ಲಖನೌ: ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರಭಾರತದ ಹಲವೆಡೆ ದಟ್ಟವಾದ ಮಂಜು ಆವರಿಸಿದ್ದು, ರಸ್ತೆ ಸಂಚಾರ, ವಿಮಾನ ಮತ್ತು ರೈಲು ಸೇವೆಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿವೆ. ಗೋಚರತೆ ಬಹುತೇಕ ಶೂನ್ಯವಾಗಿದೆ. ರಸ್ತೆಗಳೆಲ್ಲಾ ದಟ್ಟ ಮಂಜಿನಿಂದ ಕೂಡಿದ್ದು ಸರಣಿ ಅಪಘಾತಗಳು ಸಂಭವಿಸುತ್ತಿವೆ.
ಇದೀಗ ಉತ್ತರಪ್ರದೇಶ ಆಗ್ರಾ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಇದರಲ್ಲಿ ಕೋಳಿ ಸಾಗಿಸುತ್ತಿದ್ದ ಟೆಂಪೋ ಒಂದು ಅಪಘಾತಕ್ಕಿಡಾಗಿದೆ. ಈ ವಿಚಾರವನ್ನು ತಿಳಿದ ಸ್ಥಳೀಯರು ಕ್ಷಣಾರ್ಧದಲ್ಲೇ ಕೋಳಿಗಳನ್ನು ಹೊತ್ತೊಯ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸರಣಿ ಅಪಘಾತದಿಂದ ವಾಹನಗಳು ಜಖಂಗೊಂಡಿದ್ದು, ಜನರು ಚೆಲ್ಲಾಪಿಲ್ಲಿಯಾಗಿ ರಸ್ತೆಗಳಲ್ಲಿ ಬಿದ್ದಿರುವ ಕೋಳಿಗಳನ್ನು ಚೀಲದಲ್ಲಿ ಹಾಗೂ ಬ್ಯಾಗ್ಗಳಲ್ಲಿ ತುಂಬಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ. ಇತ್ತ ಜನರು ತಮ್ಮ ಪಾಡಿಗೆ ತಾವು ಕೋಳಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಅತ್ತ ಗಾಯಾಳುಗಳು ನರಳಾಡುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದಾಗಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದು, ಗಾಯಾಳುಗಳಿಗಿಂತ ನಿಮಗೆ ಕೋಳಿಯೇ ಹೆಚ್ಚಾಯಿತಾ ಎಂದು ಹಲವರು ಪ್ರಶ್ನಿಸಿದ್ದಾರೆ. ಟೆಂಪೋದಲ್ಲಿ ಸುಮಾರು 2,50,000 ರೂ. ಮೌಲ್ಯದ ಕೋಳಿಗಳಿದ್ದವು ಎಂದು ಅಂದಾಜಿಸಲಾಗಿದೆ.