ನ್ಯೂಸ್

ದೇಶದ ಹಲವೆಡೆ ಮೂರು ದಿನ ಭಾರಿ ಮಳೆ

ನವದೆಹಲಿ: ದೆಹಲಿ, ಉತ್ತರಪ್ರದೇಶ, ಬಿಹಾರ ಸಹಿತ ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ ಮುಂದಿನ 3 ದಿನ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಮುನ್ಸೂಚನೆ ನೀಡಿದೆ. ಮುಂಗಾರು ಚುರುಕಾಗಿ ದೇಶಾದ್ಯಂತ ಧಾರಾಕಾರ ಮಳೆಯಾಗಿದ್ದು ಕೆಲವು ದಿನ ಮುಂದುವರಿಯಲಿದೆ ಎಂದು ಐಎಂಡಿ ಹೇಳಿದೆ.

ದೆಹಲಿಎನ್​ಸಿಆರ್​ನಲ್ಲಿ ಮಂಗಳವಾರದಿಂದ ಗುರುವಾರದವರೆಗೆ ಕುಂಭದ್ರೋಣ ಮಳೆಯಾಗಲಿದೆ. ಅರುಣಾಚಲ ಪ್ರದೇಶದಲ್ಲಿ ಆ.7ರಿಂದ 10ರ ವರೆಗೆ ಭಾರಿ ಮಳೆಯಾಗಲಿದೆ ಎಂದಿರುವ ಐಎಂಡಿ, ಎಚ್ಚರದಿಂದ ಇರುವಂತೆ ನಿರ್ದೇಶಿಸಿದೆ. ಆ.10ರ ವರೆಗೆ ಪಶ್ಚಿಮ ಬಂಗಾಳ, ಮೇಘಾಲಯದಲ್ಲೂ ಭಾರಿ ಮಳೆಯಾಗಲಿದೆ. ಸತತವಾಗಿ ಧಾರಾಕಾರ ಮಳೆ ಸುರಿಯುತ್ತಿರುವ ಹಿಮಾಚಲಪ್ರದೇಶದಲ್ಲಿ ರಸ್ತೆಗಳು ಹದಗೆಟ್ಟಿರುವುದರಿಂದ ಸಂಚಾರಯೋಗ್ಯವಲ್ಲದ 451 ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅವುಗಳಲ್ಲಿ 4 ಹೆದ್ದಾರಿಗಳೂ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತದ ಪರಿಸ್ಥಿತಿ ಸೃಷ್ಟಿ

ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೂಡ ಮುಂಂಗಾರು ಆರ್ಭಟ ಜೋರಾಗಿದ್ದು ಕೇರಳ-ತಮಿಳುನಾಡು ಗುಡ್ಡಗಾಡು ಪ್ರದೇಶಗಳಲ್ಲಿ ಬುಧವಾರದವರೆಗೆ ಜಾಸ್ತಿ ಮಳೆ ಆಗಲಿದೆ. ಕೇರಳದ ನದಿ-ಅಣೆಕಟ್ಟುಗಳು ತುಂಬಿದ್ದು 4 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕೇರಳ ಮತ್ತು ಬಂಗಾಳ ಕೊಲ್ಲಿಯಿಂದ ಹಿಡಿದು ತಮಿಳುನಾಡು ಕರಾವಳಿವರೆಗೆ ಚಂಡಮಾರುತದ ಪರಿಸ್ಥಿತಿ ಸೃಷ್ಟಿ ಆಗಿರುವುದು ಹವಾಮಾನ ತೀವ್ರತೆಗೆ ಕಾರಣವೆಂದು ಐಎಂಡಿ ಹೇಳಿದೆ.

15 ಜಿಲ್ಲೆಗಳಲ್ಲಿ ಮಳೆ ಬಿರುಸು

ಬೆಂಗಳೂರು: ಕರಾವಳಿ, ಮಲೆನಾಡು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಸಕ್ರಿಯವಾಗಿದ್ದು, ಮುಂದಿನ 4 ದಿನ ಆ ಭಾಗಗಳಲ್ಲಿ ಇನ್ನಷ್ಟು ಬಿರುಸಾಗಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮುಂದಿನ 3 ದಿನ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ, ವಿಜಯನಗರದಲ್ಲಿ ಮುಂದಿನ 2 ದಿನ ಯೆಲ್ಲೋ ಅಲರ್ಟ್, ಬಾಗಲಕೋಟೆ, ಗದಗ, ಕೊಪ್ಪಳದಲ್ಲಿ ಆ.6ರಂದು ಆರೆಂಜ್ ಅಲರ್ಟ್, ಮೈಸೂರು, ರಾಮನಗರ, ಚಾಮರಾಜನಗರದಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ. ಬೆಂಗಳೂರು ಮತ್ತು ಸುತ್ತಮುತ್ತ ಮುಂದಿನ 2 ದಿನ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವ ಇದೆ. ಗಂಟೆಗೆ 40 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ.