ಬೆಂಗಳೂರು: ತಮ್ಮ ಮನೋಜ್ಞ ಅಭಿನಯದ ಮೂಲಕ 50 ವರ್ಷಗಳ ಕಾಲ ಚಿತ್ರರಸಿಕರನ್ನು ರಂಜಿಸಿ ಖ್ಯಾತಿ ಪಡೆದಿರುವ ಅನಂತ್ ನಾಗ್ ಅವರು ಎಲ್ಲಾ ಕಾಲಘಟ್ಟದವರಿಗೂ ಅಚ್ಚುಮೆಚ್ಚು ಎಂದರೆ ತಪ್ಪಾಗಲಾರದು. ನಟ ಅನಂತ್ ನಾಗ್ (Anant Nag) ಅವರ ಕಲಾಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2025ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿದೆ.
ಅನೇಕ ವರ್ಷಗಳಿಂದ ನಟ ಅನಂತ್ ನಾಗ್ (Anant Nag) ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಬೇಕೆಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿತ್ತು. ಕನ್ನಡಿಗರ ಬಹುವರ್ಷದ ಬೇಡಿಕೆ ಸಾಕಾರಗೊಂಡಿದ್ದು, ಈ ಬಗ್ಗೆ ನಟ ಅನಂತ್ನಾಗ್ ಪ್ರತಿಕ್ರಿಯಿಸಿದ್ದಾರೆ. ಪದ್ಮಭೂಷಣ ಪ್ರಶಸ್ತಿಯನ್ನು ಕನ್ನಡಿಗರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅನಂತ್ ನಾಗ್ (Anant Nag), ಮೊದಲ ಐದು ವರ್ಷಗಳ ಕಾಲ ನಾನು ರಂಗಭೂಮಿಯಲ್ಲಿದ್ದೆ. ಆ ಬಳಿಕ 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದೇನೆ. ಕನ್ನಡಿಗರು ನನ್ನ ಮೇಲೆ ಅತೀವ ಪ್ರೀತಿ ತೋರಿದ್ದಾರೆ. ಕಳೆದ ಮೂರು ವರ್ಷಗಳಿಂದ ನನ್ನ ಹೆಸರನ್ನು ಸೂಚಿಸಲಾಗಿದೆ. ಕೊನೆಗೂ ಪ್ರಶಸ್ತಿ ಬಂದಿರುವುದಕ್ಕೆ ಸಂತೋಷವಾಗಿದೆ. ಈ ಗೌರವವನ್ನು ಕರ್ನಾಟಕದ ಜನರಿಗೆ ಅರ್ಪಿಸುತ್ತೇನೆ.
ಪ್ರಶಸ್ತಿ ಘೋಷಣೆಯಾದ ಬಳಿಕ ಒಂದು ರೀತಿಯ ನಿರಾಳ ಭಾವ ನನ್ನಲ್ಲಿ ಮೂಡಿತು. ನನಗಾಗಿ ಇಷ್ಟು ವರ್ಷ ನನ್ನನ್ನು ಬೆಂಬಲಿಸಿದ ಜನರಿಗೆ ಕೊನೆಗೂ ಸಂತೋಷವಾಗಲಿದೆ ಎಂದೆನಿಸಿತು. ನನಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಜನರು ಒತ್ತಾಯಿಸುತ್ತಲೇ ಬಂದಿದ್ದರು. ಮುಖ್ಯವಾಗಿ ಪ್ರಶಸ್ತಿ ಆಯ್ಕೆ ವಿಚಾರಕ್ಕೆ ಬರುವುದಾದರೆ ಜನರ ಅಭಿಪ್ರಾಯವನ್ನೂ ಪಡೆಯುವ ಪದ್ಧತಿ ಆರಂಭವಾಗಿದ್ದರಿಂದಲೇ ಇದು ಸಾಧ್ಯವಾಯಿತು. ಇದಕ್ಕೆ ಮೋದಿ ಅವರಿಗೆ ಧನ್ಯವಾದ ಹೇಳಲೇಬೇಕು ಎಂದು ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ನಾಗ್ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.