ನ್ಯೂಸ್

ಹಲೋ ಡಾಕ್ಟರ್‌: ಸಂಬಂಧ ಹಳಸದಿರಲಿ ಸಂತಸ ನಳನಳಿಸುತಿರಲಿ

suchetana
ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ನಮ್ಮ ಜೀವನಶೈಲಿ ಹಾಗೂ ಜೀವನಮಟ್ಟವೂ ಬದಲಾಗಿದೆ. ಕಾಲಕಾಲಕ್ಕೆ ಅಪ್​ಡೇಟ್ ಆಗಬೇಕು ಎನ್ನುವುದು ಕೂಡ ಅಷ್ಟೇ ಸತ್ಯ. ಇದು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಳಿವು-ಉಳಿವಿನ ಪ್ರಶ್ನೆ. ಅಸ್ತಿತ್ವ ಕಾಪಾಡಿಕೊಳ್ಳುವ ಜವಾಬ್ದಾರಿಯೂ ಹೌದು. ಈ ಮಧ್ಯೆ ನಾವಿಂದು ಬದಲಾದ ಜೀವನಶೈಲಿಯಿಂದ ಸಾಕಷ್ಟು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಪರಿಣಾಮ ಮಾನಸಿಕ ಕ್ಷೋಭೆ ಉಂಟಾಗುತ್ತಿದೆ. ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಜತೆಗೆ ಅರ್ಥ ಕಳೆದುಕೊಳ್ಳುತ್ತಿವೆ.

ಉನ್ನತ ಶಿಕ್ಷಣ, ಕೈ ತುಂಬ ಸಂಬಳ ನೀಡುವ ಒಳ್ಳೆಯ ಉದ್ಯೋಗ ಎಲ್ಲವೂ ಬೇಕು ಸರಿ. ಆದರೆ ಇವೆಲ್ಲವೂ ಇದ್ದಾಗ ತಲತಲಾಂತರದಿಂದ ನಡೆದು ಬಂದ ಅಥವಾ ನಮ್ಮ ಗುರು ಹಿರಿಯರು ಪಾಲಿಸಿಕೊಂಡು ಬಂದ ಸಂಪ್ರದಾಯ ಸಂಬಂಧಗಳು ಅದೇಕೋ ಕಣ್ಮರೆಯಾಗುತ್ತಿವೆ. ಇಂದಿನ ಯುವ ಸಮುದಾಯದಲ್ಲಿ ಅದೆಲ್ಲ ಏಕೆ ಎನ್ನುವ ಅಸಡ್ಡೆಯ ಪ್ರಶ್ನೆಗಳು ಕೇಳಿ ಬರುತ್ತಿವೆ. ಮನೆಯಲ್ಲಿ ಹಿರಿಯರು ವಯಸ್ಸಿಗೆ ತಕ್ಕಂತೆ ಮದುವೆ ಮಾಡಿಸಿದಾಗ ಆ ಗಂಡು-ಹೆಣ್ಣಿನ ನಡುವಿನ ಅನುಬಂಧದ ಬಂಧನವನ್ನು ಇಂದು ಅದೆಷ್ಟು ಜೋಡಿ ಪಾಲಿಸುತ್ತಿವೆ ಎಂದು ನೋಡಹೊರಟರೆ ನಮಗೆ ನಿರಾಸೆ ಕಟ್ಟಿಟ್ಟ ಬುತ್ತಿ. ತೀರಾ ಇತ್ತೀಚೆಗಷ್ಟೇ ನನ್ನ ಬಳಿ ನವಜೋಡಿ ಪಾಲಕರೊಂದಿಗೆ ಬಂದಿದ್ದರು. ಹೊಸ ಹುಮ್ಮಸ್ಸು, ಹುರುಪು ಎಲ್ಲವೂ ಆ ಜೋಡಿಯಲ್ಲಿತ್ತು. ಹೆಚ್ಚು ಕಡಿಮೆ ಆರೇಳು ತಿಂಗಳು ಆಗಿರಬೇಕಷ್ಟೇ ಮದುವೆಯಾಗಿ. ಆದರೆ ಗಂಡ ಹೆಂಡತಿ ಮಧ್ಯೆ ಅದೇನೋ ಕೊರತೆ ಅಥವಾ ಸಮನ್ವಯತೆ ಇಲ್ಲದಿರುವುದು ಪಾಲಕರಿಗೆ ಸ್ಪಷ್ಟವಾಗಿ ಕಂಡು ಬಂದಿತ್ತು. ಕೂಡಲೇ ಅವರು ಮಗ ಸೊಸೆಯನ್ನು ನನ್ನ ಬಳಿ ಕರೆದುಕೊಂಡು ಬಂದಿದ್ದರು. ಅವರನ್ನು ಈ ಕುರಿತು ವಿಚಾರಿಸಿದಾಗ ಹೊರಬಂದ ಸಂಗತಿ ಎಂದರೆೆ ಲಿವಿಂಗ್ ಟುಗೆದರ್ ಓಕೆ. ಮಕ್ಕಳು ಮರಿ ಯಾಕೆ?. ಇದು ಆಘಾತಕಾರಿ ಸಂಗತಿಯೇ ಸರಿ. ನಮ್ಮ ಹಿರಿಯರು ಯಾವ ಕೌಟುಂಬಿಕ ವ್ಯವಸ್ಥೆಯನ್ನು ರೂಪಿಸಿದ್ದಾರೋ ಅಥವಾ ಈವರೆಗೆ ಪಾಲಿಸಿಕೊಂಡು ಬಂದಿದ್ದಾರೋ ಅದು ಇಂದಿನ ಜನರೇಶನ್​ನಿಂದ ಪಾಲನೆಯಾಗುತ್ತಿಲ್ಲ. ಇದು ಹೆತ್ತವರ ಸಂಕಟ ಮತ್ತು ಆತಂಕಕ್ಕೆ ಕಾರಣವಾಗಿದೆ.

ಪಾಲಕರಿಗೆ ಮೊಮ್ಮಕ್ಕಳನ್ನು ಆಡಿಸಬೇಕು, ಮುದ್ದಾಡಬೇಕು ಎನ್ನುವುದರ ಜತೆಗೆ ವಂಶಾಭಿವೃದ್ಧಿ ಆಗಬೇಕೆನ್ನುವ ಹಂಬಲ. ಆದರೆ ಇಂದಿನ ಅನೇಕ ದಂಪತಿಗಳಿಗೆ ಇದು ಬೇಡವಾಗಿದೆ. ಪೆ್ರಗ್ನನ್ಸಿ, ಮಕ್ಕಳು ಮರಿ ಈ ಜಂಜಾಟವೆಲ್ಲ ಬೇಡ. ಜತೆಜತೆಯಾಗಿ ಹಾಯಾಗಿ ಇರೋಣ ಸಾಕು. ಬೇಸರವಾದಾಗ ವಿದೇಶವೋ ಅಥವಾ ಮನಬಂದಲ್ಲಿ ಟೂರ್ ಮಾಡೋಣ. ಎಂಜಾಯ್ ಮಾಡೋಣ ಎನ್ನುವ ಮನಸ್ಥಿತಿ ಬಂದಿದೆ. ಇದು ತಪ್ಪು. ಆದರೆ ಇದನ್ನು ತಿದ್ದಿ ಹೇಳುವ ತುರ್ತು ಅಗತ್ಯ ಇಂದಿನದ್ದಾಗಿದೆ. ನಾನು ನೋಡಿದ ಹಾಗೆ ಹಲವು ನವಜೋಡಿಗಳಿಗೆ ಪಾಲಕರ ಮಾರ್ಗದರ್ಶನದ ಕೊರತೆಯೂ ಇದೆ. ಇನ್ನು ಕೆಲವು ಪ್ರಕರಣಗಳಲ್ಲಿ ಪಾಲಕರು ತಮ್ಮ ಮಕ್ಕಳು ಇಂದಿನ ಜನರೇಶನ್​ನವರು. ಸಾಕಷ್ಟು ಓದಿಕೊಂಡವರು. ಕೂಡಲೇ ಅಲ್ಲದಿದ್ದರೂ ಒಂದೆರಡು ವರ್ಷ ಬಿಟ್ಟು ಮಕ್ಕಳು ಮರಿಗೆ ಮುಂದಾಗುತ್ತಾರೆ ಎನ್ನುವ ವಿಶ್ವಾಸ. ಹೀಗಾಗಿ ಎಲ್ಲೋ ಒಂದೆಡೆ ಸಮನ್ವಯದ ಕೊರತೆ ಸ್ಪಷ್ಟವಾಗಿ ಕಂಡು ಬರುತ್ತಿದೆ. ಅನಾದಿ ಕಾಲದಿಂದ ನಡೆದು ಬಂದ ಕೌಟುಂಬಿಕ ವ್ಯವಸ್ಥೆಯಲ್ಲಿ ಸುಖವಿದೆ. ನೆಮ್ಮದಿಯಿದೆ. ಅದಕ್ಕೆ ಹೇಳೋದು, ಹಿರಿಯರ ಅನುಭವದ ಮಾತುಗಳಲ್ಲಿ ಅಮೃತವಿದೆ ಅಂತ. ಯಾವ ಯಾವ ಸಮಯಕ್ಕೆ ಏನು ಆಗಬೇಕೋ ಹೇಗೆ ಆಗಬೇಕೋ ಅದು ನಡೆದಾಗ ಮಾತ್ರ ಜೀವನಸೂತ್ರ ಸುಸೂತ್ರವಿದ್ದಂತೆ. ಇಲ್ಲದಿದ್ದರೆ ಮನೆಯಲ್ಲಿ ಮನಸ್ತಾಪ, ರಗಳೆ, ಕೌಟುಂಬಿಕ ಕಲಹಗಳು ಆರಂಭಗೊಳ್ಳುತ್ತವೆ. ಹಿರಿಯರ ಮನಸ್ಸು ಘಾಸಿಗೊಳ್ಳುತ್ತವೆ. ಪರಿಣಾಮ ಬೇರೆ ಬೇರೆ ಘಟನೆಗಳಿಗೆ ಎಡೆ ಮಾಡಿ

ಕೊಟ್ಟಂತಾಗುತ್ತದೆ. ಇದನ್ನು ತಪ್ಪಿಸುವ ಗುರುತರ ಜವಾಬ್ದಾರಿ ಇಂದಿನ ಯುವ ಸಮೂಹದ ಮೇಲಿದೆ. ಮುಖ್ಯವಾಗಿ ಇಂದಿನ ಜೋಡಿ ಪರಸ್ಪರ ಮನಸ್ಸುಗಳ ಬೆಸುಗೆಗೆ ಮುಂದಾಗಬೇಕಿದೆ. ಕೇವಲ ದೈಹಿಕ ಸಂಪರ್ಕವಷ್ಟೇ ಈ ಬೆಸುಗೆಯ ಉದ್ದೇಶವಲ್ಲ. ಎರಡು ಮನಸ್ಸುಗಳು ಪರಸ್ಪರ ಅರಿತಾಗ ಭಾವನೆಗಳು ಬೆರೆತಾಗ ಮುಂದೆ ಎಲ್ಲವೂ ಸುಲಲಿತವಾಗಿ ಸಾಗುತ್ತದೆ. ಇದರಿಂದ ಗುರುಹಿರಿಯರಿಗೂ ನೆಮ್ಮದಿಯ ಭಾವ ಮೂಡುತ್ತದೆ. ಒಟ್ಟಾರೆ ಇಡೀ ಕುಟುಂಬ ಸಂತಸದ ಹೊನಲಿನಲ್ಲಿ ತೇಲುತ್ತದೆ. ಅದು ಇಂದಿನ ತುರ್ತು ಅಗತ್ಯ. ಒಬ್ಬ ಮನೋವಿಜ್ಞಾನಿಯಾಗಿ ನಾನು ಇಂತಹ ಪ್ರಕರಣಗಳಲ್ಲಿ ಸಲಹೆ ನೀಡುವುದು ಕೂಡ ಇದೇ. ಕೂಡಿ ಬಾಳಿ, ಅರಿತು ಬಾಳಿ ನೆಮ್ಮದಿಯಿಂದ ಇರಿ.