ಭುವನೇಶ್ವರ್: ಮನಕಲುಕುವ ಘಟನೆಯೊಂದರಲ್ಲಿ ಮರಿಯಾನೆಯೊಂದು ಸತ್ತಿರುವ ತನ್ನ ತಾಯಿಯನ್ನು ಬದುಕಿಸಲು ಪ್ರಯತ್ನಿಸುತ್ತಿರುವ ದೃಶ್ಯ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ವಿಡಿಯೋವನ್ನು IFS ಅಧಿಕಾರಿ ಸುಶಾಂತ್ ನಂದಾ ಅವರು ಹಂಚಿಕೊಂಡಿದ್ದು, ಉತ್ತರ ಒಡಿಶಾದ ಕಾಡೊಂದರಲ್ಲಿ ಈ ಘಟನೆ ನಡೆದಿದ್ದು, ಆನೆ ದಿನವಿಡೀ ತನ್ನ ತಾಯಿಯ ಶವದ ಪಕ್ಕ ನಿಂತು ದುಃಖಿಸುತ್ತಲೇ ಇತ್ತು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಬೆಳಂಬೆಳಗ್ಗೆ ಸದ್ದು ಮಾಡಿದ ತುಪಾಕಿ; ಕುಖ್ಯಾತ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ ಪೊಲೀಸರು
ವೈರಲ್ ಆಗಿರುವ ಪೋಸ್ಟ್ ನೋಡುವುದಾದರೆ ಗುಂಪಿನ ಹಿರಿಯ ಆನೆಯೊಂದು ಅನಾರೋಗ್ಯದಿಂದ ಮೃತಪಟ್ಟಿದ್ದು, ಇದನ್ನು ಕಂಡು ಅದರ ಮಗುವು ತಾಯಿಯನ್ನು ಮೇಲಕ್ಕೆ ಎಬ್ಬಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತದೆ. ಕಡೆಗೆ ತಾಯಿ ಮೃತಪಟ್ಟಿರುವ ವಿಚಾರ ತಿಳಿದ ಆನೆಯೂ ದಿನವಿಡೀ ಅದರ ಪಕ್ಕ ನಿಂತು ದುಃಖಿಸುವುದನ್ನು ನೋಡಬಹುದಾಗಿದೆ.
IFS ಅಧಿಕಾರಿ ಸುಶಾಂತ್ ನಂದಾ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಆನೆಯ ಮೃತದೇಹವನ್ನು ಪರಿಶೀಲಿಸಿ ನಂತರ ಮಣ್ಣು ಮಾಡಿದ್ದಾರೆ. ಮರಣೋತ್ತರ ವರದಿಯಲ್ಲಿ ಸಹಜ ಸಾವು ಎಂದು ತಿಳಿದು ಬಂದಿದ್ದು, ವಯೋಸಹಜ ನಿಧನ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.