ಬೆಂಗಳೂರು: ರಾಜ್ಯಾದ್ಯಂತ ಮುಂದಿನ ನಾಲ್ಕು ವಾರದಿಂದ ಆರು ವಾರ ಮಳೆ ಬೀಳುವ ಸಾಧ್ಯತೆ ಇರುವ ಕಾರಣ ಸರ್ಕಾರ ನಾಲ್ಕು ಮಹತ್ವದ ಸೂಚನೆಯನ್ನು ಜಿಲ್ಲಾಡಳಿತಗಳಿಗೆ ನೀಡಿದೆ.
ಸಾವು ನೋವು ತಪ್ಪಿಸುವುದು ಮೊದಲ ಆದ್ಯತೆಯಾಗಿರಬೇಕು ಮತ್ತು ಮಳೆಯಾದಾಗ ಜಲಾಶಯಗಳಲ್ಲಿ ಏಕಾಏಕಿ ನೀರಿನ ಸಂಗ್ರಹ ಹೆಚ್ಚಾಗಿ ಪ್ರವಾಹ ಉಂಟಾಗುವುದನ್ನು ತಡೆಗಟ್ಟಲು ಮುಂಚಿತವಾಗಿಯೇ ಸೂಕ್ತ ಪ್ರಮಾಣದ ನೀರನ್ನು ಜಲಾಶಯಗಳಿಂದ ಹೊರಗೆ ಬಿಡುಗಡೆ ಮಾಡಲು ಸಮನ್ವಯತೆಯಿಂದ ಕೆಲಸ ಮಾಡಿ ಎಂದು ನಿರ್ದೇಶನ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿ ಪರಿಶೀಲನೆ ಕುರಿತು ನಡೆಯಿತು, ಈ ಸಭೆಯಲ್ಲಿ ಅಗತ್ಯ ಸೂಚನೆ ನೀಡಲಾಯಿತು.
ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. 20 ಸಾವಿರ ರೂ. ಅನುದಾನ ಒದಗಿಸಲಾಗಿದೆ. ಸಾವು ನೋವು ತಪ್ಪಿಸುವುದು ನಮ್ಮ ಆದ್ಯತೆ. ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ಬಲಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಲಾಗಿದೆ.
ರಾಜ್ಯದಲ್ಲಿ ಮನೆ ಕುಸಿದು 29 ಸಾವು ಸಂಭವಿಸಿದ್ದು, ನಗರ ಮತ್ತು ಗ್ರಾಮ ಪ್ರದೇಶಗಳಲ್ಲಿ ಶಿಥಿಲಗೊಂಡ ಮನೆಗಳಲ್ಲಿರುವವರನ್ನು ಖಾಲಿ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಮನೆ ಕುಸಿತ, ನೀರಿನಲ್ಲಿ ಕೊಚ್ಚಿ ಹೋಗುವಂತಹ ಪ್ರಕರಣಗಳಲ್ಲಿ ಸಾವು ನೋವು ತಪ್ಪಿಸಲು ಸಾಧ್ಯವಿದೆ. ಶಿಥಿಲವಾದ ಮನೆಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಗ್ರಾಮಮಟ್ಟದಲ್ಲಿ ಮೊದಲೇ ಗುರುತಿಸಬೇಕೆಂದು ತಿಳಿಸಲಾಯಿತು.
ಸೇತುವೆಗಳ ಫಿಟ್‌ನೆಸ್‌ಗಳ ಬಗ್ಗೆ ವರದಿಯನ್ನು ಲೋಕೋಪಯೋಗಿ ಇಲಾಖೆಯಿಂದ ಪಡೆಯಬೇಕು. ಸಂಪರ್ಕ ರಸ್ತೆಗಳು ಕುಸಿದಿದ್ದರೆ ಅವುಗಳನ್ನು ಸರಿಪಡಿಸಿ, ವಾಹನ ಸಂಚಾರಕ್ಕೆ ಸುಗಮಗೊಳಿಸಬೇಕು. ಎಲ್ಲಾ ಸೇತುವೆ, ರಸ್ತೆಗಳನ್ನು ನಿರಂತರವಾಗಿ ಪರಿಶೀಲನೆ ನಡೆಸಿ ಯಾವುದೇ ಅನಾಹುತವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ಕೊಡಲಾಗಿದೆ.
ಮುಳುಗು ಸೇತುವೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಬೇಕು. ಯಾವುದೇ ಕಾರಣಕ್ಕೂ ವಾಹನ ಸಂಚರಿಸದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಅಂಗನವಾಡಿ , ಶಾಲೆ ಕಟ್ಟಡಗಳ, ಸೇತುವೆಗಳು, ಕರೆಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಮಲೆನಾಡು, ಕರಾವಳಿ ಭಾಗಗಳಲ್ಲಿ ಇರುವ ಹಳೇ ಶಾಲಾ ಕಟ್ಟಡಗಳನ್ನು ಗುರುತಿಸಿ, ಕ್ರಿಯಾ ಯೋಜನೆಯಲ್ಲಿ ಆದ್ಯತೆ ಮೇರೆಗೆ ದುರಸ್ತಿ ಪಡಿಸಬೇಕೆಂದು ನಿರ್ದೇಶನ ನೀಡಲಾಗಿದೆ.
ಪ್ರವಾಹ ಸಂದರ್ಭದಲ್ಲಿ ಉದ್ಭವವಾಗಬಹುದಾದ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಡೆಂಗ್ಯು ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಚಿಕುನ್‌ಗುನ್ಯಾ, ಮಲೇರಿಯಾ ರೋಗ ಹರಡದಂತೆ ಕೂಡ ಎಚ್ಚರಿಕೆ ವಹಿಸುವಂತೆ ಸೂಚಿಸಲಾಯಿತು.
ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿವಿಧ ಏತ ನೀರಾವರಿ ಯೋಜನೆಗಳಡಿ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲೆಲ್ಲ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಜತೆಗೆ ಪ್ರವಾಹ ಇರುವಾಗ ನೀರಿಗೆ ಇಳಿಯಲು ಬಿಡಬಾರದು, ಪೊಲೀಸರ ಸಹಕಾರದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತ್, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಮುಂಜಾಗರೂಕತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.