ಬೆಂಗಳೂರು: ನಿಷೇಧದ ಹೊರತಾಗಿಯೂ ಮಲಗುಂಡಿ ಸ್ವಚ್ಛತೆಗೆ ಮಾನವರನ್ನು ಬಳಸುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಮನುಷ್ಯರ ಬಳಕೆ ಮಾಡುವುದನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
ಆಧುನಿಕ ಯಂತ್ರೋಪಕರಣಗಳಿದ್ದರೂ ಮನುಷ್ಯರನ್ನು ಬಳಕೆ ಮಾಡುತ್ತಿರುವ ಕ್ರಮ ಪ್ರಶ್ನಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು)ನ ಕರ್ನಾಟಕ ಘಟಕ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ, ಸರ್ಕಾರಕ್ಕೆ ಮೌಖಿಕವಾಗಿ ತಾಕೀತು ಮಾಡಿದೆ.
ಕೆಲಕಾಲ ಅರ್ಜಿ ಆಲಿಸಿದ ನ್ಯಾಯಪೀಠ ರಾಜ್ಯದೆಲ್ಲೆಡೆ ಒಳಚರಂಡಿ ಮತ್ತು ಸಂಸ್ಕರಣಾ ಘಟಕಗಳನ್ನು ಯಂತ್ರಗಳ ಮೂಲಕ ಸ್ವಚ್ಛಗೊಳಿಸಬೇಕು. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಮನುಷ್ಯರಿಂದ ಮಲಗುಂಡಿಗಳ ಸ್ವಚ್ಛಗೊಳಿಸುವ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಣಾಮ ಮಾಡಬೇಕು ಎಂದು ನುಡಿದಿದೆ.
ಯಂತ್ರೋಪಕರಣಗಳ ಬಳಕೆಗೆ ಹೆಚ್ಚು ವೆಚ್ಚ ತಗುಲಲಿದೆ ಎಂಬ ನೆಪವೊಡ್ಡಿ ಮನಷ್ಯರನ್ನು ಬಳಸುವುದು ಸರಿಯಾದ ಕ್ರಮವಲ್ಲ. ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿಗಳು ಒಟ್ಟಾಗಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕ್ರಮ ವಹಿಸಬೇಕು ಎಂದಿರುವ ಪೀಠ ರಾಜ್ಯದಲ್ಲಿ ಎಲ್ಲ ಕೈಗಾರಿಕಾ ಹಾಗೂ ಜನವಸತಿ ಪ್ರದೇಶಗಳ ಎಸ್ಟಿಪಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ಸಮಗ್ರ ಮಾಹಿತಿ ನೀಡುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.