ಬೆಂಗಳೂರು: ಜಮೀನು, ನಿವೇಶನ, ಮನೆ ಖರೀದಿ ಮಾಡುವ ಉದ್ದೇಶವಿದ್ದರೆ ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ. ಏಕೆಂದರೆ ಸದ್ಯದಲ್ಲಿಯೇ ಭೂಮಿಯ ಮಾರ್ಗಸೂಚಿ ಬೆಲೆ ಹೆಚ್ಚಳವಾಗಲಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಹಲವು ಮಾರ್ಗಗಳನ್ನು ಹುಡುಕುತ್ತಿದ್ದು, ಸ್ಥಿರಾಸ್ತಿಗಳ ಬೆಲೆ ಅಕ್ಟೋಬರ್ನಿಂದ ಹೆಚ್ಚಾಗಲಿದೆ. ಅದಕ್ಕೆ ಪೂರಕವಾಗಿ ತಾತ್ಕಾಲಿಕ ಮಾರ್ಗಸೂಚಿ ಬೆಲೆಗಳನ್ನು ಸರ್ಕಾರ ಶುಕ್ರವಾರ ಪ್ರಕಟಿಸಲಿದ್ದು, 15 ದಿನಗಳ ಕಾಲ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ಅ. 1ರಿಂದ ಹೊಸ ದರ ಜಾರಿಗೆ ಬರಲಿದೆ.
ಎಷ್ಟು ಹೆಚ್ಚಳ?: ಮಾರ್ಗಸೂಚಿ ಬೆಲೆ ಶೂನ್ಯದಿಂದ ಶೇ.90ರ ತನಕ ಹೆಚ್ಚಳವಾಗುತ್ತದೆ. ಒಟ್ಟಾರೆ ಸರಾಸರಿ ಶೇ.30 ರಷ್ಟು ಹೆಚ್ಚಳವಾಗುತ್ತದೆ. ಸಾರ್ವ ಜನಿಕರಿಂದ ಬರುವ ಆಕ್ಷೇಪಣೆ ಗಳನ್ನು ಆಧರಿಸಿ ಅಂತಿಮವಾಗಿ ಮಾರ್ಗಸೂಚಿ ಬೆಲೆಗಳು ಪ್ರಕಟ ವಾಗಲಿವೆ. ನೋಂದಣಿ ಮಹಾ ನಿರ್ದೇಶಕರು ಹಾಗೂ ಮುದ್ರಾಂಕ ಆಯುಕ್ತರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಸರ್ಕಾರ ಬುಧವಾರ ತಾತ್ಕಾಲಿಕ ಮಾರ್ಗಸೂಚಿ ಬೆಲೆಗಳಿಗೆ ಅನುಮೋದನೆ ನೀಡಿತ್ತು. ಐದು ವರ್ಷಗಳ ನಂತರ ಮಾರ್ಗಸೂಚಿ ಬೆಲೆಗಳನ್ನು ಸರ್ಕಾರ ಪರಿಷ್ಕರಣೆ ಮಾಡುತ್ತಿದೆ. ರಾಜ್ಯದ ಎಲ್ಲ ಉಪ ನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು 5 ವರ್ಷಗಳ ಅವಧಿಯಲ್ಲಿ ಪರಿಷ್ಕರಿಸಿಲ್ಲ. ಈ ಅವಧಿಯಲ್ಲಿ ಸಾಕಷ್ಟು ಭೌತಿಕ ಅಭಿವೃದ್ಧಿ ಹಾಗೂ ಬೆಳವಣಿಗೆಗಳು ಆಗಿವೆ.
ಎಲ್ಲಾ ನ್ಯೂನತೆಗಳನ್ನು ಪ್ರಸ್ತಕ ಸಾಲಿನಲ್ಲಿ ಸರಿಪಡಿಸಿ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ತಾತ್ಕಾಲಿಕ ಅಧಿಸೂಚನೆಯ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ. ತಹಸೀಲ್ದಾರ್ ಅಧ್ಯಕ್ಷತೆಯ ಸಮಿತಿಗಳು ಸ್ಥಳೀಯ ದರಗಳನ್ನು ನಿಗದಿ ಮಾಡಿವೆ. ಎಲ್ಲ ಕಡೆ ಸಾರ್ವಜನಿಕ ಆಕ್ಷೇಪಣೆ ಪಡೆದ ನಂತರ ಅಂತಿಮ ದರ ಪ್ರಕಟಿಸಲಾಗುತ್ತದೆ.
ಮಾಹಿತಿ ಎಲ್ಲಿ ಲಭ್ಯ?: ತಾತ್ಕಾಲಿಕ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳು ಜಿಲ್ಲಾ ನೋಂದಣಿ ಕಚೇರಿ, ಉಪ ನೋಂದಣಿ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್, ಬಿಬಿಎಂಪಿ, ಬಿಎಂಆರ್ಡಿಎ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಹಾಗೂ ಇಲಾಖೆಯ ಜಾಲತಾಣ https://igr.karnataka.gov.in ಲಭ್ಯವಿದೆ. ಈ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿವಸಗಳೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ಕೇಂದ್ರ ಮೌಲ್ಯಮಾಪನ ಸಮಿತಿ ಹಾಗೂ ನೋಂದಣಿ ಉಪ ಮಹಾವೀಕ್ಷಕರು, ಕೇಂದ್ರ ಮೌಲ್ಯ ಮಾಪನ ಸಮಿತಿ ಇವರಿಗೆ ಸದಸ್ಯ ಕಾರ್ಯದರ್ಶಿಗಳು, ಕೇಂದ್ರ ಮೌಲ್ಯಮಾಪನ ಸಮಿತಿ, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರವರ ಕಚೇರಿ, ಕಂದಾಯ ಭವನ, 8ನೇ ಮಹಡಿ, ಕೆ.ಜಿ ರಸ್ತೆ, ಬೆಂಗಳೂರು ಇಲ್ಲಿಗೆ ಅಂಚೆ ಮೂಲಕವಾಗಲೀ, ಖುದ್ದಾಗಿ ಅಥವಾ ಇ-ಮೇಲ್ ್ಚ್ಚಚ್ಜಿಛ್ಚಿಠಿಜಿಟ್ಞಠಠಿಟ್ಞಟಠಿಜ್ಛಿಜ್ಚಿಚಠಿಜಿಟ್ಞಠkಚ್ಟ್ಞಠಿಚkಚ. ಜಟಡ.ಜ್ಞಿ ಮುಖಾಂತರ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಿಯಮಗಳ ಪ್ರಕಾರ ಪ್ರತಿ ವರ್ಷ ಮಾರ್ಗಸೂಚಿ ಬೆಲೆ ಹೆಚ್ಚಳವಾಗಬೇಕು. ಆದರೆ ರಾಜ್ಯದಲ್ಲಿ 2019ರ ನಂತರ ಮಾರ್ಗಸೂಚಿ ಬೆಲೆ ಹೆಚ್ಚಳ ಮಾಡಿಲ್ಲ. ಎರಡು ವರ್ಷ ಕರೊನಾ ಕಾಡಿದ್ದರಿಂದ ನೋಂದಣಿ ಕುಸಿದು ಹೋಗಿತ್ತು. ಹಿಂದಿನ ಸರ್ಕಾರ ಕಳೆದ ಎರಡು ವರ್ಷಗಳ ಕಾಲ ದರ ಕಡಿಮೆ ಮಾಡಿದ್ದರಿಂದ ನೋಂದಣಿ ಮತ್ತು ಮುದ್ರಾಂಕ ತೆರಿಗೆ ಹೆಚ್ಚಳ ಕಂಡಿತ್ತು. ನಿರೀಕ್ಷೆಗಿಂತ ಪ್ರತಿ ವರ್ಷ ಒಂದು ಸಾವಿರ ಕೋಟಿ ರೂ. ಹೆಚ್ಚಳ ಸಂಗ್ರಹವಾಗಿತ್ತು. ರಾಜ್ಯದಲ್ಲಿ 255 ಉಪ ನೋಂದಣಿ ಕಚೇರಿಗಳಿವೆ. ಅವುಗಳ ಪೈಕಿ ಶೇ.10 ರಷ್ಟು ಕಚೇರಿಗಳ ವ್ಯಾಪ್ತಿಯಲ್ಲಿ ಮಾತ್ರ ಮಾರ್ಗಸೂಚಿ ಬೆಲೆ ಅತ್ಯಂತ ಕಡಿಮೆ ಇದೆ. ಮುಂದೆ ಎಲ್ಲ ಕಡೆ ಹೆಚ್ಚಳವಾಗಲಿದೆ. ಮಾರ್ಗಸೂಚಿ ಬೆಲೆ ಹೆಚ್ಚಾದರೆ ಸಹಜವಾಗಿಯೇ ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳು ಜಾಸ್ತಿಯಾಗಲಿವೆ.
ಆಸ್ತಿ ಮಾರ್ಗಸೂಚಿ ಬೆಲೆ ಹೆಚ್ಚಳವಾಗುವು ದರಿಂದ ಸರ್ಕಾರ ಹೆಚ್ಚಿನ ಆದಾಯ ನಿರೀಕ್ಷೆ ಮಾಡುತ್ತಿದೆ. ಆದರೆ ನೋಂದಣಿಯ ಪ್ರಮಾಣ ಕಡಿಮೆಯಾಗುವ ಅಪಾಯ ವನ್ನು ತಳ್ಳಿ ಹಾಕುವಂತಿಲ್ಲ.