ಕುಟುಂಬದ ಕುಲದೇವತೆ, ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿ ದರ್ಶನಕ್ಕಾಗಿ ಬೆಳಗಾವಿಯ ಯಲ್ಲಮ್ಮ ಗುಡ್ಡಕ್ಕೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ದಂಪತಿಯನ್ನು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಸತ್ಕರಿಸಿದರು. ಇದೇ ವೇಳೆ, ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ. ದೀಪಾವಳಿ ಎಲ್ಲರ ಬಾಳಲ್ಲೂ ಬೆಳಕು ಮೂಡಿಸಲಿ ಎಂದು ಸಿಎಂ ಆಶಿಸಿದರು. 
ನ್ಯೂಸ್

ವರಿಷ್ಠರಿಗೆ ಸಮಾಧಾನ ತರದ ಫಲಿತಾಂಶ: ಉಪಸಮರ ಬಗ್ಗೆ ದೆಹಲಿ ನಾಯಕರ ಮೌನ; ಮುಖ್ಯಮಂತ್ರಿ, ರಾಜ್ಯ ನಾಯಕರಿಗೆ ಸಂದಿಗ್ಧ ಪರಿಸ್ಥಿತಿ..

rashmirhebbur

ಬೆಂಗಳೂರು: ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಒಂದರಲ್ಲಿ ಗೆದ್ದು, ಮತ್ತೊಂದರಲ್ಲಿ ಸೋತಿರುವುದು ಬಿಜೆಪಿ ವರಿಷ್ಠರಿಗೆ ಸಮಾಧಾನ ತಂದಂತಿಲ್ಲ. ಅಸ್ಸಾಂ, ಮಧ್ಯಪ್ರದೇಶ, ತೆಲಂಗಾಣದಲ್ಲಿ ಬಿಜೆಪಿ ಗೆಲುವು, ಬಿಹಾರದಲ್ಲಿ ಎನ್​ಡಿಎ ಮುನ್ನಡೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹರ್ಷ ವ್ಯಕ್ತಪಡಿಸಿ, ಮೆಚ್ಚುಗೆ ಸೂಚಿಸಿದ್ದಾರೆ. ಬಿಜೆಪಿ ಆಡಳಿತವಿರುವ ಕರ್ನಾಟಕದ ಉಪ ಚುನಾವಣೆ ಫಲಿತಾಂಶದ ಬಗ್ಗೆ ತುಟಿ ಬಿಚ್ಚಿಲ್ಲ. ತೃಪ್ತಿ ತಂದಿಲ್ಲವೆಂಬ

ಸೂಚ್ಯ ಸಂದೇಶವಿದು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳುತ್ತಾರೆ. ಹಾಗೆಯೇ ಮುಂದಿನ ಚುನಾವಣೆಗೆ ಸಾಮೂಹಿಕ ನಾಯಕತ್ವದ ವಿಷಯ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದ್ದು, ವರಿಷ್ಠರ ಗಮನಸೆಳೆಯುವ ತಂತ್ರಗಾರಿಕೆ ಎಂದು ಮೂಲಗಳು ಹೇಳಿವೆ.

ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುತ್ತೇವೆ. ಹಾನಗಲ್ ಹಿನ್ನಡೆಗೆ ಎಡವಿದ್ದೆಲ್ಲಿ ಎಂದು ಪತ್ತೆ ಹಚ್ಚಿ, ಸರಿಪಡಿಸುತ್ತೇವೆ ಎಂದು ರಾಜ್ಯ ನಾಯಕರು ಪ್ರತಿಕ್ರಿಯಿಸಿದ್ದಾರೆ. ಆದರೆ ದೆಹಲಿ ನಾಯಕರ ನಿಲುವೇನೆಂದು ತಿಳಿಯದ ಗೊಂದಲಕ್ಕೆ ಸಿಲುಕಿದ್ದಾರೆ. ಕರ್ನಾಟಕದ ಬಗ್ಗೆ ವರಿಷ್ಠರ ಮೌನ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯ ನಾಯಕರನ್ನು ಸಂದಿಗ್ಧಕ್ಕೆ ಸಿಲುಕಿದೆ. ಹಾನಗಲ್ ಮತ್ತು ಸಿಂದಗಿ ಫಲಿತಾಂಶದ ಮಾಹಿತಿ ದೆಹಲಿಗೆ ನಾಯಕರ ಕೈಸೇರಿದೆ. ಜತೆಗೆ ತಮ್ಮದೇ ಮೂಲದಿಂದ ವಸ್ತುಸ್ಥಿತಿ ವಿವರ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಘಟಿತ ಪ್ರಯತ್ನ, ಪರಿಣಾಮಕಾರಿ ಕ್ಷೇತ್ರ ಕಾರ್ಯ, ತಂಡ ಸ್ಪೂರ್ತಿಯಿಂದ ಕೆಲಸ, ಎದುರಾಳಿಗಳ ದೌರ್ಬಲ್ಯವು ಸಿಂದಗಿಯಲ್ಲಿ ಅತ್ಯಧಿಕ ಅಂತರದ ಗೆಲುವು ತಂದು ಕೊಟ್ಟಿದೆ. ಬಿಜೆಪಿ ವಶದಲ್ಲಿದ್ದ ಹಾನಗಲ್ ಸೋಲಿಗೆ ಬಾಹ್ಯ ಹಾಗೂ ಆಂತರಿಕ ಸಮಸ್ಯೆಗಳೆರಡು ಕಾರಣ ಎಂಬ ವರದಿ ಪಕ್ಷದ ರಾಜ್ಯ ಉಸ್ತುವಾರಿಗೆ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಆದಿಯಾಗಿ ಸಚಿವ ಸಂಪುಟದ ಅರ್ಧ ಡಜನ್​ಗೂ ಹೆಚ್ಚು ಸದಸ್ಯರು ಕ್ಷೇತ್ರದಲ್ಲಿ ಬಿಡಾರ ಹೂಡಿದ್ದರೂ ಗೆಲ್ಲಲಾಗಿಲ್ಲ. ಆತ್ಮಾವಲೋಕನ ಸಭೆಯಲ್ಲಿ ನೈಜ ಕಾರಣಗಳನ್ನು ತಿಳಿದುಕೊಂಡು ಪರಿಹಾರ ಕಂಡುಕೊಂಡರೆ ಮುಂದಿನ ಚುನಾವಣೆಗಳಿಗೆ ಮರುಕಳಿಸದು ಎಂದು ಹೇಳಲಾಗುತ್ತಿದೆ. ಬೊಮ್ಮಾಯಿಗೆ ತವರು ಜಿಲ್ಲೆ ಶಾಕ್ ನೀಡಿದ್ದರಲ್ಲಿ ಪಕ್ಷದೊಳಗಿನ ಕೆಲ ಶಕ್ತಿಗಳು ವ್ಯವಸ್ಥಿತವಾಗಿ ಕೆಲಸ ಮಾಡಿವೆ ಎಂಬ ಅನುಮಾನ ವ್ಯಕ್ತವಾಗಿದೆ.

ಸಂಘಟನಾ ಪ್ರವಾಸಕ್ಕೆ ಬಿಎಸ್​ವೈ ಸಜ್ಜು: ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಘಟನೆ ಬಲವರ್ಧನೆಗಾಗಿ ರಾಜ್ಯ ಪ್ರವಾಸ ಮಾಡುವೆ ಎಂದಿದ್ದಾರೆ. ಯಡಿಯೂರಪ್ಪ ಅನುಪಸ್ಥಿತಿಗೆ ಪಕ್ಷ ಬೆಲೆ ತೆತ್ತಾಗಿದೆ. 2023ರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಬಿಎಸ್​ವೈ ಪ್ರವಾಸ ಸುಸೂತ್ರವಾಗಿ ನಡೆಯಬೇಕು. ವಿವಿಧ ಕಾರಣಗಳನ್ನು ನೀಡಿ ಬಿಎಸ್​ವೈ ಪ್ರವಾಸ ಮುಂದಕ್ಕೆ ಹಾಕುತ್ತಲೇ ಬಂದಿರುವುದನ್ನು ಜನ-ಸಾಮಾನ್ಯರು ಗ್ರಹಿಸಿದ್ದಾರೆ. ಬದಲಾದ ಈ ವಿಚಾರದಲ್ಲಿ ವರಿಷ್ಠರು ತಳೆಯಲಿರುವ ನಿಲುವು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.

ಅರುಣ್​ಸಿಂಗ್ ಸಭೆ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ಸಿಂಗ್ ಅಧ್ಯಕ್ಷತೆಯಲ್ಲಿ ನ.8ರಂದು ಬಿಜೆಪಿ ಆತ್ಮಾವಲೋಕನ ಸಭೆ ನಡೆಯುವ ಸಾಧ್ಯತೆಗಳಿವೆ. ನ.9ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು 8ರಂದೇ ಬೆಂಗಳೂರಿಗೆ ಬರುತ್ತಿದ್ದಾರೆ. ಅಂದು ರಾಜ್ಯ ಮುಖಂಡರ ಜತೆ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಸೋಲಿಗೆ ಎಲ್ಲರೂ ಹೊಣೆ

ಹುಬ್ಬಳ್ಳಿ: ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಸೋಲಿನ ಹೊಣೆಯನ್ನು ಎಲ್ಲರೂ ಹೊರುತ್ತೇವೆ. ನಾನು ತಂಡದ ಮುಖ್ಯಸ್ಥ ಇರಬಹುದು. ಆದರೂ ಸಾಮೂಹಿಕ ನಾಯಕತ್ವದಲ್ಲೆ ಚುನಾವಣೆ ಮಾಡುತ್ತೇವೆ ಎಂದು ಕೇಂದ್ರ ನಾಯಕ ಅಮಿತ್ ಷಾ ಈ ಹಿಂದೆ ನನ್ನ ಹೆಸರು ಪ್ರಸ್ತಾಪಿಸಿದಾಗಲೇ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಿ.ಎಂ.ಉದಾಸಿ ಇದ್ದಾಗಲೂ ಹಾನಗಲ್​ನಲ್ಲಿ ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್ ಗೆದ್ದು ಬಂದಿದ್ದವು. ಆದಾಗ್ಯೂ ಬಿಜೆಪಿ ಸೋಲಿನ ಪರಾಮರ್ಶೆ ಮಾಡಲಾಗುವುದು ಎಂದರು. ಬಿಜೆಪಿ ದುರಾಡಳಿತದ ಪ್ರಶ್ನೆಯೇ ಇಲ್ಲ. ದುರಾಡಳಿತ ಇದ್ದರೆ ಸಿಂದಗಿ ಜನರು ಯಾಕೆ ಹೆಚ್ಚಿನ ಮತ ನೀಡುತ್ತಿದ್ದರು ಎಂದು ಸಿಎಂ ಪ್ರಶ್ನಿಸಿದರು.

ಹಾನಗಲ್​ನಲ್ಲಿ ಬಿಜೆಪಿ ಸೋಲಿಗೆ ಅನೇಕ ಕಾರಣಗಳಿವೆ. ಅದರ ಬಗ್ಗೆ ನಾವು ಕುಳಿತು ಚರ್ಚೆ ಮಾಡುತ್ತೇವೆ. ಈ ಸೋಲಿನಿಂದ ಸಿಎಂ ವರ್ಚಸ್ಸಿಗೆ ಧಕ್ಕೆಯಾಗಿದೆ ಎನ್ನುವ ಅಭಿಪ್ರಾಯ ಸರಿಯಲ್ಲ. ಒಂದು ಕ್ಷೇತ್ರದಲ್ಲಿ ಗೆದ್ದು, ಒಂದರಲ್ಲಿ ಸೋತಿದ್ದೇವೆ. ಸಾಮೂಹಿಕವಾಗಿ ಸೋಲಿನ ಜವಾಬ್ದಾರಿ ತೆಗೆದುಕೊಂಡಿದ್ದೇವೆ.| ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ

ಹಾನಗಲ್ ಜಯ ಯಾರದು?

ಬೆಂಗಳೂರು: ಹಾನಗಲ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಾರಣ ಯಾರು ಎಂಬುದು ಇದೀಗ ಬಹು ರ್ಚಚಿತ ವಿಷಯವಾಗಿದೆ. ಶ್ರೀನಿವಾಸ್ ಮಾನೆ ಗೆಲುವು ಕಾಂಗ್ರೆಸ್ ಗೆಲುವು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ರಿಂದ ಹಿಡಿದು ಎಲ್ಲ ನಾಯಕರು ಹೇಳಿಕೊಳ್ಳುತ್ತಾ ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪುಗೊಂಡಿದೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ ಇದನ್ನು ಒಪ್ಪದ ಬಿಜೆಪಿ ನಾಯಕರು ಅಲ್ಲಿ ಗೆದ್ದಿರುವುದು ಶ್ರೀನಿವಾಸ್ ಮಾನೆ ಮಾತ್ರ. ಅದು ನಿಜವಾಗಿಯೂ ಕಾಂಗ್ರೆಸ್ ಗೆಲುವಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕೋವಿಡ್ ಸಂದರ್ಭ ಮಾಡಿರುವ ಜನಸೇವೆ ಶ್ರೀನಿವಾಸ್ ಮಾನೆ ಗೆಲ್ಲಿಸಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇದಕ್ಕೆ ದನಿಗೂಡಿಸಿರುವ ಕೆ.ಎಸ್.ಈಶ್ವರಪ್ಪ ಸಹ ಮಾನೆ ಅವರ ವ್ಯಕ್ತಿತ್ವ ಮತ್ತು ಸೇವೆ ಅವರನ್ನು ಗೆಲ್ಲಿಸಿದೆ ಎಂದಿದ್ದಾರೆ. ಗೆಲುವಿನ ಸಂಭ್ರಮವನ್ನು ಕಾಂಗ್ರೆಸ್​ಗೆ ನೀಡಲು ತಯಾರಿಲ್ಲದ ಬಿಜೆಪಿ ನಾಯಕರು ಮಾನೆ ಪರವಾಗಿಯೇ ಬ್ಯಾಟಿಂಗ್ ಮಾಡುತ್ತಿರುವುದರ ಹಿಂದೆ ರಾಜಕೀಯವೂ ಮೇಳೈಸಿದೆ. ಕಾಂಗ್ರೆಸ್​ಗೆ ಗೆಲುವಿನ ಕಿರೀಟ ನೀಡಿದರೆ, ಅವರು ಇನ್ನಷ್ಟು ಅಬ್ಬರಿಸಬಹುದು ಎನ್ನುವ ಕಾರಣಕ್ಕೆ ಆ ಪಕ್ಷದ ನಾಯಕರ ಜೋಷ್​ಗೆ ಬ್ರೇಕ್ ಹಾಕುವ ಪ್ರಯತ್ನವನ್ನು ಫಲಿತಾಂಶ ಪ್ರಕಟವಾದ ಕ್ಷಣದಿಂದಲೂ ಮಾಡುತ್ತಲೇ ಇದ್ದಾರೆ.

ರಾಷ್ಟ್ರೀಯ ಪಕ್ಷಗಳಲ್ಲಿ ಸಾಮೂಹಿಕ ನಾಯಕತ್ವ ಜಿಜ್ಞಾಸೆ

ಬೆಂಗಳೂರು: ಉಪಸಮರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್​ನಲ್ಲಿ ನಾಯಕತ್ವ ಕುರಿತಂತೆ ಚರ್ಚೆ ತೆರೆಮರೆಯಲ್ಲಿ ಹೆಚ್ಚಾಗಿದೆ. ಆಡಳಿತರೂಢ ಬಿಜೆಪಿಯಲ್ಲಿ ಸಾಮಾಹಿಕ ನಾಯಕತ್ವದ ಜಪ ಆರಂಭವಾಗಿದೆ. ಪ್ರತಿಪಕ್ಷ ಕಾಂಗ್ರೆಸ್​ನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಂಪಿನ ನಡುವೆ ಗೊಂದಲ ಹೆಚ್ಚಾಗಿದೆ. ಬಸವರಾಜ ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆ ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎಂಬ ಮಾತು ಕೇಳಿಬಂದಿದ್ದವು. ದೆಹಲಿ ನಾಯಕರೇ ಆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸಿಎಂ ತವರು ಕ್ಷೇತ್ರದಲ್ಲಿಯೇ ಬಿಜೆಪಿ ಸೋಲು ಸಾಮೂಹಿಕ ನಾಯಕತ್ವದ ಜಪಗೈಯುವಂತೆ ಮಾಡಿದೆ.

ಬೊಮ್ಮಾಯಿ ಅವರದೇ ನಾಯಕತ್ವ ಎನ್ನುತ್ತಿದ್ದಂತೆ ಪಕ್ಷದಲ್ಲಿನ ಹಿರಿಯರಿಗೆ ಅಸಮಾಧಾನ ಮೂಡಿತ್ತು. ಆದರೀಗ, ಹೈಕಮಾಂಡ್ ಸಹ ಮರುಚಿಂತನೆ ಮಾಡುವ ಅಗತ್ಯ ಉಂಟಾಗಿರುವುದರಿಂದ ಮೂಲ ಬಿಜೆಪಿಗರು ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಾಮಾಹಿಕ ನಾಯಕತ್ವ ಇದ್ದರೆ ಮಾತ್ರ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕಷ್ಟವಾಗುತ್ತದೆ. ಉಪಚುನಾವಣೆ ಫಲಿತಾಂಶ ಸರಿಯಾದ ಸಂದೇಶವನ್ನೇ ರವಾನೆ ಮಾಡಿದೆ ಎಂಬುದು ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ಪಿಸುಮಾತು.

ಕೈನಲ್ಲಿ ಗೊಂದಲ: ಕಾಂಗ್ರೆಸ್​ನಲ್ಲಿ ಮುಂದಿನ ನಾಯಕತ್ವದ ಬಗ್ಗೆ ಗೊಂದಲ, ಕಿತ್ತಾಟ ಇದ್ದೇ ಇದೆ, ಉಪಚುನಾವಣೆ ಫಲಿತಾಂಶದ ನಂತರ ಇದು ಹೆಚ್ಚಾಗಿದೆ. ಯಾರೊಬ್ಬರೂ ಬಹಿರಂಗವಾಗಿ ಯಾವುದೇ ಅಭಿಪ್ರಾಯ ಹೇಳುತ್ತಿಲ್ಲ. ಆದರೆ ಒಳಗೊಳಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣಗಳು ಕತ್ತಿ ಮಸೆಯುವುದು ಹೆಚ್ಚಾಗಿದೆ. ಎರಡು ಬಣಗಳು ಬಹಿರಂಗವಾಗಿಯೇ ಈ ಬಗ್ಗೆ ಹೇಳಿಕೆ ನೀಡುವುದು ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಅದರಲ್ಲೂ ಸಿದ್ದರಾಮಯ್ಯ ಬೆಂಬಲಿಗರು ಮಾತ್ರ ಅವಕಾಶ ಸಿಕ್ಕಾಗಲೆಲ್ಲ ಪ್ರತಿಪಾದಿಸುತ್ತಲೇ ಇದ್ದಾರೆ. ಹಾನಗಲ್ ಗೆಲುವು ಕಾಂಗ್ರೆಸ್​ನಲ್ಲಿ ಉತ್ಸಾಹ ಇಮ್ಮಡಿಸಿರುವುದರಿಂದ ನಾಯಕತ್ವದ ಬಗ್ಗೆ ಪ್ರತಿಪಾದನೆಯೂ ಹೆಚ್ಚಾಗುತ್ತದೆ ಎಂದೇ ಪಕ್ಷದ ಮೂಲಗಳು ಹೇಳುತ್ತವೆ.