ಬೆಂಗಳೂರು: ಸಾಮಾನ್ಯವಾಗಿ ಮಾತನಾಡುವ ಸಂದರ್ಭಗಳಲ್ಲಿ ಯುವತಿಯರಿಗೆ ಮತ್ತು ಮಹಿಳೆಯರಿಗೆ 'ಸೋ ಸ್ವೀಟ್' ಎಂದು ಕರೆಯಲಾಗುತ್ತದೆ. ಆದರೆ ಭಾರತದಲ್ಲಿ ಸದ್ಯ ಪುರುಷರೇ 'ಸೋ ಸ್ವೀಟ್' ಎಂದರೂ ತಪ್ಪೇನಲ್ಲ. ಅದನ್ನು ಅಂಕಿ-ಅಂಶವೊಂದು ಕೂಡ ದೃಢಪಡಿಸಿದೆ. ಅರ್ಥಾತ್, ದೇಶದಲ್ಲಿ ಮಧುಮೇಹಿಗಳ ಪೈಕಿ ಅಥವಾ ಮಧುಮೇಹಿಗಳಾಗುವ ಹಂತದಲ್ಲಿ ಇರುವವರ ಪೈಕಿ ಮಹಿಳೆಯರಿಗಿಂತ ಪುರುಷರ ಪ್ರಮಾಣವೇ ಹೆಚ್ಚು ಎಂಬುದು ಕಂಡುಬಂದಿದೆ.
ಭಾರತದ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಭಾರತದಲ್ಲಿನ ಆರು ಪುರುಷರ ಪೈಕಿ ಒಬ್ಬರು ಮಧುಮೇಹಿ ಆಗಿರುತ್ತಾರೆ ಅಥವಾ ಇನ್ನೇನು ಮಧುಮೇಹಿ ಆಗುವ ಹಂತದಲ್ಲಿ ಇರುತ್ತಾರೆ ಎಂಬುದನ್ನು ಈ ಸಮೀಕ್ಷೆ ಬಹಿರಂಗಪಡಿಸಿದೆ.
ಅಂದರೆ ಭಾರತದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ 140 ಎಂಜಿ/ಡಿಎಲ್ಗಿಂತ ಹೆಚ್ಚು ಇರುವ ಪುರುಷರ ಸಂಖ್ಯೆ ಶೇ. 15.6ರಷ್ಟಿದೆ. ಆದರೆ ಮಹಿಳೆಯರಿಗೆ ಸಂಬಂಧಿಸಿದಂತೆ ಇದು ಶೇ. 13.5ರಷ್ಟಿದೆ. ಮಧುಮೇಹಿ ಅಥವಾ ಮಧುಮೇಹಿಯಾಗುವ ಹಂತದಲ್ಲಿರುವ ಪುರುಷರ ಪೈಕಿ ಹೆಚ್ಚಿನವರು ಕೇರಳದಲ್ಲಿದ್ದಾರೆ. ಅಲ್ಲಿ ಇಂಥವರ ಪ್ರಮಾಣ ದೇಶದ ಒಟ್ಟು ಪ್ರಮಾಣಕ್ಕೆ ಹೋಲಿಸಿದರೆ ಶೇ. 27. ನಂತರದ ಸ್ಥಾನ ತಮಿಳುನಾಡು ಮತ್ತು ಆಂಧ್ರಪ್ರದೇಶದ್ದಾಗಿದ್ದು, ಅಲ್ಲಿ ಈ ಪ್ರಮಾಣ ಶೇ. 22 ಇದೆ.
ವಿಶೇಷವೆಂದರೆ ಮಧುಮೇಹಿ ಅಥವಾ ಮಧುಮೇಹಿ ಆಗುವ ಹಂತದಲ್ಲಿರುವ ಪುರುಷ ಮತ್ತು ಮಹಿಳೆಯರಲ್ಲಿ ಕೇರಳವೇ ಸಿಂಹಪಾಲು ಹೊಂದಿದೆ. ಇಲ್ಲಿರುವ ಪುರುಷರು ಮತ್ತು ಮಹಿಳೆಯರಲ್ಲಿ ಮಧುಮೇಹ ಹಾಗೂ ಅದರ ಸಾಧ್ಯತೆ ಅಧಿಕವಾಗಿದೆ.
ಎನ್ಎಫ್ಎಚ್ಎಸ್-5 2019-21ರ ಸಮೀಕ್ಷೆಯಲ್ಲಿ ಈ ಎಲ್ಲ ಅಂಶಗಳು ಬಹಿರಂಗಗೊಂಡಿವೆ. 8.3 ಲಕ್ಷ ಪುರುಷರು ಮತ್ತು 9.6 ಲಕ್ಷ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಿ, ಈ ಅಂಕಿ-ಅಂಶಗಳನ್ನು ಪಡೆಯಲಾಗಿದೆ.