ಮುಂಬೈ: ಬಾಲಿವುಡ್ನ ಖ್ಯಾತ ಹಿರಿಯ ನಟಿ ಹೇಮಾ ಮಾಲಿನಿ ಅವರು ತಮ್ಮ ಐಷಾರಾಮಿ ಕಾರನ್ನು ಬಿಟ್ಟು ಜನಸಾಮಾನ್ಯರಂತೆ ಮುಂಬೈನ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾ ತುಂಬಾ ವೈರಲ್ ಆಗಿದೆ.
ಮುಂಬೈ ಮಹಾನಗರದ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಅವರು ಈ ರೀತಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮೆಟ್ರೋ ಮತ್ತು ಆಟೋ ಪ್ರಯಾಣದ ಫೋಟೋ ಹಾಗೂ ವಿಡಿಯೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ಮಂಗಳವಾರ ಜುಹೂನಿಂದ ದಹಿಸರ್ ಏರಿಯಾಗೆ ಕಾರಿನಲ್ಲಿ ತೆರಳಲು ಹೇಮಾ ಮಾಲಿನಿ ಅವರಿಗೆ 2 ಗಂಟೆ ಸಮಯ ಹಿಡಿದಿತ್ತು. ಹೀಗಾಗಿ ವಾಪಸ್ ಬರುವಾಗ ಅವರು ಮೆಟ್ರೋದಲ್ಲಿ ಪ್ರಯಾಣ ಮಾಡಲು ನಿರ್ಧರಿಸಿದರು. ಮೆಟ್ರೋದಲ್ಲಿ ಪ್ರಯಾಣಿಸಿದ ನಂತರ ಆಟೋ ಹಿಡಿದರು. ಇದರಿಂದ ಕೇವಲ ಅರ್ಧ ಗಂಟೆಯಲ್ಲಿ ಮನೆ ತಲುಪಿದೆ. ಈ ಅನುಭವ ಚೆನ್ನಾಗಿತ್ತು ಎಂದು ಹೇಮಾ ಮಾಲಿನಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಕೆಲವು ಫೋಟೋ ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನಟಿ ಹೇಮಾ ಮಾಲಿನಿ ಅವರು ಮುಂಬೈ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರನ್ನು ಆಶ್ಚರ್ಯಚಕಿತರಾದರು. ನಟಿ ಜತೆಗೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.
ಇದು ನಾನು ಆಟೋದೊಳಗಿಂದ ಚಿತ್ರೀಕರಿಸಿದ ವಿಡಿಯೋ. ನಾನು ಸಂಪೂರ್ಣವಾಗಿ ಆನಂದಿಸಿದೆ! ಎಂದು ಅವರು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.