ಬನ್ನೂರು : ನಕಲಿ ರೈತ ಸಂಘಟನೆಗಳಿಗೆ ಕಡಿವಾಣ ಹಾಕಲು ಎಲ್ಲರು ಸಹಕಾರ ನೀಡಬೇಕು. ಈ ಮೂಲಕ ಕರ್ನಾಟಕ ರಾಜ್ಯ ರೈತ ಸಂಘದ ಎಲ್ಲ ಸದಸ್ಯ ರೈತರೆಲ್ಲರು ಒಗ್ಗಟ್ಟಾಗಿ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿ ರೈತರ ಸಮಸ್ಯೆ ಪರಿಹರಿಸೋಣ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಸಂತೆಮಾಳದ ಚಾಮನಹಳ್ಳಿಯಲ್ಲಿರುವ ಎಪಿಎಂಸಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಭಾಗದಲ್ಲಿ ರೈತ ಸಂಘಟನೆ ಕ್ಷೀಣಿಸುತ್ತಿದ್ದು, ಇದರ ಪ್ರಯೋಜನ ಪಡೆಯುತ್ತಿರುವ ಇತರ ಸಂಘಟಿತರಲ್ಲದ ಜನ ರೈತರ ಹೆಸರಿನಲ್ಲಿ ಅಮಾಯಕ ಅಧಿಕಾರಿಗಳು ಹಾಗೂ ಮುಗ್ದ ರೈತರನ್ನು ವಂಚನೆ ಮಾಡುತ್ತಿರುವಂತ ಪ್ರಕರಣಗಳು ನಡೆಯುತ್ತಿವೆ. ಇಂತಹ ಪ್ರಕರಣಗಳಿಂದ ಮೂಲ ರೈತ ಸಂಘಟನೆಗಳಿಗೆ ತೊಡಕಾಗಿದೆ. ಕೆಲವರು ರೈತರ ಹೆಸರಿನಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪಟ್ಟಣದಲ್ಲಿ ಕಾಲುವೆಗಳ ಹೂಳು ತೆಗೆಸಿಲ್ಲ, ರೈತ ಹೊಲಗಳ ರಸ್ತೆಗಳು ಸಮರ್ಪಕವಾಗಿಲ್ಲ, ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ, ಸೆಸ್ಕ್ ನಡೆಸುವ ಸಭೆಗಳಿಗೆ ರೈತರಿಗೆ ಆಹ್ವಾನ ನೀಡುತ್ತಿಲ್ಲ, ರೈತ ಬೆಳೆದ ಬೆಳೆಗೆ ಸಮರ್ಪಕ ಬೆಲೆ ದೊರೆಯುತ್ತಿಲ್ಲ. ಇಂತಹ ಹಲವಾರು ಸಮಸ್ಯೆಗಳು ಪ್ರತಿ ಗ್ರಾಮ, ಹೋಬಳಿ ಮಟ್ಟದಲ್ಲಿ ಇದ್ದು, ಅದನ್ನು ನಾವೇಲ್ಲರು ಸಂಘಟಿತರಾಗಿ ಸರಿಪಡಿಸುವ ಕೆಲಸ ಮಾಡೋಣ ಎಂದು ತಿಳಿಸಿದರು.
ನಕಲಿ ರೈತ ಸಂಘಟನೆ ಹೆಸರಿನಲ್ಲಿ ಲಾಭಿಗೆ ಇಳಿದು ಅಧಿಕಾರಿಗಳನ್ನು ವಂಚನೆ ಮಾಡುತ್ತಿದ್ದಾರೆ. ನಕಲಿ ಸಂಘಟನೆಗಳ ಹಾವಳಿಗೆ ಕಡಿವಾಣ ಹಾಕಲು ಅಧಿಕಾರಿಗಳೂ ಸಹಕರಿಸುವಂತೆ ತಿಳಿಸಿದರು.
ಹೋಬಳಿ ಅಧ್ಯಕ್ಷ ಹುಚ್ಚೇಗೌಡ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಬೂದಳ್ಳಿಶಂಕರ್, ಬನ್ನೂರು ಕಿರಣ್, ಸಿದ್ದೇಗೌಡ, ಚಿನ್ನಪ್ಪ, ಅತ್ತಳ್ಳಿ ಗೋಪಿ, ಚಂದ್ರು ಸುಜ್ಜಲೂರು, ರಾಮಚಂದ್ರೇಗೌಡ, ಕೆಂಪೇಗೌಡ, ಯಾಚೇನಹಳ್ಳಿ ಶಿವಣ್ಣ, ಶಾಂತಮೂರ್ತಿ, ಮಾಡ್ರಳ್ಳಿ ನಂಜುಂಡಸ್ವಾಮಿ, ಚನ್ನವೀರಪ್ಪ, ರಾಜು, ರವಿ, ಚಿನ್ನಪ್ಪ, ನಾಗೇಶ್, ರಾಮಾಚಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.