ಬೆಂಗಳೂರು: (traffic jam) ದಸರಾ ಹಬ್ಬ ರಜೆ ಮುಗಿಸಿ ಊರಿಂದ ನಗರಕ್ಕೆ ಜನರು ವಾಪಸ್ ಆಗಮಿಸಿದ ಹಿನ್ನೆಲೆಯಲ್ಲಿ ರಾಜಧಾನಿಯ 5 ದಿಕ್ಕುಗಳಲ್ಲಿ ಭಾನುವಾರ ತೀವ್ರ ವಾಹನ ದಟ್ಟಣೆ ಉಂಟಾಗಿತ್ತು.
ತುಮಕೂರು ರಸ್ತೆ, ಮೈಸೂರು ರಸ್ತೆ, ಕೆ.ಆರ್.ಪುರ ರಸ್ತೆ, ಬಳ್ಳಾರಿ ರಸ್ತೆ ಮತ್ತು ಹೊಸೂರು ರಸ್ತೆ ಸೇರಿ ಸುತ್ತಮುತ್ತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉದ್ದುದ್ದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಚಾಲಕರು ಹಾಗೂ ಪ್ರಯಾಣಿಕರು ಪರದಾಡಿದರು.
ದಸರಾ ಹಬ್ಬಕ್ಕೆಂದು ಜನರು ಊರಿನತ್ತ ಪ್ರಯಾಣ ಬೆಳೆಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆಯಿಂದ ತಡರಾತ್ರಿವರೆಗೂ ದಟ್ಟಣೆ ಇತ್ತು. ಶನಿವಾರವೂ ಅದೇ ಪರಿಸ್ಥಿತಿಯಿತ್ತು. ವಾಹನ ಸವಾರರು, ಮುಂದಕ್ಕೆ ಸಾಗುವುದಕ್ಕೂ ಕಷ್ಟವಾಗಿತ್ತು. ಮಳೆಯಿಂದಾಗಿ ಪ್ರಯಾಣಿಕರು ಕಿರಿಕಿರಿ ಅನುಭವಿಸಿದ್ದರು. ರಾಜಾಜಿನಗರದಿಂದ ಯಶವಂತಪುರ ತಲುಪಲು ಬರೋಬ್ಬರಿ 2 ಗಂಟೆಗೂ ಅಧಿಕ ಸಮಯ ಹಿಡಿದಿತ್ತು. 30 ನಿಮಿಷದ ಪ್ರಯಾಣಿಸುವ ಮಾರ್ಗಗಳಲ್ಲೂ 3-4 ಗಂಟೆ ದಟ್ಟಣೆಯಲ್ಲಿ ಸಿಲುಕಿ ಜನರು ಪರದಾಡಿದರು.
ಇದೀಗ, ಸ್ವಂತ ಊರುಗಳಿಗೆ ತೆರಳಿದ್ದ ಜನರು ಹಬ್ಬ ಮುಗಿಸಿ ತಮ್ಮ ಕಾರು ಮತ್ತು ಬೈಕ್ ಸೇರಿ ಬಸ್‌ಗಳಲ್ಲಿ ಹಿಂತಿರುಗಿದ ಹಿನ್ನೆಲೆಯಲ್ಲಿ ನಗರ ಸಂಪರ್ಕಿಸುವ ಸಂಪರ್ಕ ರಸ್ತೆಗಳಲ್ಲಿ ವಾಹನಗಳಿಂದ ತುಂಬಿ ಹೋಗಿದ್ದವು. ತುಮಕೂರು ರಸ್ತೆಯ ನಾಗಸಂದ್ರದಿಂದ ಗೊರಗುಂಟೆಪಾಳ್ಯದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ನೆಲಮಂಗಲ ರಸ್ತೆ, ಪೀಣ್ಯದ ಮೇಲ್ಸೇತುವೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಮೈಸೂರು ರಸ್ತೆಯಲ್ಲೂ ಅದೇ ಪರಿಸ್ಥಿತಿ ಇತ್ತು. ಜಂಜೂ ಸವಾರಿ ವೀಕ್ಷಿಸಿದ ಸಾವಿರಾರು ಜನರು ಮೈಸೂರಿಂದ ಬೆಂಗಳೂರಿಂದ ಆಗಮಿಸಿದ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಉಂಟಾಯಿತು. ಎಕ್ಸ್‌ಪ್ರೆಸ್ ವೇ ದಾಟಿದ ಬಳಿಕ ನಗರದ ಒಳ ಭಾಗಕ್ಕೆ ಸಂಪರ್ಕಿಸುವ ರಸ್ತೆಗಳಿಗೆ ತಲುಪುವುದಕ್ಕೂ ಸಾಕಷ್ಟು ಸಮಯ ಹಿಡಿಯುತ್ತಿತ್ತು.
ಹೊಸೂರು ರಸ್ತೆ ಮತ್ತು ಬಳ್ಳಾರಿ ರಸ್ತೆಯುದ್ದಕ್ಕೂ ಸಾಲುಸಾಲಾಗಿ ಸಾಗುತ್ತಿದ್ದ ವಾಹನಗಳಿಂದ ಅಧಿಕ ದಟ್ಟಣೆ ಉಂಟಾಯಿತು.ರಾಷ್ಟ್ರೀಯ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಟ್ರಾಫಿಕ್ ಜಾಮ್‌ನಿಂದ ಸಂಭವಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹರಿದಾಡಿದವು.
ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ದಟ್ಟಣೆ ಕಂಡುಬಂತು. ರೈಲು ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಯಶವಂತಪುರ ರೈಲು ನಿಲ್ದಾಣ ಸೇರಿ ವಿವಿಧೆಡೆ ಭಾರಿ ಜನಜಂಗುಳಿ ಇತ್ತು. ಸೋಮವಾರವೂ ವಾಹನ ದಟ್ಟಣೆ ಕಂಡುಬರುವ ಸಾಧ್ಯತೆ ಇದೆ.