್ಳದಾರಿಯಲ್ಲೇ ಬರುವುದು ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.

ಸೆಕ್ಷನ್ 482 ಇದಕ್ಕೆ ಅನ್ವಯಿಸಲ್ಲ. ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದೀರಿ, ಅದನ್ನು ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಬಿಎನ್‌ಎಸ್‌ಎಸ್ ಸೆಕ್ಷನ್ 439 ಅನ್ವಯ ಅರ್ಜಿ ಸಲ್ಲಿಸಿ ಕಾಯಬೇಕು. ಅದನ್ನು ಬಿಟ್ಟು ಸೆಕ್ಷನ್ 482 ಅನ್ವಯ ಅರ್ಜಿ ಸಲ್ಲಿಸಿ ಅಕ್ರಮ ಬಂಧನ ಎಂದು ಬಂದಿದ್ದೀರಿ. ಬಿಎನ್‌ಎಸ್‌ಎಸ್ ಸೆಕ್ಷನ್ 482, 483 ತೆಗೆದುಬಿಡೋಣ. ಬಿಎನ್‌ಎಸ್‌ಎಸ್ 428 ಮಾತ್ರ ಇಟ್ಟುಕೊಳ್ಳೋಣ. ಭವಿಷ್ಯದಲ್ಲಿ ನಿಮ್ಮ ಮನೆ ಮಂದಿಯೂ ಯಾರಿಂದಲೋ ತೊಂದರೆ ಅನುಭವಿಸಬಹುದು. ಆತನೂ ಏನೋ ನೆಪ ನೀಡಿದ್ದಾನೆಂದು ಆತನನ್ನು ಬಂಧನಮುಕ್ತಗೊಳಿಸಿದರೆ ನೀವು ಸುಮ್ಮನೀರುತ್ತೀರಾ? ಯಾಕೆ ಅಡ್ಡದಾರಿ ವಿಧಾನ ಬಳಸಿ ನ್ಯಾಯಾಲಯದ ದಾರಿ ತಪ್ಪಿಸಲು ಯತ್ನಿಸುತ್ತೀರಿ ಎಂದು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿದೆ.

ಕಾನೂನು ನಿಮಗೆ ರಕ್ಷಣೆ ಕೊಡುತ್ತೆ

ಬಿಎನ್‌ಎಸ್‌ಎಸ್ ಸೆಕ್ಷನ್ 482ಗೆ ಕೂರಿಸಿದರೆ ಅಂತಹ ಕೇಸ್‌ಗಳನ್ನು ಎತ್ತಿಕೊಳ್ಳುತ್ತೇನೆ. ನ್ಯಾಯಮೂರ್ತಿಗಳನ್ನು ಏಕವಚನದಲ್ಲಿ ಬರೆದಿದ್ದೀರಿ. ಸುಪ್ರೀಂ ಕೋರ್ಟನ್ನೂ ಬಿಟ್ಟಿಲ್ಲ. ಜಡ್ಜ್ ವಿರುದ್ಧ ಬಳಕೆ ಮಾಡಿದ ಭಾಷೆ ನೋಡಿ ‘ಇಟ್ಸ್ ಬಿಲೋ ದಿ ಬೆಲ್ಟ್..’ ಇದೆಲ್ಲವೂ 482 ಪರಿಣಾಮ. ನೀವು ಕಾನೂನನ್ನು ಸರಿಯಾಗಿ ಪಾಲನೆ ಮಾಡಿದರೆ, ಕಾನೂನು ನಿಮಗೆ ರಕ್ಷಣೆ ಒದಗಿಸುತ್ತದೆ. ಮೊದಲು ಅದನ್ನು ಅರ್ಥೈಸಿಕೊಳ್ಳಿ ಎಂದು ನ್ಯಾಯಪೀಠ ತಾಕೀತು ಮಾಡಿದೆ.

ಕಾರಣ ಕೊಡದಿದ್ದರಷ್ಟೇ ಬೇಲ್

ರಿಮ್ಯಾಂಡ್ ಅರ್ಜಿಯಲ್ಲಿ ಬಂಧನಕ್ಕೆ ಕಾರಣಗಳನ್ನು ಉಲ್ಲೇಖಿಸದಿದ್ದರೆ, ವ್ಯಕ್ತಿಯನ್ನು ಯಾವ ತಪ್ಪಿಗೆ ಬಂಧನಕ್ಕೊಳಪಡಿಸಲಾಗುತ್ತಿದೆ ಎಂದು ವಿವರಣೆ ನೀಡದಿದ್ದಾಗ ಮಾತ್ರ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್ ತನ್ನ ಹಲವು ತೀರ್ಪಿನಲ್ಲಿ ಹೇಳಿದೆ. ಅಡ್ಡದಾರಿಯಲ್ಲಿ ಬರುವುದನ್ನು ಬಿಡಬೇಕು ಎಂದು ನ್ಯಾಯಪೀಠ ಕಿವಿಮಾತು ಹೇಳಿದೆ.