ನ್ಯೂಸ್

ಉತ್ತರ ಭಾರತದಲ್ಲಿ ಮುಂದುವರಿದ ವರುಣಾರ್ಭಟ! ಮುಂಬೈನ ಕೆಲವೆಡೆ ರೆಡ್​ ಅಲರ್ಟ್​, ಶಾಲೆಗಳಿಗೆ ರಜೆ | Heavy Rain

Heavy Rain: ಹವಾಮಾನ ವೈಪರೀತ್ಯದಿಂದ ಭಾರತದ ಹಲವೆಡೆ ಧಾರಕಾರ ಮಳೆಯಾಗುತ್ತಿದ್ದು, ಮುಂಬೈನಲ್ಲಿ ಸತತ ಮೂರನೇ ದಿನವೂ ಭಾರಿ ಮಳೆ ಸುರಿದಿದೆ. ರಾಜ್ಯದ ಹಲವು ಜಿಲ್ಲೆಗಳಿಗೆ ಐಎಂಡಿ 'ರೆಡ್ ಅಲರ್ಟ್' ಘೋಷಿಸಿದ್ದು, ಕೆಲವು ಭಾಗಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರೊಂದಿಗೆ, ಪ್ರವಾಹ ಭೀತಿ ಕೂಡ ಎದುರಾಗಿದೆ.

ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನರು ತತ್ತರಿಸಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಲವಾರು ಪ್ರದೇಶಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ. ಧಾರಕಾರ ಮಳೆಯಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಇಂದು ರತ್ನಗಿರಿ ಜಿಲ್ಲೆಗೆ ಐಎಂಡಿ ರೆಡ್ ಅಲರ್ಟ್​ ಸೂಚಿಸಿದ್ದು, ಸೋಮವಾರ ಮತ್ತು ಮಂಗಳವಾರ ಸಿಂಧುದುರ್ಗಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ.

ಅಧಿಕಾರಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಮುಂಬೈ ನಗರದಲ್ಲಿ 54 ಮಿ.ಮೀ.ಗಿಂತ ಅಧಿಕ ಮಳೆಯಾಗಿದ್ದು, ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ 72 ಮಿ.ಮೀ. ಮತ್ತು 65 ಮಿ.ಮೀ. ಮಳೆಯಾಗಿದೆ. ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಜನರು, ತೀರ ಅಗತ್ಯವಿದ್ದರೆ ಮಾತ್ರ ಮನೆಗಳಿಂದ ಹೊರಬನ್ನಿ ಎಂದು ಪಾಲಿಕೆ ಅಧಿಕಾರಿಗಳು ಸೂಚಿಸಿದ್ದಾರೆ,(ಏಜೆನ್ಸೀಸ್​).