ನ್ಯೂಸ್

ಹೈಟೆಕ್ ವೇಶ್ಯಾವಾಟಿಕೆ ದಂಧೆ, ವಿದೇಶಿ ಮಹಿಳೆ ಸೇರಿ 9 ಮಂದಿ ಸೆರೆ

ಬೆಂಗಳೂರು: ಟೆಲಿಗ್ರಾಂ ಮತ್ತು ವಾಟ್ಸ್‌ಆ್ಯಪ್ ಮೂಲಕ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಿದೇಶಿ ಮಹಿಳೆ ಸೇರಿ 9 ಮಂದಿಯನ್ನು ಪೂರ್ವವಿಭಾಗದ ಪೊಲೀಸರು ಬಂಧಿಸಿದ್ದಾರೆ.


ಪುಲಕೇಶಿನಗರದಲ್ಲಿ ವಾಸವಾಗಿರುವ ಟರ್ಕಿ ದೇಶದ ಮಹಿಳೆ ಬಿಯೋನಾಜ್ (೩೯), ಆಕೆಯ ಸಹಚರರಾದ ಒಡಿಶಾ ಮೂಲದ ಜಿತೇಂದ್ರ ಸಾಹೂ(೪೩), ಪ್ರಮೋದ್ ಕುಮಾರ್(೩೧), ಮನೋಜ್ ದಾಸ್(೨೩) ಅಸ್ಸಾಂ ಮೂಲದ ಸೌಮಿತ್ರ ಚಂದ್(೨೬), ಮಹಾಲಕ್ಷ್ಮಿ ಲೇಔಟ್ ನಿವಾಸಿ ಪ್ರಕಾಶ್(೩೨), ಲಗ್ಗೆರೆಯ ವೇಶಾಕ್(೨೨), ಪರಪ್ಪನ ಅಗ್ರಹಾರ ನಿವಾಸಿ ಗೋವಿಂದರಾಜ್(೩೪) ಮತ್ತು ನಂದಿನಿಲೇಔಟ್ ನಿವಾಸಿ ಅಕ್ಷಯ್(೩೨) ಬಂಧಿತರು.
ಆರೋಪಿಗಳ ವಶದಲ್ಲಿದ್ದ ೭ ವಿದೇಶಿ ಮಹಿಳೆಯರು ಸೇರಿ ಒಟ್ಟು ೯ ಮಂದಿಯನ್ನು ರಕ್ಷಿಸಲಾಗಿದೆ.


೨೦೨೩ರ ಡಿ.೧೯ರಂದು ಹಲಸೂರು ಠಾಣೆ ವ್ಯಾಪ್ತಿಯ ದೊಮ್ಮಲೂರಿನಲ್ಲಿರುವ ದಿ ಲೀಲಾ ಪಾರ್ಕ್ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಹಲಸೂರು ಠಾಣೆ ಇನ್‌ಸ್ಪೆಕ್ಟರ್ ದಾಳಿ ನಡೆಸಿ ಜಿತೇಂದ್ರ ಸಾಹೂ, ಪ್ರಮೋದ್ ಕುಮಾರ್, ಸೌಮಿತ್ರ ಚಂದ್, ಮನೋಜ್‌ನನ್ನು ಬಂಧಿಸಿದ್ದರು. ಬಳಿಕ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಬೈಯಪ್ಪನಹಳ್ಳಿ ಠಾಣೆಗೆ ವರ್ಗಾಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ವೈಶಾಕ್ ಎಂಬಾತನನ್ನು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೇಟಿಂಗ್ ಕ್ಲಬ್ ಎಂಬ ಗ್ರೂಪ್ ಮಾಡಿದ್ದ:
ವಿಚಾರಣೆ ವೇಳೆ ಆರೋಪಿ ವೈಶಾಕ್‌ನ ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂನಲ್ಲಿ ‘ಬೆಂಗಳೂರು ಡೇಟಿಂಗ್ ಕ್ಲಬ್’ ಎಂಬ ಗ್ರೂಪ್ ಮೂಲಕ ಗ್ರಾಹಕರನ್ನು ಸೆಳೆದು ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ವಿದೇಶಿ ಮಹಿಳೆಯರು ಹಾಗೂ ನೆರೆ ರಾಜ್ಯದ ಮಹಿಳೆಯರನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿರುವುದು ಪತ್ತೆಯಾಗಿತ್ತು. ಬಳಿಕ ಈ ಮಹಿಳೆಯರ ವಿಚಾರಣೆಯಲ್ಲಿ ಬಿಯೋನಾಜ್ ಸ್ವಾಮಿಗೌಡ ದಂಧೆಯ ರೂವಾರಿ ಎಂಬುದು ಖಾತ್ರಿಯಾಗಿ, ಆಕೆಯನ್ನು ಬಂಧಿಸಲಾಗಿದೆ. ಬಳಿಕ ಈಕೆಯ ವಶದಲ್ಲಿದ್ದ ಖಜಕಿಸ್ತಾನ, ಉಜಕಿಸ್ತಾನ, ಬಾಂಗ್ಲಾದೇಶ, ಉಜ್‌ಬೇಕಿಸ್ತಾನ ದೇಶಗಳ ೭ ಮಂದಿ ವಿದೇಶಿ ಮಹಿಳೆಯರನ್ನು ರಕ್ಷಿಸಿ, ಎಲ್ಲರನ್ನು ವಿದೇಶಿ ಪ್ರಾದೇಶಿಕ ನೊಂದಣಿ ಕಚೇರಿ(ಎಫ್‌ಆರ್‌ಆರ್‌ಒ) ಅಧಿಕಾರಿಗಳ ಮುಂದೆ ಹಾಜರು ಪಡಿಸಲಾಗಿದೆ. ಈ ಪೈಕಿ ಇಬ್ಬರ ವಿರುದ್ಧ ಪಾಸ್‌ಪೋರ್ಟ್ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಇತರೆ ಇಬ್ಬರಿಗೆ ನೋಟಿಸ್ ನೀಡಿದ್ದು, ಮಹಿಳೆಯರು ಸದ್ಯದಲ್ಲೇ ತಮ್ಮ ದೇಶಕ್ಕೆ ತೆರಳಿದ್ದಾರೆ. ಇನ್ನು ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಮೂಲದ ಮಹಿಳೆಯರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.