ನ್ಯೂಸ್

ಗಗನವು ಎಲ್ಲೋ ಭೂಮಿಯು ಎಲ್ಲೋ…

ರಮೇಶ್​ ಕುಮಾರ್​​ ಬಿ ಎಡಮೋಳೆ
ಮೂರರ ಆ ಹುಡುಗಿ ವಿಮಾನ ಚಿತ್ರಗಳ ಮೇಲೆ ಕಣ್ಣು ಕೀಲಿಸಿ ಕೂತಿರುತ್ತಿದ್ದಳು. ವಿಮಾನದ ಮೂಲಕ ಆಗಸಕ್ಕೆ ಹಾರುವ ಕನಸು ಆ ಮುಗ್ಧ ಮನದಲ್ಲಿ ಮೂಡುತ್ತಿದ್ದಿರಬೇಕು. ಆದರೆ ಅದು ಬರಿಯ ಕನಸಾಗಿ ಉಳಿಯಲಿಲ್ಲ. ಭಾರತ ಸಂಜಾತ ಮೊದಲ ಮಹಿಳಾ ಬಾಹ್ಯಾಕಾಶ ಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಲ್ಪನಾ ಚಾವ್ಲಾ ಎತ್ತರದ ಕನಸು ಕಾಣುವವರಿಗೆ ದೊಡ್ಡ ಪ್ರೇರಣೆ.

ಶಕ್ತಿ, ಭಕ್ತಿ ಮತ್ತು ಯುಕ್ತಿಗೆ ಹೆಸರಾದ ಮಾರುತಿ ಅಥವಾ ಹನುಮಂತನ ಜೀವನದಲ್ಲಿ ನಡೆದ ಈ ಘಟನೆ ಪರಿಚಿತ. ಆತ ಚಿಕ್ಕವನಿದ್ದಾಗ ಒಂದು ದಿನ ಹಸಿವಾಗಿದ್ದಾಗ ಮೇಲೆ ನೋಡಿದಾಗ ಹೊಳೆಯುವ ವಸ್ತು ಕಾಣಿಸಿತು. ಉದಯಸೂರ್ಯನನ್ನು ಯಾವುದೋ ಹಣ್ಣೆಂದು ಬಗೆದು ಹಿಡಿಯಲೆಂದು ನೆಗೆದೇಬಿಟ್ಟ. ಇದನ್ನು ಗಮನಿಸಿದ ಇಂದ್ರ ವಜ್ರಾಯುಧದಿಂದ ಹೊಡೆದ. ಆಗ ಬ್ರಹ್ಮನು ಮಾರುತಿಯನ್ನು ವಜ್ರಕಾಯನನ್ನಾಗಿಸಿದ ಎಂಬ ಈ ಕತೆಯು ಹನುಮಂತನ ಅಗಾಧ ಶಕ್ತಿಯ ಜೊತೆಗೆ ಎತ್ತರದತ್ತ ದೃಷ್ಟಿಸುವ ಮನುಜನ ಹಂಬಲವನ್ನು ಸಹ ಸಂಕೇತಿಸುತ್ತದೆ ಎನ್ನಬಹುದು. ಸಾಗರೋಲ್ಲಂಘನ ಕೂಡ ಮಾರುತಿಯ ಮಹಿಮೆಗೆ ಸಾಕ್ಷಿ. ಹೀಗಾಗಿಯೇ ಹಿಂದೆಯೂ ಇಂದಿಗೂ ಮುಂದೂ ಕೂಡ ಹನುಮಂತ ಒಂದು ದೊಡ್ಡ ಆದರ್ಶ. ರಾಮಾಯಣದಲ್ಲಿ ಬರುವ ರಾವಣನ ಪುಷ್ಪಕ ವಿಮಾನವೂ ಮಾನವನನ್ನು ಎತ್ತರಕ್ಕೆ ಒಯ್ಯುವ ಒಂದು ರೂಪಕವೇ ಸರಿ.

***

ಅಮೆರಿಕ ಮತ್ತು ರಷ್ಯಾ ನಡುವೆ ಶೀತಲಸಮರ ನಡೆದಿದ್ದು ಗೊತ್ತಿರುವಂತಹದ್ದೇ. ಜಾಗತಿಕ ರಾಜಕಾರಣ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಮೇಲುಗೈ ಸಾಧಿಸಲು ನಡೆಸಿದ ಕಸರತ್ತು ಇದು. ಇಲ್ಲೊಂದು ವಿಶೇಷ ಇದೆ. ಅದೆಂದರೆ ಈ ಸಮರದ ಭಾಗವಾಗಿ ಆಗಸ ಸಮರ ಕೂಡ ನಡೆಯಿತು. ಸಾಮಾನ್ಯವಾಗಿ ಯುದ್ಧ ಎಂದರೆ ನಾಶ, ಪ್ರಾಣಹಾನಿ. ಆದರೆ ಈ ಬಾಹ್ಯಾಕಾಶ ಪೈಪೋಟಿಯ ಕಾರಣಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆದದ್ದು ಮತ್ತು ಮೇಲಕ್ಕೆ ಏರುವ ಮಾನವನ ಹಂಬಲಕ್ಕೆ ಇಂಬು ನೀಡಿದ್ದು ಗಮನಾರ್ಹ. ಅಮೆರಿಕ ಮತ್ತು ರಷ್ಯಾ ಎರಡೂ ದೇಶಗಳು ಆಕಾಶ ರಂಗದಲ್ಲಿ ಮೇಲುಗೈ ಸಾಧಿಸಲು ನಡೆಸಿದ ಯತ್ನಗಳು ಒಂದೆರಡಲ್ಲ. ಈ ನಿಟ್ಟಿನಲ್ಲಿ ಮೊದಲ ನಗು ಬೀರಿದ್ದು ರಷ್ಯಾ. ಜಗತ್ತಿನ ಪ್ರಥಮ ಬಾಹ್ಯಾಕಾಶಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಆ ದೇಶದ ಯೂರಿ ಗಗಾರಿನ್. ವೋಸ್ತೊಕ್ 1 ಎಂಬ ವೋ›ಮ ನೌಕೆಯಲ್ಲಿ ಕುಳಿತು 1961ರ ಏಪ್ರಿಲ್ 12ರಂದು ಅವರು ನಭದತ್ತ ಸಾಗಿದರು. ಪ್ರತಿ ತಾಸಿಗೆ 27,400 ಕಿಮೀ ವೇಗದಲ್ಲಿ ಚಲಿಸಿದ ನೌಕೆ 108 ನಿಮಿಷಗಳ ಕಾಲ ಭೂಮಿಯನ್ನು ರೌಂಡ್ ಹೊಡೆಯಿತು. ಅರೆ! ರಷ್ಯಾ ಈ ಸಾಧನೆ ಮಾಡಿದ ಮೇಲೆ ಅಮೆರಿಕ ಸುಮ್ಮನೆ ಇರುವುದು ಹೇಗೆ? ತಾನೂ ಆಕಾಶದತ್ತ ನೋಡಬೇಕೆಂಬ ಅದರ ಛಲವನ್ನು ಹೆಚ್ಚಿಸಿತು. ಕೊನೆಗೆ 1969ರ ಜುಲೈ 21ರಂದು ಅಮೆರಿಕದ ಏರೋನಾಟಿಕಲ್ ಇಂಜಿನಿಯರ್ ನೀಲ್ ಆಮರ್್​ಸ್ಟ್ರಾಂಗ್ ಅವರು ಚಂದಿರನ ಮೇಲೆ ಮೊದಲ ಬಾರಿಗೆ ಹೆಜ್ಜೆ ಇಡುವ ಮೂಲಕ, ಜಗತ್ತು ಮೂಗಿನ ಮೇಲೆ ಬೆರಳಿಟ್ಟು ನೋಡುವಂತಾಯಿತು. ನೀಲ್ ಆಮರ್್​ಸ್ಟ್ರಾಂಗ್ ಅವರೇ ಹೇಳಿದ ಹಾಗೆ, ‘ಇದು ಮಾನವನ ಒಂದು ಪುಟ್ಟ ಹೆಜ್ಜೆ. ಆದರೆ ಮನುಕುಲದ ಮಹಾ ಜಿಗಿತ’. ಹೀಗೆ ಚಂದ್ರಶಿಕಾರಿ ಮೂಲಕ ತಾನು ಈ ಆಗಸ ಸಮರದಲ್ಲಿ ಗೆದ್ದೆ ಎಂದು ಅಮೆರಿಕ ಹೇಳಿಕೊಂಡಿತ್ತು. ಆದರೆ ಈ ಪ್ರತಿಪಾದನೆಯನ್ನು ಅನೇಕರು ಒಪ್ಪಿಲ್ಲ. ಅದು ಬೇರೆ ವಿಚಾರ. ಏನೇ ಇರಲಿ ಎರಡು ಪ್ರಬಲ ದೇಶಗಳ ಹಣಾಹಣಿ ಹೀಗೂ ನಡೆಯಬಹುದೇ ಎಂದು ಜಗತ್ತು ಕಣ್ಣು ಬಿಟ್ಟುಕೊಂಡು ನೋಡುವಂತಾಯಿತು. ನಾನೇರುವೆತ್ತರಕೆ ನೀನೇರಬಲ್ಲೆಯ? ಎಂಬ ಸವಾಲು.

ಎರಡನೇ ಮಹಾಯುದ್ಧದ ತರುವಾಯ ಶುರುವಾದ ಎರಡು ಮದ್ದಾನೆಗಳ ಗುದ್ದಾಟ 1991ರಲ್ಲಿ ಸೋವಿಯತ್ ಒಕ್ಕೂಟದ ಪತನದೊಂದಿಗೆ ಕೊನೆಗೊಂಡಿತು. ಈಗಂತೂ ಕೇಳುವುದೇ ಬೇಡ. ರಷ್ಯಾ ಬಸವಳಿದು ಹೋಗಿರುವುದರಿಂದ ಅಮೆರಿಕ ತಾನೇ ‘ದೊಡ್ಡಣ್ಣ’ ಎಂದು ಮೀಸೆ ತಿರುವುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ತಮ್ಮ ದೇಶದ ಗತವೈಭವವನ್ನು ಮತ್ತೆ ಸ್ಥಾಪಿಸುವ ಉದ್ದೇಶದಿಂದ ಬಗೆ ಬಗೆ ಕಸರತ್ತು ನಡೆಸುತ್ತಿದ್ದಾರೆ. ಆದರೆ ಅವರ ತೋಳುಗಳ ಶಕ್ತಿ ಕುಂದುತ್ತಿದೆ. ಅದರಲ್ಲೂ ಯೂಕ್ರೇನ್ ಜತೆಗಿನ ಯುದ್ಧ ಎರಡು ವರ್ಷ ಕಳೆದರೂ ಯಾವ ಫಲಿತಾಂಶವನ್ನೂ ನೀಡದೆ ನಡೆದೇ ಇದೆ.

ಹಾಗೆ ನೋಡಿದರೆ ಬಾಹ್ಯಾಕಾಶವನ್ನು ತಲುಪಿದ ಮೊದಲ ಜೀವಿ ಲೈಕಾ ಎಂಬ ಶ್ವಾನ. 1957ರ ನವೆಂಬರ್ 3ರಂದು ಸ್ಪುಟ್ನಿಕ್ 2 ನೌಕೆಯನ್ನು ಭೂಮಿಯ ಕೆಳ ಕಕ್ಷೆಯತ್ತ ಹಾರಿಬಿಡಲಾಯಿತು. ಆ ನೌಕೆಯಲ್ಲಿ ಈ ಶ್ವಾನವನ್ನು ಇರಿಸಿ ಕಳಿಸಲಾಗಿತ್ತು. ಆಗ ಬಾಹ್ಯಾಕಾಶ ತಂತ್ರಜ್ಞಾನ ಇನ್ನೂ ಆರಂಭಿಕ ಹಂತದಲ್ಲಿ ಇದ್ದುದರಿಂದ ಜೀವಿಗಳ ಮೇಲೆ ಯಾವ ರೀತಿಯ ಪರಿಣಾಮ ಆಗಬಹುದು ಎನ್ನುವ ಸ್ಪಷ್ಟತೆ ವಿಜ್ಞಾನಿಗಳಿಗೆ ಇರಲಿಲ್ಲ. ಹೀಗಾಗಿ ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸುವ ಮುನ್ನ ಪ್ರಾಣಿಗಳನ್ನು ಕಳಿಸಿ ಅಧ್ಯಯನ ಮಾಡುವುದು ಅನಿವಾರ್ಯ ಎಂಬುದು ತಜ್ಞರ ಅಭಿಮತವಾಗಿತ್ತು. ಕಡಿಮೆ ಅಥವಾ ಶೂನ್ಯ ಗುರುತ್ವಾಕರ್ಷಣದಲ್ಲಿ ಹಾಗೂ ವಿಕಿರಣ ವಾತಾವರಣವನ್ನು ಜೀವಿ ತಾಳಿಕೊಳ್ಳಬಹುದೇ ಎಂಬುದನ್ನು ಪರೀಕ್ಷಿಸಬೇಕಿತ್ತು. ಲೈಕಾ ಮಾಸ್ಕೋದ ಬೀದಿಗಳಲ್ಲಿ ಓಡಾಡಿಕೊಂಡು ಜೀವಿಸುತ್ತಿದ್ದ ಒಂದು ಹೆಣ್ಣು ಶ್ವಾನ. ಅತಿಯಾದ ಚಳಿ ಹಾಗೂ ಹಸಿವನ್ನು ತಡೆದುಕೊಳ್ಳುವ ಶಕ್ತಿ ಇವಕ್ಕೆ ಇರುತ್ತದೆ ಎಂಬ ಕಾರಣಕ್ಕೆ ವಿಜ್ಞಾನಿಗಳು ಮಾಸ್ಕೋದ ಬೀದಿನಾಯಿಗಳನ್ನು ಪ್ರಯೋಗಕ್ಕೆ ಆಯ್ದುಕೊಳ್ಳುತ್ತಿದ್ದರಂತೆ. ಆಗ ಇನ್ನೂ ಬಾಹ್ಯಾಕಾಶ ನೌಕೆಯನ್ನು ಮರಳಿ ಭೂಮಿಗೆ ತರುವ ತಂತ್ರಜ್ಞಾನ ಬೆಳವಣಿಗೆ ಆಗಿರಲಿಲ್ಲ. ಹಾಗಾಗಿ ಲೈಕಾ ಬದುಕಿ ಉಳಿಯುವ ಸಾಧ್ಯತೆ ಬಗ್ಗೆ ವಿಜ್ಞಾನಿಗಳಿಗೆ ನಂಬಿಕೆ ಇರಲಿಲ್ಲ. ವೋ›ಮ ನೌಕೆ ನೆಗೆದ ಕೆಲ ಹೊತ್ತಿನಲ್ಲೇ ಅತಿಯಾದ ಶಾಖದ ಕಾರಣಕ್ಕೆ ಆ ಶ್ವಾನ ಸಾವು ಕಂಡಿತು. ಮಾನವನ ವೈಜ್ಞಾನಿಕ ಸಾಧನೆಗಳಿಗೆ ತಳಹದಿಯಾಗಿ ಹೀಗೆ ಅಸಂಖ್ಯ ಪ್ರಾಣಿಗಳು ಜೀವ ತೆರಬೇಕಾಗುವುದು ನೋವಿನ ಸಂಗತಿಯಾದರೂ ಇದು ಅನಿವಾರ್ಯವೆನೋ.

***

ಮೂರರ ಆ ಹುಡುಗಿ ತನ್ನ ವಾರಗೆಯ ಇತರರ ಹಾಗೆ ಆಟದಲ್ಲಿ ಆಸಕ್ತಿ ತೋರಿಸದೆ ವಿಮಾನ ಚಿತ್ರಗಳ ಮೇಲೆ ಕಣ್ಣು ಕೀಲಿಸಿ ಕೂತಿರುತ್ತಿದ್ದಳು. ವಿಮಾನದ ಮೂಲಕ ಆಗಸಕ್ಕೆ ಹಾರುವ ಕನಸು ಆ ಮುಗ್ಧ ಮನದಲ್ಲಿ ಮೂಡುತ್ತಿದ್ದಿರಬೇಕು. ಆದರೆ ಅದು ಬರಿಯ ಕನಸಾಗಿ ಉಳಿಯಲಿಲ್ಲ. ಭಾರತ ಸಂಜಾತ ಮೊದಲ ಮಹಿಳಾ ಬಾಹ್ಯಾಕಾಶ ಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಲ್ಪನಾ ಚಾವ್ಲಾ ಅವರು ಎತ್ತರದ ಕನಸು ಕಾಣುವವರಿಗೆ ಒಂದು ದೊಡ್ಡ ಪ್ರೇರಣೆ. ಹರಿಯಾಣದ ಕರ್ನಾಲ್ನಲ್ಲಿ ಜನಿಸಿದ ಚಾವ್ಲಾ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಅಮೆರಿಕಕ್ಕೆ ತೆರಳಿದರು. ಅಲ್ಲಿ ಏರೋ ಸ್ಪೇಸ್ ಇಂಜಿನಿಯರಿಂಗ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಗಗನಯಾತ್ರಿ ಆಗಬೇಕೆಂಬ ಹಂಬಲ ಹೊತ್ತು ನಾಸಾವನ್ನು ಸೇರಿದರು. 1997ರಲ್ಲಿ ಕೊಲಂಬಿಯ ವೋ›ಮ ನೌಕೆ ಮೂಲಕ ಇತರ ಐವರು ಗಗನಯಾನಿಗಳ ಜೊತೆ ಆಗಸಕ್ಕೆ ಹಾರುವ ಅವಕಾಶ ದೊರೆಯಿತು. ಚಾವ್ಲಾ ಸಾಹಸ ಇಲ್ಲಿಗೆ ಮುಗಿಯಲಿಲ್ಲ.

ಇನ್ನೊಂದು ಅವಕಾಶ ಬಾಗಿಲು ಬಡಿಯಿತು. 2003ರ ಜನವರಿ 16ರಂದು ಈ ಯಾನ ಶುರುವಾಗಿ 15 ದಿನಗಳ ಕಾಲ ಕಕ್ಷೆಯಲ್ಲಿ ಪರಿಭ್ರಮಿಸಿತು. ಆದರೆ ಫೆಬ್ರವರಿ 1ರಂದು ಭೂಮಿಗೆ ವಾಪಸಾಗುವಾಗ ವೋ›ಮ ನೌಕೆ ಸ್ಪೋಟಗೊಂಡು ಕಲ್ಪನಾ ಚಾವ್ಲಾ ಸೇರಿದಂತೆ ಅದರಲ್ಲಿದ್ದ ಎಲ್ಲ ಏಳು ಯಾನಿಗಳು ಸಾವನ್ನಪ್ಪಿದರು. ಚಿಕ್ಕ ಮಗುವಿದ್ದಾಗಲೇ ಮೂಡಿದ ಕಲ್ಪನೆ ಮುಂದೆ ಸಾಕಾರವಾದರು ಸಹ ಅವರು ಹೀಗೆ ದುರಂತ ಅಂತ್ಯ ಕಾಣುವಂತಾಗಿದ್ದು ಮಾತ್ರ ದುಃಖದ ಸಂಗತಿ. ಇನ್ನೂ ಎಷ್ಟು ಎತ್ತರಕ್ಕೆ ಏರುವ ಹಂಬಲ ಅವರಲ್ಲಿತ್ತೋ.

***

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈಚೆಗೆ ಭಾರತದ ಮಾನವಸಹಿತ ಗಗನಯಾನದ ನಾಲ್ವರು ಯಾನಿಗಳ ಹೆಸರನ್ನು ಪ್ರಕಟಿಸಿ, ಅಭಿನಂದಿಸಿ ಶುಭ ಕೋರಿದರು. ಆ ನಾಲ್ವರು ಯಾರೆಂದರೆ- ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಂಗದ ಪ್ರತಾಪ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ. ಇವರೆಲ್ಲ ಭಾರತೀಯ ವಾಯುಪಡೆಗೆ ಸೇರಿದವರಾಗಿದ್ದು, ಯುದ್ಧ ವಿಮಾನ ಚಾಲನೆಯ ಅನುಭವ ಹೊಂದಿದ್ದಾರೆ. ಬಹು ಕಠಿಣ ಪರೀಕ್ಷೆಗಳ ನಂತರದಲ್ಲಿ ಇವರನ್ನು ಆಯ್ಕೆ ಮಾಡಲಾಗಿದ್ದು, ಈಗಾಗಲೇ ರಷ್ಯಾದಲ್ಲಿ ತರಬೇತಿಯನ್ನು ಸಹ ನೀಡಲಾಗಿದೆ. ಇನ್ನು ಮೇಲೆ ಬೆಂಗಳೂರಿನ ಇಸ್ರೋದಲ್ಲಿ ತರಬೇತಿ ಮುಂದುವರಿಯಲಿದೆ. ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ರೋಬಾಟ್ ಒಂದನ್ನು ಕಳಿಸಲಾಗುತ್ತದೆ. 2025ರ ಕೊನೆಯ ಹೊತ್ತಿಗೆ ಮಾನವಸಹಿತ ಬಾಹ್ಯಾಕಾಶ ಯಾನವನ್ನು ಸಾಕಾರ ಮಾಡುವ ಉದ್ದೇಶ ಹೊಂದಲಾಗಿದೆ. ಈ ನಾಲ್ವರು ಸಾಹಸಿಗಳಿಗೆ ಅಡ್ವಾನ್ಸ್ ಆಗಿ ಶುಭ ಕೋರೋಣ ಮತ್ತು ಇಸ್ರೋ ಸಾಧನಾಪಥದಲ್ಲಿ ಮತ್ತೊಂದು ಮೈಲಿಗಲ್ಲು ನೆಡುವಂತಾಗಲಿ ಎಂದು ಬಯಸೋಣ. ಈ ಪ್ರಯತ್ನ ಸಫಲವಾದಲ್ಲಿ ಮಾನವಸಹಿತ ಗಗನಯಾನ ಮಾಡಿದ ವಿರಳ ದೇಶಗಳ ಸಾಲಿನಲ್ಲಿ ಭಾರತವೂ ಸೇರಿ ಇತಿಹಾಸ ರಚಿಸಲಿದೆ.

ಅಂತರಿಕ್ಷ ಯಾನ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ರಾಕೇಶ್ ಶರ್ವ. 1984ರ ಏಪ್ರಿಲ್ 3ರಂದು ಅವರು ಈ ಸಾಹಸಗೈದರು. ಅವರು ಪಯಣ ಮಾಡಿದ್ದು ಸೋವಿಯತ್ ವೋ›ಮ ನೌಕೆಯಲ್ಲಿ.

ಕೊನೇ ಮಾತು: ಜಗತ್ತಿನ ಟಾಪ್ ಸಿರಿವಂತರಲ್ಲಿ ಒಬ್ಬರಾದ ಎಲಾನ ಮಸ್ಕ್ ಅವರು ‘ಸ್ಪೇಸ್ ಎಕ್ಸ್ ಪೋ›ರೇಷನ್ ಟೆಕ್ನಾಲಜೀಸ್ ಕಾರ್ಪೆರೇಷನ್’ ಎಂಬ ಕಂಪನಿಯನ್ನು ಸ್ಥಾಪಿಸಿದ್ದು, ಬಾಹ್ಯಾಕಾಶ ಸಾರಿಗೆ ವೆಚ್ಚವನ್ನು ತಗ್ಗಿಸುವುದು ಮತ್ತು ಮಂಗಳನ ಅಂಗಳದಲ್ಲಿ ಸುಸ್ಥಿರ ಬಡಾವಣೆಯನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದಾರೆ. ಇದೆಲ್ಲ ಎಲ್ಲಿಗೆ ಹೋಗಿ ತಲುಪುತ್ತದೆಯೋ ಗೊತ್ತಿಲ್ಲ. ಆದರೆ ಮಸ್ಕ್ ಮಸ್ತ್ ಪ್ರಯತ್ನವನ್ನಂತು ಶುರುಹಚ್ಚಿಕೊಂಡಿದ್ದಾರೆ. ಬಾಹ್ಯಾಕಾಶ ಪ್ರವಾಸೋದ್ಯಮ ಎಂಬ ಪರಿಕಲ್ಪನೆ ಸಹ ಇದರಲ್ಲಿ ಸೇರಿದೆ. ದಂಡಿಯಾಗಿ ದುಡ್ಡು ಇರುವವರು ಖಾಸಗಿ ರಾಕೆಟ್ ಮೂಲಕ ಆಗಸಕ್ಕೆ ಹಾರುವ ಅವಕಾಶ ಈ ರೀತಿಯಾಗಿ ದೊರೆಯಲಿದೆ.

ಒಟ್ಟಾರೆಯಾಗಿ ಮಾನವನ ಪಯಣವನ್ನು ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ. ಹಿಂದೆ ಹಳ್ಳಿಯವರು ಬೆಂಗಳೂರಿಗೆ ಬಂದರೆ ಅದೇ ದೊಡ್ಡದಾಗಿತ್ತು. ಈಗ ಬೆಂಗಳೂರು ಬಹಳ ಹತ್ತಿರ. ವಿದೇಶಕ್ಕೆ ಹೋಗುವುದು ಎಂದರೆ ಜೀವಮಾನದ ಸಾಧನೆ ಎಂಬ ಹಾಗೆ ಭಾವಿಸಲಾಗುತ್ತಿತ್ತು. ಈಗ ಹಳ್ಳಿಯ ಗೃಹಿಣಿ ಕೂಡ ತನ್ನ ಮಗ ಅಥವಾ ಮಗಳ ಮನೆಗೆ ಎಂದು ಫಾರಿನ್​ಗೆ ತೆರಳುವುದು ಅಂಥ ವಿಶೇಷ ಅಲ್ಲ. ಹಾಗೇ ಮುಂದೊಂದು ದಿನ ‘ಬಾಹ್ಯಾಕಾಶ ಯಾನ ಮಾಡಿ ಬಂದೆ. ಸಖತ್ ಮಜಾ ಇತ್ತು’ ಎಂದು ಹೇಳುವ ಕಾಲ ಬಂದರೂ ಅಚ್ಚರಿ ಇಲ್ಲ. ಎತ್ತರದಲ್ಲಿ ನಿಂತು ನೋಡಿದಾಗ ನೋಟ ಬೇರೆಯದೇ ಆದ ಬಗೆಯಲ್ಲಿ ಕಾಣುತ್ತದೆ; ಕೆಳಗಿನ ವಸ್ತು ಸಣ್ಣದಾಗಿ ಕಂಡರೂ ನೋಡುಗನ ದೃಷ್ಟಿ ವಿಶಾಲವಾಗುತ್ತದೆ. ಅಷ್ಟಕ್ಕೂ ಅನ್ವೇಷಣೆ ಮತ್ತು ಸಾಹಸ ಗುಣ ಮಾನವನ ವಂಶವಾಹಿಯಲ್ಲೆ ಇದೆಯಲ್ಲ. ಆದರೆ ಎತ್ತರ ಎತ್ತರ ಏರುವ ಭರದಲ್ಲಿ ಬೇರನ್ನು ಮರೆಯದಿದ್ದರೆ ಸಾಕು! ಮಾನವನ ವಿವೇಕ ಆ ರೀತಿ ಆಗದ ಹಾಗೆ ಎಚ್ಚರ ವಹಿಸುತ್ತದೆ ಎಂದು ಆಶಿಸೋಣ.