ನ್ಯೂಸ್

ಬಿಹಾರದಲ್ಲಿ ಹೆಚ್ಚಾದ ಬಿಸಿಲಿನ ತಾಪ; ಓರ್ವ ಇನ್ಸ್​ಪೆಕ್ಟರ್ ಸೇರಿದಂತೆ 2 ದಿನದಲ್ಲಿ 24 ಮಂದಿ ಸಾವು

ಬಿಹಾರ: ಬಿಸಿಲಿನ ತಾಪ ಏರಿಕೆಯಿಂದಾಗಿ ಜನರು ಹೈರಾಣಾಗಿ ಹೋಗಿದ್ದಾರೆ. ಕಳೆದ ಐದು ದಿನಗಳಲ್ಲಿ ಜಿಲ್ಲೆಯ ಹಲವೆಡೆ ಬಿಸಿಲಿನ ತಾಪಕ್ಕೆ 45ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬಗ್ಗೆ ಈಗಾಗಲೇ ವರದಿಯಾಗಿದೆ. ಇದೀಗ ಇನ್ಸ್​ಪೆಕ್ಟರ್ ಒಬ್ಬರು ತಾಪಮಾನ ಹೆಚ್ಚಳದಿಂದ ಮೃತಪಟ್ಟಿದ್ದಾರೆ. ರೋಹ್ತಾಸ್ ಜಿಲ್ಲೆಯ ನಿವಾಸಿ ಮೊಹಮ್ಮದ್ ಕಲಾಮುದ್ದೀನ್ ಮೃತ ಇನ್ಸ್​ಪೆಕ್ಟರ್.

ಹತ್ತು ದಿನಗಳ ಹಿಂದೆ ಪಿಟಿಸಿ ಇನ್ಸ್​ಪೆಕ್ಟರ್ ಮೊಹಮ್ಮದ್ ಕಲಾಮುದ್ದೀನ್ ಹುಸೈನಗಂಜ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಸೇರಿದ್ದರು. ಎರಡು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದು, ಭಾನುವಾರ ರಾತ್ರಿ ದೇಹ ಬಿಸಿಯಾಗಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುತ್ತಿದ್ದಂತೆ, ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಇನ್ಸ್​ಪೆಕ್ಟರ್ ಸಾವನ್ನಪ್ಪಿದ್ದಾರೆ.

ಸೂಕ್ತ ಪರಿಹಾರ ನೀಡಲಾಗುವುದು

ಈ ಬಗ್ಗೆ ಎಸ್​ಪಿ ಶೈಲೇಶ್ ಕುಮಾರ್ ಸಿನ್ಹಾ ಪ್ರತಿಕ್ರಿಯಿಸಿದ್ದು, ಎರಡು ದಿನಗಳಿಂದ ಇನ್ಸ್​ಪೆಕ್ಟರ್ ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಿಸಿಗಾಳಿಯಿಂದ ಸಾವು ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಎಲ್ಲವೂ ಸ್ಪಷ್ಟವಾಗಲಿದೆ. ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.

24 ಗಂಟೆಯಲ್ಲಿ ಆರು ಮಂದಿ ಸಾವು

ಕಳೆದ 24 ಗಂಟೆಗಳ ಅವಧಿಯಲ್ಲಿ ಓರ್ವ ರೈಲ್ವೇ ಸಿಬ್ಬಂದಿ ಸೇರಿದಂತೆ, ಬಿಹಾರದಲ್ಲಿ 6 ಮಂದಿ ಬಿಎಸ್​ಎಫ್ ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬಹುತೇಕ ಆಸ್ಪತ್ರೆಗಳಲ್ಲಿ ಹೀಟ್​ ಸ್ಟ್ರೋಕ್ ಮತ್ತು ನಿರ್ಜಲೀಕರಣದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. (ಏಜೆನ್ಸೀಸ್)