ತೀವ್ರ ಬಿಸಿಗಾಳಿ ಮತ್ತು ಶುಷ್ಕ ವಾತಾವರಣ ಪರಿಣಾಮ ಹಲವು ಪ್ರದೇಶಗಳಲ್ಲಿ ಬೆಂಕಿಯ ಕೆನ್ನಾಲಗೆಗಳು ಆವರಿಸಿಕೊಳ್ಳುತ್ತಿವೆ. ಹೀಗಾಗಿ ಸ್ಥಳೀಯ ನಿವಾಸಿಗಳು ಮತ್ತು ರಜೆ ಕಳೆಯಲು ಆಗಮಿಸಿರುವ ಪ್ರವಾಸಿಗರು ಫ್ರಾನ್ಸ್, ಸ್ಪೇನ್ ಮತ್ತು ಪೋರ್ಚುಗಲ್ನ ಹಲವು ಪಟ್ಟಣ ಮತ್ತು ಹಳ್ಳಿಗಳನ್ನು ತೊರೆಯುತ್ತಿದ್ದಾರೆ. ಪೋರ್ಚುಗಲ್ ಮತ್ತು ಸ್ಪೇನ್ನ ಹಲವಾರು ಕಡೆಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿವೆ. ಇಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಈ ಎರಡೂ ದೇಶಗಳಲ್ಲಿ ಬಿಸಿಗಾಳಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಅಗ್ನಿಜ್ವಾಲೆಗಳು ಸ್ಪೇನ್ ಗಡಿಯನ್ನು ದಾಟಿದ್ದರಿಂದ ಪೋರ್ಚುಗೀಸ್ ಗ್ರಾಮಸ್ಥರಿಗೆ ಕೂಡ ಗ್ರಾಮ ತೆರವು ಮಾಡುವಂತೆ ಹೇಳಲಾಗಿದೆ. ಕಳೆದ ಕೆಲವು ದಿನಗಳಲ್ಲಿ 11,000ಕ್ಕೂ ಹೆಚ್ಚು ಜನರು ನೈಋತ್ಯ ಫ್ರಾನ್ಸ್ನ ಗಿರೊಂಡೆ ಪ್ರದೇಶವನ್ನು ತೊರೆದಿದ್ದಾರೆ.
ದೇಹವು ಬಿಸಿಯಾಗುತ್ತಿದ್ದಂತೆ, ರಕ್ತನಾಳಗಳು ತೆರೆದುಕೊಳ್ಳುತ್ತವೆ. ಇದು ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಅಲ್ಲದೆ, ದೇಹದ ಸುತ್ತ ರಕ್ತ ಪರಿಚಲನೆಗಾಗಿ ಹೃದಯವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದ ರಕ್ತನಾಳಗಳು ಸೋರತೊಡಗಿ, ಶಾಖದ ಗುಳ್ಳೆ, ಊದಿಕೊಂಡ ಪಾದಗಳ ತುರಿಕೆಯಂತಹ ಲಕ್ಷಣಗಳು ತಲೆದೋರುತ್ತವೆ. ಇದೇ ಸಮಯದಲ್ಲಿ ಹೆಚ್ಚು ಬೆವರುವುದರಿಂದ ದ್ರವ ಮತ್ತು ಉಪ್ಪಿನ ನಷ್ಟ ಉಂಟಾಗಿ, ದೇಹದಲ್ಲಿ ಇವುಗಳ ನಡುವಿನ ಅಸಮತೋಲನವಾಗುತ್ತದೆ. ಕಡಿಮೆ ರಕ್ತದೊತ್ತಡ ಹಾಗೂ ಈ ಅಸಮತೋಲನವು ಶಾಖದ ಬಳಲಿಕೆಗೆ ಕಾರಣವಾಗಬಹುದಾಗಿದೆ. ವೃದ್ಧರು, ಮಕ್ಕಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರು ಇದರಿಂದ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ.
ಮಾನವಪ್ರೇರಿತ ಹವಾಮಾನ ಬದಲಾವಣೆಯ ಕಾರಣದಿಂದಾಗಿ ಶಾಖದ ಅಲೆಗಳು ಆಗಾಗ್ಗೆ ಬೀಸುವಂತಾಗಿದ್ದು, ಇವು ಹೆಚ್ಚು ತೀವ್ರತೆಯಿಂದ ಕೂಡಿವೆ. ಅಲ್ಲದೆ, ದೀರ್ಘ ಕಾಲ ಉಳಿಯುತ್ತಿವೆ. ಕೈಗಾರಿಕಾ ಯುಗ ಪ್ರಾರಂಭವಾದಾಗಿನಿಂದ ಪ್ರಪಂಚದ ತಾಪಮಾನವು 1.1 ಡಿ.ಸೆ.ನಷ್ಟು ಹೆಚ್ಚಾಗಿದೆ. ಪ್ರಪಂಚದಾದ್ಯಂತದ ಸರ್ಕಾರಗಳು ಮಾಲಿನ್ಯಕ್ಕೆ ತೀವ್ರ ಕಡಿವಾಣ ಹಾಕದ ಹೊರತು ತಾಪಮಾನವು ಏರುತ್ತಲೇ ಇರುತ್ತದೆ. ಜಾಗತಿಕ ತಾಪಮಾನ ಏರಿಕೆಯು ಜನರ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಪಶ್ಚಿಮ ಸ್ಪೇನ್ನ ಹಲವಾರು ಪಟ್ಟಣಗಳಿಂದ ಜನರನ್ನು ತೆರವುಗೊಳಿಸಲಾಗಿದೆ. ಅಪರೂಪದ ಜಾತಿಯ ಪಕ್ಷಿಗಳಿಗೆ ನೆಲೆಯಾದ ಮೊನ್ಫ್ರಾಗ್ ರಾಷ್ಟ್ರೀಯ ಉದ್ಯಾನದ ದಕ್ಷಿಣ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಪೇನ್ನ ಅಗ್ನಿಶಾಮಕ ದಳದವರು ಮಾನ್ಸಾಗ್ರೊ ಪಟ್ಟಣವನ್ನು ರಕ್ಷಿಸಲು ಹೋರಾಡಬೇಕಾಯಿತು. ಕಾಳ್ಗಿಚ್ಚಿನಿಂದಾಗಿ ಸುಮಾರು 4,500 ಹೆಕ್ಟೇರ್ ಭೂಮಿ ನಾಶವಾಗಿದೆ. ದೇಶದ 20 ಕಡೆಗಳ ಕಾಳ್ಗಿಚ್ಚು ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಸ್ಪೇನ್ ಅಧಿಕಾರಿಗಳು ವರದಿ ಮಾಡಿದ್ದಾರೆ.
ಸಮುದ್ರಕ್ಕೆ ಜಿಗಿದರು!: ಇಟಲಿ ಮತ್ತು ಕ್ರೊವೇಷಿಯಾಗಳಲ್ಲೂ ಈ ವಾರ ಕಾಳ್ಗಿಚ್ಚುಗಳು ವರದಿಯಾಗಿವೆ. ಬೆಂಕಿ ಮತ್ತು ಹೊಗೆಯಿಂದ ತಪ್ಪಿಸಿಕೊಳ್ಳಲು ಎಂಟು ಜನರು ಆಡ್ರಿಯಾಟಿಕ್ ಕರಾವಳಿಯ ಬಿಬಿಯೋನ್ನಲ್ಲಿ ಸಮುದ್ರಕ್ಕೆ ಜಿಗಿಯಬೇಕಾಯಿತು.
ಬಲವಾದ ಬಿಸಿ ಗಾಳಿಯು ಗ್ರೀಸ್ನ 5 ಪ್ರದೇಶಗಳಲ್ಲಿ ಕಾಳ್ಗಿಚ್ಚು ಅಪಾಯವನ್ನು ಹೆಚ್ಚಿಸಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಸೆಂಟ್ರಲ್ ಗ್ರೀಸ್, ಅಟಿಕಾ ಮತ್ತು ಕ್ರೀಟ್ ಇವು ಹೆಚ್ಚು ಅಪಾಯದಲ್ಲಿರುವ ಪ್ರದೇಶಗಳಾಗಿವೆ. ಕಳೆದ 24 ಗಂಟೆಗಳಲ್ಲಿ 51 ಕಾಳ್ಗಿಚ್ಚುಗಳು ಇಲ್ಲಿ ಕಂಡುಬಂದಿವೆ ಎಂದು ಅಗ್ನಿಶಾಮಕ ದಳ ತಿಳಿಸಿದೆ. ಶುಕ್ರವಾರ ಕ್ರೀಟ್ ಮತ್ತು ಅಟಿಕಾದ ಮುಖ್ಯ ಭೂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಥೆನ್ಸ್ನ ಆಗ್ನೇಯದಲ್ಲಿರುವ ಫೆರಿಜಾ ಸರೋನಿಕೋಸ್ ಗ್ರಾಮದ ನಿವಾಸಿಗಳು ಕರಾವಳಿಗೆ ಸ್ಥಳಾಂತರವಾಗು ವಂತೆ ತುರ್ತು ಮನವಿ ಮಾಡಲಾಗಿತ್ತು.
ಪೋರ್ಚುಗಲ್ನ ಉತ್ತರದ ಪಿನ್ಹಾವೊದಲ್ಲಿ ಕಳೆದ ಗುರುವಾರ ಉಷ್ಣಾಂಶವು 47 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಪೋರ್ಚುಗಲ್ನ ಮುಖ್ಯ ಭೂಭಾಗದಲ್ಲಿ ಜುಲೈನಲ್ಲಿ ದಾಖಲಾದ ಅತ್ಯಧಿಕ ಉಷ್ಣಾಂಶವಾಗಿದೆ. ಇತ್ತೀಚಿನ ಶಾಖದ ಅಲೆಯ ಮೊದಲೆರಡು ದಿನಗಳಲ್ಲಿ, ಕನಿಷ್ಠ 43 ಜನರು ಸಾವನ್ನಪ್ಪಿದ್ದಾರೆ ಎಂದು ಕಾಲೋಸ್ 3 ಆರೋಗ್ಯ ಸಂಸ್ಥೆ ಹೇಳಿದೆ. ಜುಲೈ 7ರ ನಂತರ ಸಾಮಾನ್ಯಕ್ಕಿಂತ 238 ಅಧಿಕ ಸಾವುಗಳನ್ನು ಪೋರ್ಚುಗಲ್ನ ಆರೋಗ್ಯ ಅಧಿಕಾರಿಗಳು ದಾಖಲಿಸಿದ್ದಾರೆ, ಅತಿಯಾದ ಬಿಸಿ ಮತ್ತು ಶುಷ್ಕ ವಾತಾವರಣದ ಕಾರಣ ಈ ಸಾವುಗಳು ಸಂಭವಿಸಿವೆ ಎಂದು ಹೇಳಿದ್ದಾರೆ.
ಕಳೆದ ವಾರದಲ್ಲಿ ಸಂಭವಿಸಿದ ಕಾಳ್ಗಿಚ್ಚಿನಿಂದಾಗಿ 187 ಮಂದಿ ಗಾಯಗೊಂಡಿದ್ದಾರೆ. ಪೋರ್ಚುಗಲ್ನಲ್ಲಿ ಇತ್ತೀಚೆಗೆ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಪೈಕಿ ಪೊಂಬಲ್ ಅರಣ್ಯದಲ್ಲಿ ಕಾಣಿಸಿಕೊಂಡ ಕಾಳ್ಗಿಚ್ಚು ಒಂದು ವಾರ ಸಕ್ರಿಯವಾಗಿತ್ತು. ಈ ವರ್ಷ 300 ಚದರ ಕಿಲೋಮೀಟರ್ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಕಳೆದ ವರ್ಷಕ್ಕಿಂತ ಇದು ಹೆಚ್ಚು.
ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ತಲುಪುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ನಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೊಷಿಸಲಾಗಿದೆ. ಜೀವಕ್ಕೆ ಅಪಾಯವಿದ್ದು, ದಿನಚರಿಗಳನ್ನು ಬದಲಾಯಿಸಬೇಕಾಗುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಪ್ರದೇಶಗಳಲ್ಲಿ ಲಂಡನ್, ಮ್ಯಾಂಚೆಸ್ಟರ್ ಮತ್ತು ಯಾರ್ಕ್ ಸೇರಿವೆ. ರೈಲು ಮಾರ್ಗಗಳಲ್ಲಿ ವೇಗವನ್ನು ನಿರ್ಬಂಧಿಸುವ ಸಾಧ್ಯತೆಯಿದೆ. ಕೆಲವೆಡೆ ಶಾಲೆಗಳನ್ನು ಮುಂಚಿತವಾಗಿ ಮುಚ್ಚಲಾಗುತ್ತಿದೆ. ರಸ್ತೆಗಳಲ್ಲಿ ಡಾಂಬರ್ ಕರಗುವಿಕೆ ನಿಯಂತ್ರಿಸಲು ಮರಳನ್ನು ಹರಡಲು ಯೋಜಿಸಲಾಗುತ್ತಿದೆ. ಸದೃಢವಾಗಿ ಮತ್ತು ಆರೋಗ್ಯಕರವಾಗಿ ಇರುವವರ ಸಾವೂ ಸಂಭವಿಸಬಹುದು ಎಂಬ ಎಚ್ಚರಿಕೆಯನ್ನು ಬ್ರಿಟನ್ನಿನ ಆರೋಗ್ಯ ಸಂಸ್ಥೆಯು ನೀಡಿದೆ. ಬ್ರಿಟನ್ನಲ್ಲಿ ಇದುವರೆಗೆ ಅತಿ ಹೆಚ್ಚು ತಾಪಮಾನವು ಕೇಂಬ್ರಿಜ್ನಲ್ಲಿ ದಾಖಲಾಗಿದ್ದು, ಅದು 38.7 ಡಿ.ಸೆ. ಇತ್ತು. 2020ರಲ್ಲಿ ಅಂದಾಜು 2500 ಜನರು ಹಾಗೂ 2021ರಲ್ಲಿ 1600 ಮಂದಿ ಬಿಸಿಗಾಳಿಯಿಂದಾಗಿ ಸಾವನ್ನಪ್ಪಿದ್ದಾರೆ. ಶಾಖ ಸಂಬಂಧಿತ ಸಾವುಗಳು ಮುಂದಿನ 30 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಬಹುದು ಎಂದು ರೆಡ್ ಕ್ರಾಸ್ ಅಂದಾಜಿಸಿದೆ.
ನೈಋತ್ಯ ಫ್ರಾನ್ಸ್ನ ಪೊಲೀಸರು ಕ್ಯಾಜೌಕ್ಸ್ ಜಿಲ್ಲೆಯಲ್ಲಿ ಮನೆಮನೆಗೆ ತೆರಳಿ 4 ಸಾವಿರ ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದರು. ಲಾ ಟೆಸ್ಟೆ-ಡೆ-ಬುಚ್ ಪಟ್ಟಣದ ಸಮೀಪದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರು ಆ ಪ್ರದೇಶ ತೊರೆಯಲು ಮುಂದಾದಾಗ ಸಂಚಾರ ದಟ್ಟಣೆ ಉಂಟಾಯಿತು. ಇತ್ತೀಚಿನ ದಿನಗಳಲ್ಲಿ ಸುಮಾರು 73 ಚದರ ಕಿಲೋಮೀಟರ್ ಪೈನ್ ಕಾಡು ಸುಟ್ಟಿದೆ. ಬೆಜಿಯಸ್ ಮತ್ತು ನಿಮ್ಸ್ ಸೇರಿದಂತೆ ದಕ್ಷಿಣದ ಹಲವಾರು ಪ್ರದೇಶಗಳಲ್ಲಿ ಶುಕ್ರವಾರ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಮುಟ್ಟಿತ್ತು. ಬೇಸಿಗೆ ಕಾಲ ಇನ್ನೂ ಎರಡು ತಿಂಗಳು ಇದ್ದು, ಎಚ್ಚರಿಕೆ ವಹಿಸಬೇಕೆಂದು ರಾಷ್ಟ್ರೀಯ ಅಗ್ನಿಶಾಮಕ ದಳ ತಿಳಿಸಿದೆ. ತುರ್ತು ಪರಿಸ್ಥಿತಿ ಎದುರಿಸಲು 2.5 ಲಕ್ಷ ಸ್ವಯಂಸೇವಕರ ಅಗತ್ಯ ಇದೆ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥರು ತಿಳಿಸಿದ್ದಾರೆ.