ಮಾಲೂರು: ಮಾಲೂರಿನಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಸರ್ಕಾರವು 21.50 ಕೋಟಿ ರೂ. ಮಂಜೂರು ಮಾಡಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ನಗರದ ಬಸ್ ನಿಲ್ದಾಣಕ್ಕೆ ಭಾನುವಾರ ಭೇಟಿ ಪರಿಶೀಲಿಸಿ ಅಂಗಡಿ ಮಾಲೀಕರೊಂದಿಗೆ ಮಾತನಾಡಿದ ಅವರು, ಸೋಮವಾರದಿಂದ ಕಟ್ಟಡ ತೆರವುಗೊಳಿಸಲಾಗುತ್ತದೆ. ಅಂಗಡಿ ಮಾಲೀಕರು, ಸಾರ್ವಜನಿಕರು ಒಂದು ವರ್ಷ ಸಹಕರಿಸಿದರೆ ಕಾಮಗಾರಿ ಪೂರ್ಣಗೊಳಿಸಿ ನಿರ್ಮಾಣ ಮಾಡುವ ಅಂಗಡಿಗಳನ್ನು ಹಳೇ ಮಾಲೀಕರಿಗೆ ಹರಾಜು ಮೂಲಕ ನೀಡಲಾಗುವುದು ಎಂದು ತಿಳಿಸಿದರು.
ಹಲವು ದಶಕಗಳ ಹಿಂದೆ ನಿರ್ಮಾಣ ಮಾಡಿದ್ದ ಬಸ್ ನಿಲ್ದಾಣದಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣ ನಿರ್ವಹಿಸಲಾಗುತ್ತಿತ್ತು. ಕಾಲ ಬದಲಾದಂತೆ ಜನ ಸಂಖ್ಯೆಯು ಜಾಸ್ತಿಯಾಗುತ್ತಿದ್ದು, ಬಹಳಷ್ಟು ಬದಲಾವಣೆಗಳು ಆಗಿದ್ದು, ಅದಕ್ಕೆ ತಕ್ಕಂತೆ ಬಸ್ ನಿಲ್ದಾಣ ನಿರ್ಮಾಣವಾಗಬೇಕಾಗಿದೆ ಎಂದು ತಿಳಿಸಿದರು.
ಅ.31ರಂದು ಮಾಲೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ಅಂದಿನ ದಿನ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ನಗರದ ಜೂನಿಯರ್ ಕಾಲೇಜು ಮುಂಭಾಗಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಕೋರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಾಪುರ ಕೃಷ್ಣಪ್ಪ, ಕಸಬಾ ದರಖಾಸ್ತು ಸಮಿತಿ ಅಧ್ಯಕ್ಷ ಆನೆಪುರ ಹನುಮಂತಪ್ಪ, ಇಂಜಿನಿಯರ್ ಪೂರ್ಣಿಮಾ, ಡಿಪ್ಪೊ ಮ್ಯಾನೇಜರ್ ಗೋಪಿ, ಸರ್ಕಲ್ ಇನ್ಸ್ಪೆಕ್ಟರ್ ವಸಂತ್, ಪುರಸಭೆ ಸಿಬ್ಬಂದಿ ಶ್ರೀನಿವಾಸ್, ನೋಡಲ್ ನಾಗರಾಜ್, ಗುತ್ತಿಗೆದಾರ ಓಬಲ ರೆಡ್ಡಿ ಇದ್ದರು.
* ಖಾಸಗಿ ಡೇರಿ ಬೋರ್ಡ್ ಕಂಡು ಗರಂ
ಬಸ್ ನಿಲ್ದಾಣದಲ್ಲಿನ ಕಾಂಡಿಮೆಂಟ್ಸ್ ಮಾಲೀಕನೋರ್ವ ಖಾಸಗಿ ಡೇರಿ ಬೋರ್ಡ್ ಅಳವಡಿಸಿದ್ದನ್ನು ಕಂಡು ಗರಂ ಆದ ಶಾಸಕ ಕೆ.ವೈ.ನಂಜೇಗೌಡ, ನಂದಿನಿ ಬ್ರಾ$್ಯಂಡ್ ನಮ್ಮ ರಾಜ್ಯದ್ದು. ನಾನು ಕೋಮುಲ್ ನಿರ್ದೇಶಕ, ಅಧ್ಯಕ್ಷ ಇದ್ದೇನೆ. ನಂದಿನಿ ಬೋರ್ಡ್ ಅಳವಡಿಕೆ ಮಾಡುವುದು ಬಿಟ್ಟು ಖಾಸಗಿ ಡೇರಿ ಬೋರ್ಡ್ ಹಾಕುವ ಅನಿವಾರ್ಯ ಏನಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.