ಜಾಗತಿಕವಾಗಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣಗಳೇನೆಂಬ ಮಾಹಿತಿ ಬೆನ್ನತ್ತಿ ಸಂಶೋಧನೆ ನಡೆಸಿದ ಜಾನ್ ಹಾಪ್ಕಿನ್ಸ್ ಮೆಡಿಸಿನ್ ಹೆಲ್ತ್ ಸಂಶೋಧಕರು ಅಚ್ಚರಿ ವಿಚಾರ ಬೆಳಕಿಗೆ ತಂದಿದ್ದಾರೆ.
ಇಂದು ವಿಶ್ವದಾದ್ಯಂತ ಸಣ್ಣ ವಯಸ್ಸಿನಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚುತ್ತಿರುವುದು ಹಾಗೂ ವಯಸ್ಸಾದವರಲ್ಲಿ ಇದು ಇಳಿಕೆ ಆಗುತ್ತಿದೆ. 1990ರಲ್ಲಿ ಹೃದಯದ ಸಮಸ್ಯೆಗಳಿಂದ ಸಾಯುವವರ ಸಂಖ್ಯೆ ಭಾರತದಲ್ಲಿ ವರ್ಷಕ್ಕೆ ಇಪ್ಪತ್ತು ಲಕ್ಷ ಇತ್ತು. 2020ರಲ್ಲಿ ಇದು ನಾಲ್ಕು ಪಟ್ಟು ಹೆಚ್ಚು ಅಂದರೆ 77 ಲಕ್ಷಕ್ಕೆ ಏರಿದೆ. ಪ್ರತಿವರ್ಷ 179 ಲಕ್ಷ ಜನರು ಜಗತ್ತಿನಾದ್ಯಂತ ಹೃದಯದ ಸಮಸ್ಯೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಸಾವಿಗೆ ಕಾರಣವಾದ ಹಲವಾರು ಸಮಸ್ಯೆಗಳಲ್ಲಿ ಹೃದಯದ ಸಮಸ್ಯೆ ಮುಂಚೂಣಿಯಲ್ಲಿದೆ.
ಬರ್ಡನ್ ಆಫ್ ಡಿಸೀಸ್ ಅಧ್ಯಯನದ ಪ್ರಕಾರ ಭಾರತದಲ್ಲಿ ಮಹಿಳೆಯರ ಸಾವಿಗೆ ಪ್ರಮುಖ ಕಾರಣ ಹೃದಯದ ಸಮಸ್ಯೆಗಳು. ಆಘಾತಕಾರಿ ವಿಷಯವೆಂದರೆ ಭಾರತದಲ್ಲಿ ಸ್ತನ ಕ್ಯಾನ್ಸರ್ ಜತೆಗೆ ಉಳಿದ ಎಲ್ಲ ಕ್ಯಾನ್ಸರ್ ಸೇರಿ ಒಟ್ಟು ಸಾಯುವವರ ಸಂಖ್ಯೆಗಿಂತ ಹೃದಯದ ತೊಂದರೆಗಳಿಂದ ಸಾಯುವವರ ಸಂಖ್ಯೆ ಹೆಚ್ಚು. ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಾಗಲು ಇರುವ ಹಲವಾರು ಕಾರಣಗಳಲ್ಲಿ ಒಂದು ಶೀಘ್ರ ಋತುಬಂಧ.
45 ವರ್ಷದ ಒಳಗೆ ಋತುಬಂಧವಾದರೆ ಅದನ್ನು ಶೀಘ್ರ ಋತುಬಂಧ ಎನ್ನಲಾಗುತ್ತದೆ. ಒಬ್ಬ ಆರೋಗ್ಯವಂತ ಮಹಿಳೆಯ ಸಹಜ ಋತುಬಂಧದ ವಯಸ್ಸು 45ರಿಂದ 55 ವರ್ಷ ಆಗಿರುತ್ತದೆ. ಋತುಬಂಧ ಮಹಿಳೆಯರಲ್ಲಿ ಒಂದು ಸಹಜ ಕ್ರಿಯೆ. ಒಮ್ಮೆಲೆ ಋತುಬಂಧ ಆಗುವುದಿಲ್ಲ. ಋತುಬಂಧಕ್ಕೆ ಮೊದಲು ಹಲವಾರು ವರ್ಷಗಳಿಂದ ದೇಹದಲ್ಲಿ ಬದಲಾವಣೆಗಳು ಉಂಟಾಗುತ್ತವೆ ಮತ್ತು ಅದರ ಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ. ಈ ಲಕ್ಷಣಗಳಾವುವೆಂದರೆ ಋತುಸ್ರಾವ ಹೆಚ್ಚಾಗಬಹುದು ಅಥವಾ ಕಡಿಮೆ ಆಗಬಹುದು, ಪಿರಿಯೆಡ್ಸ್ ದಿನಗಳು ಕೂಡ ಹೆಚ್ಚು ಕಡಿಮೆಯಾಗುತ್ತವೆ. 35 ವರ್ಷದ ಒಳಗೆ ಹಿಸ್ಟರೆಕ್ಟಮಿ ಅಂದರೆ ಗರ್ಭಕೋಶವನ್ನು ಹೊರತೆಗೆಸಿಕೊಂಡವರಿಗೆ ಹೃದಯದ ಸಮಸ್ಯೆಗಳು ಮತ್ತು ಹೃದಯಾಘಾತ ಸಾಧ್ಯತೆ ಹೆಚ್ಚಾಗಿರುತ್ತದೆ. ದಿ ಫೋರ್ಡ್ ನ್ಯಾಷನಲ್ ಹೆಲ್ತ್ ಸರ್ವೆ ಪ್ರಕಾರ 2015 - 16ರಲ್ಲಿ ನಡೆಸಿದ 15 ರಿಂದ 49 ವಯಸ್ಸಿನ ಏಳು ಲಕ್ಷ ಮಹಿಳೆಯರಲ್ಲಿ 2200 ಮಹಿಳೆಯರು ಹಿಸ್ಟರೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಕೊಬ್ಬಿನಿಂದ ಕೂಡಿದ ಮಾಂಸ, ಸಂಸ್ಕರಿತ ಆಹಾರ ಬೇಡ ಮದ್ಯ ಸೇವನೆ ಮಿತವಾಗಿರಲಿ, ಕೆಫೀನ್ನಿಂದ ಆರೋಗ್ಯ ಸಮಸ್ಯೆ, ಬೇರೆ ಪಾನೀಯ ಸೇವಿಸಿ, ಸದಾ ಕ್ರಿಯಾಶೀಲವಾಗಿರಿ, ವ್ಯಾಯಾಮ ಅತಿಮುಖ್ಯ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಈ ಬಗ್ಗೆ ಗೊಂದಲ ಇದ್ದಲ್ಲಿ ವೈದ್ಯರನ್ನು ಸಮಾಲೊಚಿಸಿ
1. ಪ್ರೋಜೆಸ್ಟಿರಾನ್ ಪ್ರಮಾಣ ಕಡಿಮೆ ಆಗುವುದರಿಂದ ನಿದ್ರಾಹೀನತೆ ಉಂಟಾಗುತ್ತದೆ
2. ಅತಿಯಾದ ಬೆವರು ಮತ್ತು ದೇಹ ಬಿಸಿ ಅನಿಸಲು ಕಾರಣ ಈಸ್ಟ್ರೋಜೆನ್ ಪ್ರಮಾಣ ಕಡಿಮೆಯಾಗುವುದು
3. ಈಸ್ಟ್ರೋಜನ್ ಹಾರ್ವೇನ್ ಕೊರತೆಯಿಂದ ಹೃದಯದ ಸಮಸ್ಯೆಗಳು ಮತ್ತು ಓಸ್ಟಿಯೋ ಪೋರೋಸಿಸ್ ಅಪಾಯ ಹೆಚ್ಚು
ಮಹಿಳೆಯರ ಅಂಡಾಶಯದಲ್ಲಿ ಮೊಟ್ಟೆಗಳು ಸಂಗ್ರಹವಾಗುತ್ತದೆ. ಅಲ್ಲದೆ ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ಹಾರ್ಮೋನು ಕೂಡ ತಯಾರಾಗುತ್ತದೆ. ಇದರ ಅವರ ಮುಟ್ಟಿನ ಅವಧಿಯನ್ನು ಮತ್ತು ಮೊಟ್ಟೆಗಳ ಬಿಡುಗಡೆಯನ್ನು (ಅಂಡೋತ್ಪತ್ತಿ) ನಿಯಂ ತ್ರಿಸುತ್ತದೆ. ಅಂಡಾಶಯಗಳು ಇನ್ಮುಂದೆ ಪ್ರತಿ ತಿಂಗಳು ಮೊಟ್ಟೆ ಬಿಡುಗಡೆ ಮಾಡದಿದ್ದಾಗ ಮತ್ತು ಮುಟ್ಟು ನಿಂತಾಗ ಋತುಬಂಧ ಸಂಭವಿಸುತ್ತದೆ.
ಇದಕ್ಕೆ ಖಚಿತವಾದ ಕಾರಣಗಳು ತಿಳಿಯದಿದ್ದರೂ ಈ ಕೆಳಗಿನ ಕೆಲವು ಅಂಶಗಳು ಕಾರಣಗಳೆಂದು ಗುರುತಿಸಲಾಗಿದೆ. ವರ್ಷದ ಒಳಗೆ ತಾಯಿ ಮಗುವಿಗೆ ಎದೆ ಹಾಲು ಕೊಡುವುದನ್ನು ನಿಲ್ಲಿಸಿದವರಲ್ಲಿ ಶೀಘ್ರ ಋತುಬಂಧದ ಸಾಧ್ಯತೆ ಹೆಚ್ಚು ದೈಹಿಕ ಚಟುವಟಿಕೆಗಳ ಕೊರತೆ. ವಂಶ ಪಾರಂಪರ್ಯತೆ, ಧೂಮಪಾನ- ಸಂಶೋಧನಗಳ ಪ್ರಕಾರ ಧೂಮ್ರಪಾನ ಮಾಡುವ ಮಹಿಳೆಯರು ಇತರರಿಗಿಂತ ಎರಡು ವರ್ಷ ಬೇಗನೆ ಶೀಘ್ರ ಋತುಬಂಧಕ್ಕೆ ಒಳಗಾಗುತ್ತಾರೆ ಮತ್ತು ಅವರ ಜೀವನ ಕೂಡ ಎರಡು ವರ್ಷ ಬೇಗನೆ ಮುಗಿಯುತ್ತದೆ. ಕೆಮೋಥೆರಪಿ.
ಯಾವುದೇ ಒಂದು ಉಪಚಾರದಿಂದ ಪ್ರೋಜೆಸ್ಟರಾನ್ ಪ್ರಮಾಣ ಹೆಚ್ಚಲು ಸಾಧ್ಯವಿಲ್ಲ. ಸಿ ಜೀವಸತ್ವ ಇರುವಂತಹ ಆಹಾರವನ್ನು ಉದಾಹರಣೆಗೆ ಸಿಟ್ರಸ್ ಹಣ್ಣುಗಳು, ಕ್ಯಾಬೇಜ್, ಆಲೂಗಡ್ಡೆ ಇವುಗಳ ಸೇವನೆ, ಒತ್ತಡ ಕಡಿಮೆ ಮಾಡಿಕೊಳ್ಳುವುದು - ಒತ್ತಡಗಳಿಂದ ಸ್ಟ್ರೆಸ್ ಹಾರ್ವೇನ್ ಹೆಚ್ಚಾಗಿ ಅಂಡಾಣುಗಳು ಮತ್ತು ಹಾರ್ಮೊನುಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇದಲ್ಲದೆ ಸುಖವಾದ ನಿದ್ರೆ, ಆರೋಗ್ಯಕರ ತೂಕ , ಸದಾ ಚಟುವಟಿಕೆಯಿಂದ ಇರುವುದು ವಿಟಮಿನ್ ಬಿ ಹೆಚ್ಚು ಇರುವಂತಹ ಆಹಾರಗಳ ಸೇವನೆ (ಬಾಳೆಹಣ್ಣು, ಕಲ್ಲಂಗಡಿ, ಟೊಮ್ಯಾಟೊ) ಜಿಂಕ್ ಅಧಿಕವಾಗಿರುವ ಗೇರುಬೀಜ, ಬಾದಾಮಿ, ಅಲಸಂದಿ ಮುಂತಾದವುಗಳ ಸೇವನೆ. ಮ್ಯಾಗ್ನೇಷಿಯಂ ಹೇರಳವಾಗಿರುವ ಅವರೆಕಾಯಿ, ಕಾಳುಗಳು, ಸೊಪ್ಪುಗಳು, ಹಣ್ಣುಗಳು ಇವುಗಳ ಸೇವನೆ, ಈಸ್ಟ್ರೋಜನ್ ಹೆಚ್ಚಿರುವಂತಹ ಆಹಾರಗಳಾದ ಬೆರಿ ಹಣ್ಣುಗಳು, ದ್ರಾಕ್ಷಿ, ಪ್ಲಮ್ ಪಿಯರ್ಸ್, ಬಾರ್ಲಿ, ಬಾದಾಮಿ, ಅಗಸೆ, ಎಳ್ಳು, ಮುಂತಾದವುಗಳ ಸೇವನೆಯಿಂದಲೂ ಹಾರ್ಮೊನು ಹೆಚ್ಚಿಸಿಕೊಳ್ಳಬಹುದು.
ಒಟ್ಟಾರೆ ಹೇಳುವುದಾರೆ ಶೀಘ್ರ ಋತುಬಂಧ ಹೃದಯಾಘಾತಕ್ಕೆ ಕಾರಣವಾಗುವುದಂತೂ ಸತ್ಯ. ಈ ಮೇಲಿನ ಸಲಹೆಗಳನ್ನು ಪಾಲಿಸಿ ಮತ್ತು ಪ್ರತಿನಿತ್ಯ ಯೋಗ ಮಾಡುವುದರಿಂದ ಶೀಘ್ರ ಋತುಬಂಧ ಮುಂದೂಡಿ ಹೃದಯಾಘಾತದಿಂದ ಪಾರಾಗಬಹುದು. ಈಗಾಗಲೇ ಶೀಘ್ರ ಋತುಬಂಧಕ್ಕೆ ಒಳಗಾದವರೂ ಕೂಡ ಮೇಲಿನ ಸಲಹೆಗಳನ್ನು ಪಾಲಿಸಿದಲ್ಲಿ ಹೃದಯಾಘಾತ ತಡೆಗಟ್ಟಬಹುದು.