ನ್ಯೂಸ್

ಗೋಗರೆದ್ರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ... ರಾತ್ರಿಯಿಡೀ ನೋವಿಂದ ನರಳಿದ ಗರ್ಭಿಣಿ ದುರಂತ ಸಾವು! ಜನಿಸಿದ ಅವಳಿ ಮಕ್ಕಳೂ ಬದುಕಲಿಲ್ಲ

ತುಮಕೂರು: ಜಿಲ್ಲಾಸ್ಪತ್ರೆಯ ವೈದ್ಯರ ಎಡವಟ್ಟಿಗೆ ಬಾಣಂತಿ ಹಾಗೂ ಅವಳಿ ಮಕ್ಕಳು ಅಸುನೀಗಿದ ಹೃದಯವಿದ್ರಾವಕ ಘಟನೆ ತುಮಕೂರು ನಗರದ ಭಾರತಿನಗರದ ಅಭಯ ಆಂಜನೇಯನ ಸ್ವಾಮಿ ದೇವಸ್ಥಾನದ ಬಳಿ ಇಂದು(ಗುರುವಾರ) ಸಂಭವಿಸಿದೆ.

ಕಸ್ತೂರಿ (30) ಮೃತರು. ತಮಿಳುನಾಡು ಮೂಲದ ಕಸ್ತೂರಿ ತುಮಕೂರಿನ ಭಾರತಿನಗರದಲ್ಲಿ ಕಳೆದ 1 ತಿಂಗಳಿಂದ 6 ವರ್ಷದ ಮಗಳ ಜತೆ ವಾಸವಿದ್ದಳು. ಮನೆಯಲ್ಲಿ ಕಡುಬಡತವಿತ್ತು. ತುಂಬು ಗರ್ಭಿಣಿಯಾಗಿದ್ದ ಕಸ್ತೂರಿಗೆ ನಿನ್ನೆ(ನ.2) ಸಂಜೆ ಹೆರಿಗೆ ನೋವಿನಿಂದ ಬಳಲುತ್ತಿದ್ದಳು. ಈಕೆಯ ಕಷ್ಟಕ್ಕೆ ಮರುಗಿದ ಸ್ಥಳೀಯರು ಸ್ವಲ್ಪ ಹಣ ಕೊಟ್ಟು ಆಟೋ ಮಾಡಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳಿಹಿಸಿದ್ದರು. ಪಕ್ಕದ ಮನೆಯ ಅಜ್ಜಿ ಜತೆಗೆ ಆಸ್ಪತ್ರೆಗೆ ಬಂದ ಕಸ್ತೂರಿಯನ್ನ 'ತಾಯಿ ಕಾರ್ಡ್, ಆಧಾರ್ ಕಾರ್ಡ್' ಇಲ್ಲ ಎಂದು ದಾಖಲಿಸಿಕೊಂಡಿಲ್ಲ. ವೈದ್ಯರ ಬಳಿ ಅಂಗಲಾಚಿ ಬೇಡಿದರೂ ಸ್ಪಂದಿಸಿಲ್ಲ. 'ನಾವು ಚಿಕಿತ್ಸೆ ಕೊಡಲ್ಲ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಡ್ತೀನಿ ಹೋಗಿ' ಎಂದು ವೈದ್ಯೆಯೊಬ್ಬರು ಹೇಳಿದ್ದಾರೆ. ಅಲ್ಲಿಗೆ ಹೋಗಲು ಹಣ ಇಲ್ಲದೆ ಕಸ್ತೂರಿ ನೋವಿನಲ್ಲೇ ವಾಪಸ್​ ಮನೆಗೆ ಹಿಂತಿರುಗಿದ್ದರು.

ರಾತ್ರಿಯಿಡೀ ಹೆರಿಗೆ ನೋವಿನಿಂದ ಬಳಲಿದ ಕಸ್ತೂರಿ ಇಂದು(ಗುರುವಾರ) ಬೆಳಗಿನ ಜಾವ ಜೋರಾಗಿ ಚೀರಾಡಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಹೋಗುವಷ್ಟರಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು, ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾಳೆ. ಅತ್ತ ಮಕ್ಕಳೂ ಮೃತಪಟ್ಟಿವೆ. ಹೆರಿಗೆಯಾದ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ತಾಯಿ ಮತ್ತು ಮಕ್ಕಳ ಮೃತದೇಹಗಳಿದ್ದ ದೃಶ್ಯ ನೋಡಿದ್ರೆ ಎಂತಹವರ ಕರುಳು ಚುರ್​ ಅನ್ನುತ್ತೆ.

ಬಾಣಂತಿ ಮತ್ತು ಇಬ್ಬರು ಮಕ್ಕಳ ಸಾವಿಗೆ ತುಮಕೂರು ಜಿಲ್ಲಾಸ್ಪತ್ರೆ ವೈದ್ಯರೇ ಕಾರಣ. ಹೆರಿಗೆ ನೋವೆಂದು ಬಂದಾಗ ದಾಖಲಿಸಿಕೊಂಡಿದ್ದರೆ ತಾಯಿ ಮತ್ತು ಮಕ್ಕಳಿಬ್ಬರು ಬದುಕುತ್ತಿದ್ದರು. ವೈದ್ಯರ ನಿರ್ಲಕ್ಷ್ಯವೇ ಮೂವರ ಸಾವಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.