ನ್ಯೂಸ್

ಅಂತೂ ಬಿಡುವು ಕೊಟ್ಟ ಮಳೆ: ಹವಾಮಾನ ಇಲಾಖೆಯ ಮಾಹಿತಿ ಹೀಗಿದೆ...

ಬೆಂಗಳೂರು: ಸತತ 18 ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿದ್ದ ಮುಂಗಾರು ಮಳೆ ಕೊನೆಗೂ ಬಿಡುವು ಕೊಟ್ಟಿದೆ. ಮಂಗಳವಾರ ಹಲವೆಡೆ ಚದುರಿದಂತೆ ಸಾಧಾರಣ ಮಳೆಯಾಗಿದೆ. ಮುಂದಿನ 4 ದಿನ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರಿಂದ ಮಳೆಯಿಂದ ರೋಸಿ ಹೋಗಿದ್ದ ಜನರು ತುಸು ನಿರಾಳರಾಗಿದ್ದಾರೆ.

ಜೂ 1ರಿಂದ ಜು.19ರವರೆಗೆ ರಾಜ್ಯಾದ್ಯಂತ 365 ಮಿಮೀ ಮಳೆಯಾಗಬೇಕಿತ್ತು. ಆದರೆ, 462 ಮಿಮೀ ಮಳೆಯಾಗಿದ್ದು, ಶೇ.27 ವಾಡಿಕೆಗಿಂತ ಹೆಚ್ಚು ಬಿದ್ದಿದೆ. ದಕ್ಷಿಣ ಒಳನಾಡಿನಲ್ಲಿ ಶೇ.76, ಉತ್ತರ ಒಳನಾಡಿನಲ್ಲಿ ಶೇ.21, ಮಲೆನಾಡಿನಲ್ಲಿ ಶೇ. 25 ಹಾಗೂ ಕರಾವಳಿಯಲ್ಲಿ ಶೇ.21 ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಜೂನ್‌ನಲ್ಲಿ ಮಳೆ ಕೊರತೆ ಉಂಟಾಗಿದ್ದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಜುಲೈನಲ್ಲಿ ಭಾರಿ ಮಳೆಯಾಗಿದೆ.

ಸೆಖೆ ಅನುಭವ: ನಿರಂತರ ಮಳೆಯಿಂದ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಕುಸಿತ ಪರಿಣಾಮ ಚಳಿ ಅನುಭವವಾಗುತ್ತಿದ್ದ ಬೆಂಗಳೂರು ಸೇರಿ ಹಲವು ಭಾಗಗಳಲ್ಲಿ ಇದೀಗ ಸೆಖೆ ವಾತಾವರಣ ಸೃಷ್ಟಿಯಾಗಿದೆ.