ನ್ಯೂಸ್

ಹೇಮರಡ್ಡಿ ಮಲ್ಲಮ್ಮ ಸ್ತ್ರೀಕುಲಕ್ಕೆ ಮಾದರಿ

ಶಿವಮೊಗ್ಗ: ಇಡೀ ಸ್ತ್ರೀ ಕುಲಕ್ಕೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಾದರಿಯಾಗಿದ್ದು, ಶ್ರದ್ಧೆ ಮತ್ತು ನಂಬಿಕೆಯಿಂದ ಏನನ್ನಾದರೂ ಸಾಧಿಸಬಹುದೆಂದು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ರಡ್ಡಿ ಸಮಾಜದ ಆಶ್ರಯದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಭಕ್ತಿ ಮತ್ತು ನಂಬಿಕೆಗೆ ಇನ್ನೊಂದು ಹೆಸರೇ ಮಲ್ಲಮ್ಮ. ತಮ್ಮ ಕುಟುಂಬದಲ್ಲಿ ಎದುರಾದ ನೋವುಗಳನ್ನೆಲ್ಲ ಸಹಿಸಿಕೊಂಡು ಮೇಲೆ ಬಂದರು. ಕಷ್ಟ ಕಾರ್ಪಣ್ಯದ ನಡುವೆ ಅವರ ತಾಳ್ಮೆ ಬದುಕಿಗೆ ಶಕ್ತಿ ತಂದು ಕೊಟ್ಟಿತ್ತು. ಬುದ್ಧಿ ಕಲಿಸಲು ಅವರ ಅತ್ತೆ ಭಿಕ್ಷುಕನಿಗೆ ನಿಗಿ ನಿಗಿ ಕೆಂಡ ಭಿಕ್ಷೆ ನೀಡುವಂತೆ ಹೇಳಿದಾಗ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನನ್ನು ಮನದಲ್ಲಿ ನೆನೆದು ಭಕ್ತಿಯಿಂದ ಅದನ್ನೇ ಭಿಕ್ಷೆ ನೀಡಿದಾಗ ಅದು ಧಾನ್ಯವಾಗುತ್ತದೆ. ಆಗಿನಿಂದ ಅವರನ್ನು ಕೆಂಡದ ಮಲ್ಲಮ್ಮ ಎಂದೂ ಕರೆಯಲಾಗುತ್ತದೆ ಎಂದು ಹೇಳಿದರು.

ಆಕೆಯ ಭಕ್ತಿ ಮತ್ತು ನಂಬಿಕೆಯಿಂದ ಹಲವು ಪವಾಡ ನಡೆದಿವೆ. ಮಲ್ಲಮ್ಮ ಸದಾ ಶ್ರೀಶೈಲ ಮಲ್ಲಿಕಾರ್ಜುನನ್ನು ಜಪಿಸುತ್ತಿದ್ದಳು. ನನ್ನ ಜತೆ ಸದಾ ಮಲ್ಲಿಕಾರ್ಜುನನು ಇರುತ್ತಾನೆಂಬ ನಂಬಿಕೆಯಿಂದ ಮಲ್ಲಮ್ಮ ಎಲ್ಲ ಕಷ್ಟಗಳನ್ನು ಸಹಜವಾದ ರೀತಿಯಲ್ಲಿ ಸ್ವೀಕರಿಸಿದಳು. ಈ ಮೂಲಕ ಸಮಾಜಕ್ಕೆ ತಾಳ್ಮೆಯ ಶಕ್ತಿಯನ್ನು ತಿಳಿಸುತ್ತಾ ಹೋದಳು. ಇಂತಹ ಸಾಧ್ವಿಗಳು ಮತ್ತು ದಾರ್ಶನಿಕರಿಂದ ಈ ದೇಶದ ಸಂಸ್ಕೃತಿ, ಪರಂಪರೆ, ನಂಬಿಕೆಗಳ ನೆಲೆಗಟ್ಟು ಗಟ್ಟಿಯಾಗಿ ಉಳಿದಿದೆ. ನಂಬಿಕೆಯೊಂದಿದ್ದರೆ ಸಮಾಜದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಮಲ್ಲಮ್ಮ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಮಲ್ಲಮ್ಮರಂತಹ ಶರಣೆಯರ ಬದುಕು ಆದರ್ಶ ಪ್ರಾಯ. ಇಂತಹ ಭಕ್ತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಉತ್ತಮವಾಗಿರುತ್ತದೆ ಎಂದರು.

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಘದ ಅಧ್ಯಕ್ಷ ಜಿ.ಕುಮಾರಸ್ವಾಮಿ ಮಾತನಾಡಿದರು. ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಾಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ಎಚ್.ಕೆ.ಹಸೀನಾ ವಿಶೇಷ ಉಪನ್ಯಾಸ ನೀಡಿದರು. ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಘದ ಕಾರ್ಯದರ್ಶಿ ಜಿ.ಎಸ್.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.