ನ್ಯೂಸ್

ಪಾಕಿಸ್ತಾನದಲ್ಲಿ ಧಾರಾಕಾರ ಮಳೆ, ಪ್ರವಾಹ: 116 ಮಂದಿ ಸಾವು, 253 ಜನರಿಗೆ ಗಾಯ | Pakistan rains

Pakistan rains: ಜೂನ್ 26 ರಿಂದ ಪಾಕಿಸ್ತಾನದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಹಠಾತ್ ಪ್ರವಾಹವು ಅಪಾರ ಹಾನಿಯನ್ನುಂಟುಮಾಡಿದೆ. ಇದರಿಂದ ಪಾಕ್‌ನ ವಿವಿಧ ಪ್ರದೇಶಗಳಲ್ಲಿ ಇದುವರೆಗೆ ಕನಿಷ್ಠ 116 ಜನರು ಸಾವನ್ನಪ್ಪಿದ್ದು, 253 ಜನರು ಗಾಯಗೊಂಡಿದ್ದಾರೆ. ಈ ಮಾಹಿತಿಯನ್ನು ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಂಗಳವಾರ (ಜು.15) ನೀಡಿದೆ.

ತುರ್ತು ಸ್ಥಳಾಂತರಿಸುವ ಎಚ್ಚರಿಕೆ

ಇಸ್ಲಾಮಾಬಾದ್‌ನಲ್ಲಿ ನಿರಂತರ ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಏರಿಕೆಯಾದ ನಂತರ ಪಾಕಿಸ್ತಾನದ ಅಧಿಕಾರಿಗಳು ರಾವಲ್ಪಿಂಡಿಯ ನಲಾ ಲೈ ಬಳಿಯ ಗವಲ್ಮಂಡಿ ಮತ್ತು ಕಟಾರಿಯನ್ ಸೇರಿದಂತೆ ತಗ್ಗು ಪ್ರದೇಶಗಳಿಗೆ ತುರ್ತು ಸ್ಥಳಾಂತರಿಸುವ ಎಚ್ಚರಿಕೆ ನೀಡಿದ್ದಾರೆ ಎಂದು ಪಾಕಿಸ್ತಾನ ಹವಾಮಾನ ಇಲಾಖೆ ಗುರುವಾರ (ಜು.17) ತಿಳಿಸಿದೆ.

ಕಳೆದ ಕೆಲವು ದಿನಗಳಿಂದ ಪಂಜಾಬ್‌ನ ಅನೇಕ ಪ್ರದೇಶಗಳು ಮತ್ತು ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿ ಅವಳಿ ನಗರಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ರಾತ್ರಿಯಿಡೀ ತೀವ್ರ ಮಳೆಯಾಗಿದೆ. ಪಂಜಾಬ್‌ನ ಚಕ್ವಾಲ್ ಜಿಲ್ಲೆಯಲ್ಲಿ ಕೇವಲ 10 ಗಂಟೆಗಳಲ್ಲಿ 400 ಮಿಮೀ ಮಳೆಯಾಗಿದೆ, ಇದು ದಿಢೀರ್ ಪ್ರವಾಹ ಮತ್ತು ವ್ಯಾಪಕ ಜಲಾವೃತಿಗೆ ಕಾರಣವಾಯಿತು ಎಂದು ಪಿಎಂಡಿ ತಿಳಿಸಿದೆ.

"ಚಕ್ವಾಲ್‌ನಲ್ಲಿ 10 ಗಂಟೆಗಳಲ್ಲಿ 400 ಮಿಮೀ ಮಳೆಯಾಗಿದ್ದು, ಇದರಿಂದಾಗಿ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ" ಎಂದು ಪಿಡಿಎಂಎ ವಕ್ತಾರ ಇರ್ಫಾನ್ ಅಲಿ ಕಥಿಯಾ ಹೇಳಿದ್ದಾರೆ.

ಪಾಕಿಸ್ತಾನ ಹವಾಮಾನ ಇಲಾಖೆಯು ಜುಲೈ 17 ರವರೆಗೆ ದೇಶಾದ್ಯಂತ ಭಾರೀ ಮಳೆ ಮತ್ತು ಗಾಳಿ-ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಪೊಟೊಹಾರ್ ಪ್ರದೇಶ, ಪಂಜಾಬ್, ಮೇಲಿನ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನದ ಕೆಲವು ಭಾಗಗಳಿಗೆ ಹಠಾತ್ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)