ನ್ಯೂಸ್

ಮುಂದಿನ 5 ದಿನಗಳ ಕಾಲ ಭಾರೀ ಮಳೆ ; ಯಾವ್ಯಾವ ಜಿಲ್ಲೆಗಳಿಗೆ ಅಲರ್ಟ್​ | Rain

ಸುದೀಪ್​ ವಿ.ಎನ್​

ಮಾರ್ಚ್‌ 22ರಂದು ಬೆಂಗಳೂರು ಸೇರಿ ರಾಜ್ಯದ ಕೆಲವು ಭಾಗಗಳಲ್ಲಿ ವರುಣನ ಆಗಮನವಾಗಿದೆ. ಬಿಸಿಲಿನ ಶಾಖದಿಂದ ಬೇಸತ್ತಿದ್ದ ಜನರಿಗೆ ಕಳೆದ ರಾತ್ರಿ ವರುಣ ತಂಪೆರದಿದ್ದಾನೆ. ಭಾರತ ಹವಾಮಾನ ಇಲಾಖೆ (IMD) ಮಾರ್ಚ್ 22 ಮತ್ತು 23 ರಂದು ಸಾಧಾರಣ ಮಳೆ ಮತ್ತು ಗುಡುಗು ಸಹಿತ ಮಳೆಯಾಗುತ್ತೆ ಎಂಬ ಮುನ್ಸೂಚನೆ ನೀಡಿತ್ತು. ಅದರಂತೆ ಕಳೆದ ದಿನ ಬೆಂಗಳೂರಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗಿದೆ. ಆದರೆ ಇಂದೂ ಸಹ ರಾಜ್ಯ ರಾಜಧಾನಿ ಸೇರಿ ರಾಜ್ಯದ ಕೆಲ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯೊಂದಿಗೆ ಎಚ್ಚರಿಕೆ ನೀಡಿದೆ.

Rain | ದೇಶದ ಬಹುತೇಕ ರಾಜ್ಯಗಳಲ್ಲಿ ರಣಭೀಕರ ಬಿಸಿಲು ಮುಂದುವರೆದಿದೆ. ಈ ನಡುವೆ ಬಿಸಿಲ ಶಾಖದಿಂದ ಬಳಲುತ್ತಿದ್ದ ರಾಜ್ಯದ ಮೇಲೆ ವರುಣ ತನ್ನ ಕೃಪೆ ತೋರಿದ್ದಾನೆ. ಅದರಂತೆ ಇಂದು ಸಹ ರಾಜ್ಯದ ಕೆಲವೊಂದಿಷ್ಟು ಭಾಗಗಳಲ್ಲಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇನ್ನೂ 5 ದಿನ ವರುಣಾರ್ಭಟ:

ಇನ್ನೂ ಈ ಬಗ್ಗೆ ಹಿರಿಯ ಹವಾಮಾನ ತಜ್ಞ ಸಿಎಸ್ ಪಾಟೀಲ್ ಪ್ರತಿಕ್ರಿಯಿಸಿದ್ದು, ಕರ್ನಾಟಕದಾದ್ಯಂತ ಮುಂಗಾರು ಪೂರ್ವದಲ್ಲಿ ತಾಪಮಾನದಲ್ಲಿ ಇಳಿಕೆ ಕಂಡುಬಂದಿದ್ದು, ಬೆಂಕಿಯಂತೆ ಸುಡುತ್ತಿದ್ದ ಬಿಸಿಲಿನಿಂದ ಪರಿಹಾರ ಸಿಕ್ಕಿದೆ.ಗಾಳಿಯ ರಭಸದ ಪ್ರಮಾಣ ಪ್ರಬಲವಾಗಿದೆ ಮತ್ತು ಬಂಗಾಳಕೊಲ್ಲಿಯಿಂದ ಉತ್ತಮ ತೇವಾಂಶದ ವಾತಾವರಣ ಇದೆ. ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಮತ್ತು ಭಾರೀ ಮಳೆಯಾಗುವ ನಿರೀಕ್ಷೆಯಿದೆ ಇದೆ ಎಂದಿದ್ದಾರೆ.

ಇಂದು ಹಾಗೂ ಮುಂದಿನ 5 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಾದ್ಯಂತ ಕೆಲ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಬಂಗಾಳಕೊಲ್ಲಿನ ತೇವಾಂಶ ಮತ್ತು ಭಾರೀ ಪ್ರಮಾಣದದಲ್ಲಿ ಗಾಳಿ ಬೀಸುತ್ತಿರೋದು ಈ ಬಾರಿಯ ಮಳೆಗೆ ಕಾರಣ ಎನ್ನಲಾಗಿದೆ.

ಇಂದು ಎಲ್ಲೆಲ್ಲಿ ಮಳೆ.?

ಹಾಸನ, ಕೊಡಗು, ಬಳ್ಳಾರಿ, ಚಿತ್ರದುರ್ಗ, ವಿಜಯನಗರ, ಚಾಮರಾಜನಗರ, ಮೈಸೂರು, ಶಿವಮೊಗ್ಗ, ಕಲಬುರಗಿ, ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೀದರ್, ವಿಜಯಪುರ, ಯಾದಗಿರಿ, ರಾಯಚೂರು, ಚಿಕ್ಕಮಗಳೂರು ಮತ್ತು ಕೊಪ್ಪಳ ಜಿಲ್ಲೆಗಳ ಕೆಲವೆಡೆ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಆದ್ದರಿಂದ ಇಂದು ಭಾನುವಾರ ಆದ ಕಾರಣ ಯಾರಾದರೂ ಹೊರಗೊಡೆ ಹೋದಲ್ಲಿ ಆದಷ್ಟು ಬೇಗ ತಮ್ಮ-ತಮ್ಮಗಳ ಮನೆಗಳಿಗೆ ಬಂದು ಸೇರುವುದು ಉತ್ತಮ.

ತಂಪಾಯ್ತು ಬೆಂಗಳೂರು

ಕೇರಳದ ಪಾಲಕ್ಕಾಡ್, ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನೂ ವರುಣನ ಆಗಮನದಿಂದ ಕೊಂಚ ತಂಪಾಗಿರುವ ಸಿಲಿಕಾನ್​ ಸಿಟಿಯಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ತಲುಪಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.