ಬೆಂಗಳೂರು: ಇದೇ ತಿಂಗಳು 21ರಿಂದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1 ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸಹಾಯವಾಣಿಯನ್ನು ಆರಂಭಿಸಿದೆ.
ಮಾ.10ರಿಂದ ಏ.4ರವರೆಗೆ ಸಹಾಯವಾಣಿಯು ಕಾರ್ಯನಿರ್ವಹಿಸಲಿದೆ, 080 23310075 ಹಾಗೂ 080 23310076 ನಂಬರಿಗೆ ಪಾಲಕರು, ವಿದ್ಯಾರ್ಥಿಗಳು ಕರೆ ಮಾಡಿ ತಮ್ಮ ಗೊಂದಲಗಳನ್ನು ನಿವಾರಣೆ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳ ಸಾಮರ್ಥ್ಯ, ಬುದ್ಧಿಶಕ್ತಿ, ಆಸಕ್ತಿ, ಕ್ರಿಯಾಶೀಲತೆ, ಕಠಿಣ ಪರಿಶ್ರಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಹೆಚ್ಚು ಅಂಕಗಳನ್ನು ಗಳಿಸುವಂತೆ ಪಾಲಕರು ಒತ್ತಡಗಳನ್ನು ಹಾಕುತ್ತಿರುವುದು ಸಾಮಾನ್ಯ ಸಮಸ್ಯೆಯಾಗಿದೆ.
ಇದರಿಂದ ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಗಮನ ಹರಿಸಲಾಗದಿರುವುದು, ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿರುವುದು ಕಂಡು ಬಂದಿದ್ದು, ಈ ಸಮಸ್ಯೆ ನಿವಾರಣೆಯಾಗದೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗಳ ನಿವಾರಣೆ ಮಾಡಿ, ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸ್ಪೂರ್ತಿ ನೀಡಬೇಕಾದ ಅವಶ್ಯಕತೆ ಇದೆ.
ಈ ರಿತಿಯ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡು ಹಿಡಿಯುವ ಹಾಗೂ ಭಯರಹಿತವಾಗಿ ಪರೀಕ್ಷೆ ಬರೆಯಲು ಆತ್ಮಸ್ಥೈರ್ಯ ತುಂಬುವ ಸದುದ್ದೇಶದಿಂದ ಪರೀಕ್ಷಾ ಮಂಡಳಿಯು ಸಹಾಯವಾಣಿಯನ್ನು ಆರಂಭಿಸಿದೆ.
ಪಾಲಕರು, ವಿದ್ಯಾರ್ಥಿಗಳು ಮೇಲೆ ತಿಳಿಸಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಮಸ್ಯೆಗಳು, ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಮಂಡಳಿ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.
ಸಹಾಯವಾಣಿ ನಿರ್ವಹಿಸುವ ಸಮಯ:
ಮಾ.10ರಿಂದ 19ರವರೆಗೆ ಮಧ್ಯಾಹ್ನ 2.30ರಿಂದ ಸಂಜೆ 6.30
ಮಾ.16ರಂದು ಬೆಳಗ್ಗೆ 11ರಿಂದ ಸಂಜೆ 5 ಗಂಟೆ
ಮಾ.21ರಿಂದ ಏ.4ರವರೆಗೆ ನಿಯಂತ್ರಣ ಕೊಠಡಿಯಾಗಿ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ.