ಜಮ್ಮು ಕಣಿವೆನಾಡಿನ ಹಲವೆಡೆ ಕಳೆದ 36 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಧಾರಾಕಾರ ಮಳೆಯಿಂದಾಗಿ ಅಪಾರ ಹಾನಿಯಾಗಿದ್ದು, ಅಮರನಾಥ ಯಾತ್ರೆಗೆ ತೀವ್ರ ಅಡ್ಡಿಯಾಗಿದ ಪರಿಣಾಮ ಭಾರತೀಯ ಸೇನಾ ಅಧಿಕಾರಿಗಳು ಸ್ಥಳಾಂತರ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರತಿಕೂಲ ಹವಾಮಾನದಿಂದಾಗಿ ಪಹಲ್ಗಾಮ್ ಮತ್ತು ಬಾಲ್ಟಾಲ್ ಎರಡರಿಂದಲೂ ಇಂದು (17) ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರದೇಶದಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ, ಕೆಲವು ಯಾತ್ರಿಕರು ಕೊಚ್ಚಿ ಹೋಗಿರುವುದು ಕಂಡುಬಂದಿದೆ. ಗಂಡೇರ್ಬಾಲ್ ಜಿಲ್ಲೆಯ ಬಾಲ್ಟಾಲ್ ಯಾತ್ರೆಯ ಬಾಲ್ಟಾಲ್ ಮಾರ್ಗದಲ್ಲಿ ನೀರಿನ ಜೊತೆ ಕಲ್ಲು ಬಂಡೆಗಳು ಉರುಳಿ ಬಂದಿದ್ದರಿಂದ ಮಹಿಳೆಯೊಬ್ಬಳು ಸಿಲುಕಿ ಸಾವನ್ನಪ್ಪಿದ್ದಾಳೆ. ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇತರ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಫ್ರೀಸ್ಟೈಲ್ ಚೆಸ್; ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್ಸನ್ರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದ ಪ್ರಜ್ಞಾನಂದ|chess-event
(ಏಜೆನ್ಸೀಸ್)
ಹವಾಮಾನ ಇಲಾಖೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗಬಹುದು ಎಂಬ ಮುನ್ನೆಚ್ಚರಿಕೆ ನೀಡಿದೆ. ಯಾತ್ರೆ ಸಾಗುವ ಮಾರ್ಗದಲ್ಲೂ ಮಳೆ ಸಾಧ್ಯತೆ ಇರುವ ಕಾರಣ ಈ ವರ್ಷದ ಯಾತ್ರೆಯು ಮೊದಲ ಬಾರಿಗೆ ಸ್ಥಗಿತಗೊಂಡಿದೆ ಎಂದು ಮತ್ತೋರ್ವ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿರುವ ಯಾತ್ರಿಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಯಾತ್ರೆಯ ಮಾರ್ಗಗಳ ದುರಸ್ಥಿ ಕಾರ್ಯ ಮುಗಿಯುವವರೆಗೂ ಯಾತ್ರೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.