ಬೆಂಗಳೂರು: ಬಿಜೆಪಿ ಕಾರ್ಯಕರ್ತರ ನೆರವಿಗಾಗಿ ಆರಂಭಿಸಿದ್ದ ಹೆಲ್ಪ್ ಲೈನ್ ಕತೆ ಏನಾಯಿತು? ಬಿಜೆಪಿ ಕಾರ್ಯಕರ್ತರ ನೆರವಿಗಾಗಿ ನೇಮಿಸಿದ್ದ ನೂರು ಜನರ ವಕೀಲರ ತಂಡ ಎಲ್ಲಿ ಹೋಯ್ತು? ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಪ್ರತಿಪಕ್ಷವನ್ನು ಛೇಡಿಸಿದ್ದಾರೆ.
2023ರಲ್ಲಿ ಬಿಜೆಪಿ ನಾಯಕರು ಕಾನೂನು ಕೋಶದ ಸಹಾಯವಾಣಿ ಆರಂಭಿಸಿದ ತೆಗೆಸಿಕೊಂಡಿದ್ದ ೆಟೋವನ್ನು ಪ್ರದರ್ಶಿಸಿ ಪ್ರಶ್ನೆ ಹಾಕಿರುವ ಸಚಿವರು, ಬಿಜೆಪಿಯೇ ಆರಂಭಿಸಿದ್ದ ಈ ಹೆಲ್ಪ್ ಲೈನ್ ನಂಬರ್‌ಗೆ 18003091907 ಕರೆ ಮಾಡಿದರೆ ತನ್ನ ಕಾರ್ಯಕರ್ತರನ್ನು ಬಿಜೆಪಿ ಹೇಗೆ ಮೂರ್ಖರನ್ನಾಗಿಸುತ್ತದೆ ಎನ್ನುವುದು ತಿಳಿಯುತ್ತದೆ. ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿರುವಂತೆಯೇ ಈ ನಂಬರ್ ಕೂಡ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದು ಮಾತಲ್ಲೇ ತಿವಿದಿದ್ದಾರೆ.
ಹೆಣ ಮತ್ತು ಹಣ ಇವು ಬಿಜೆಪಿಯವರ ಅತ್ಯಂತ ಪ್ರೀತಿಪಾತ್ರವಾದ ವಿಷಯಗಳು, ಈ ಹಿಂದೆ ಬಿಜೆಪಿಯವರು ಹಲವು ಸಾವುಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದ್ದರು, ರಾಜ್ಯದ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸಿದ ಆ ಎಲ್ಲಾ ಪ್ರಕರಣಗಳ ಅಸಲಿ ಸತ್ಯ ಹೊರಬಂದು ಬಿಜೆಪಿ ಮುಖಭಂಗ ಅನುಭವಿಸಿದೆ ಎಂದು ಕುಟುಕಿದ್ದಾರೆ.
ಶಿವಮೊಗ್ಗದ ಹರ್ಷ, ಮಂಗಳೂರಿನ ಪ್ರವೀಣ್ ನೆಟ್ಟಾರು, ಕಾರವಾರದ ಪರೇಶ್ ಮೆಸ್ತಾ, ತೀರ್ಥಹಳ್ಳಿಯ ನಂದಿತಾ, ಬೀದರ್‌ನ ಶಿವು ಉಪ್ಪಾರ, ಮೂಡಿಗೆರೆಯ ಧನ್ಯಶ್ರೀ, ಕರಾವಳಿಯ ಪ್ರಕಾಶ್ ಕುಳಾಯಿ, ಕೇಶವ್ ಶೆಟ್ಟಿ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ, ಪ್ರತಾಪ್ ಪೂಜಾರಿ ಅವರ ಸಾವನ್ನು ಕೊಳಕು ರಾಜಕೀಯಕ್ಕೆ ಬಳಸಿಕೊಂಡ ಬಿಜೆಪಿಗೆ ಇವರೆಲ್ಲರ ನೆನಪಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಇವರೆಲ್ಲರ ಮನೆಗೆ ಬಿಜೆಪಿಗರು ಈಗಲೂ ಭೇಟಿ ನೀಡುತ್ತಾ ಕಷ್ಟ ಸುಖ ವಿಚಾರಿಸುತ್ತಿದ್ದಾರೆಯೇ? ಇವರೆಲ್ಲರ ಕುಟುಂಬಸ್ಥರ ಸ್ಥಿತಿಗತಿಗಳ ಬಗ್ಗೆ ಬಿಜೆಪಿಯವರು ಈಗಲೂ ಕಾಳಜಿ ವಹಿಸುತ್ತಿದ್ದಾರೆಯೇ? ಎಂದಿದ್ದಾರೆ.
ಈಗ ವಿನಯ್ ಸೋಮಯ್ಯ ಆತ್ಮಹತ್ಯೆಯ ಪ್ರಕರಣದಲ್ಲೂ ಬಿಜೆಪಿ ತನ್ನ ಹಳೆಯ ಕುತಂತ್ರದ ರಾಜಕೀಯವನ್ನು ಮುಂದುವರೆಸಿದೆ. ಈ ಪ್ರಕರಣದಲ್ಲೂ ಸತ್ಯ ಹೊರಬಂದು ಬಿಜೆಪಿಯ ಸದಾರಮೆ ನಾಟಕ ಬಯಲಾಗುವುದು ನಿಶ್ಚಿತ. - ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ.