ನ್ಯೂಸ್

ಹೃದ್ರೋಗಿಗಳೇ ಸುಮ್ಮನೆ ಕೂರದಿರಿ: ಸೋಂಕು ಹರಡಿದರೆ ಅಪಾಯ ಹೆಚ್ಚು, ಮನೆಯಲ್ಲೇ ವಾಕ್ ಮಾಡಿ

ಬೆಂಗಳೂರು: ಕರೊನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್​ಡೌನ್ ಘೋಷಿಸಲಾಗಿದ್ದು, ಅಲ್ಪಸ್ವಲ್ಪ ದೈಹಿಕ ಚಟುವಟಿಕೆ ನಡೆಸುತ್ತಿದ್ದ ನಗರವಾಸಿಗಳೂ ಕೂತಲ್ಲೇ ಕೂರುವ ಸ್ಥಿತಿ ಇದೆ. ಆದರೆ ಈಗಾಗಲೇ ಹೃದ್ರೋಗದಿಂದ ಬಳಲುತ್ತಿರುವವರ ಜತೆಗೆ ಸಾಮಾನ್ಯರೂ ಮನೆಯಲ್ಲಿ ಕನಿಷ್ಠ ದೈಹಿಕ ಕಸರತ್ತು ನಡೆಸುವುದು ಅತಿ ಮುಖ್ಯ ಎನ್ನುತ್ತಾರೆ ಹೃದ್ರೋಗ ತಜ್ಞರು. ಕರೊನಾ ಸೋಂಕು ಶ್ವಾಸಕೋಶ ವ್ಯವಸ್ಥೆಯನ್ನು ಬಾಧಿಸುತ್ತದೆ. ಧೂಮಪಾನಿಗಳಲ್ಲಿ ಗುಣಮುಖವಾಗುವ ಪ್ರಮಾಣ ನಿಧಾನ. ಇದೀಗ ಜಾಗತಿಕ ಮಟ್ಟದಲ್ಲಿ ಅನೇಕ ಸಂಶೋಧನೆಗಳು, ಕರೊನಾ ಕಾರಣಕ್ಕೆ ಹೃದಯದ ಮೇಲಾಗುವ ಪರಿಣಾಮದ ಮೇಲೂ ಬೆಳಕು ಚೆಲ್ಲಿವೆ. ಸಾಮಾನ್ಯರಿಗೆ ಕರೊನಾ ಸೋಂಕು ಉಂಟಾದರೂ ಅದು ಹೃದಯದ ವ್ಯವಸ್ಥೆಯನ್ನೂ ಬಾಧಿಸುತ್ತದೆ. ಅದಾಗಲೇ ಹೃದ್ರೋಗದಿಂದ ಬಳಲುತ್ತಿರುವವರಿಗೆ ಈ ಆತಂಕ ಮತ್ತಷ್ಟು ಹೆಚ್ಚು ಎಂದು ಕಳೆದ ವಾರ ಪ್ರಕಟವಾದ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಹಾಗೂ ಶುಕ್ರವಾರ ಪ್ರಕಟವಾದ ಟೆಕ್ಸಾಸ್ ಸೈನ್ಸ್ ಸೆಂಟರ್ ಸಂಶೋಧನಾ ವರದಿಗಳು ತಿಳಿಸಿವೆ.

ಎಚ್ಚರಿಕೆ ಅಗತ್ಯ

ಎಲ್ಲ ಹೃದ್ರೋಗಿಗಳಿಗೂ ತೊಂದರೆ ಇಲ್ಲ. ಸಾಮಾನ್ಯ ಹೃದಯದ ತೊಂದರೆ ಇದ್ದರೂ ಹೃದಯದ ಶಕ್ತಿ ಕಡಿಮೆ ಆಗಿಲ್ಲದಿದ್ದರೆ ಸಾಮಾನ್ಯರಂತೆಯೇ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂಥ ಮುನ್ನೆಚ್ಚರಿಕೆ ಸಾಕು. ಆದರೆ ಈಗಾಗಲೆ ತೆರೆದ ಹೃದಯ ಶಸ್ತ್ರಚಿಕಿತ್ಸೆ, ಆಂಜಿಯೋಪ್ಲಾಸ್ಟಿ ಆಗಿರುವಂಥ, ಶೇ.40ಕ್ಕಿಂತ ಕಡಿಮೆ ಕ್ಷಮತೆ ಹೊಂದಿರುವ ಹೃದಯದ ವರಾದರೆ ಎಚ್ಚರಿಕೆ ಅಗತ್ಯ. ಹೃದ್ರೋಗದ ಜತೆಗೆ ಮೂತ್ರಪಿಂಡ ಸಮಸ್ಯೆ ಇರುವವರೂ ಎಚ್ಚರಿಕೆ ವಹಿಸಬೇಕು. ಮನೆಯಿಂದ ಹೊರಬರದಿರುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಎಲ್ಲರಿಗೂ ಅನ್ವಯ ಎಂದಿ ದ್ದಾರೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್.

ದಿನಕ್ಕೆ ಅರ್ಧ ಗಂಟೆ ವ್ಯಾಯಾಮ

ಕ್ವಾರಂಟೈನ್, ಲಾಕ್​ಡೌನ್, ಐಸೋಲೇಷನ್​ಗಳಿಂದಾಗಿ ಮನೆಯಲ್ಲೇ ದಿನಗಟ್ಟಲೆ ಕೂರುವ ಪರಿಸ್ಥಿತಿ ಇದೆ. ಈ ಸಮಯದಲ್ಲೂ ಪ್ರತಿನಿತ್ಯ ತಪ್ಪದೇ ಕನಿಷ್ಠ 30 ನಿಮಿಷ ದೈಹಿಕ ಕಸರತ್ತು ನಡೆಸಬೇಕು ಎಂದು ಡಾ. ಸಿ.ಎನ್. ಮಂಜುನಾಥ್ ಸಲಹೆ ನೀಡಿದ್ದಾರೆ. ರಸ್ತೆಯಲ್ಲಿ 4-5 ಕಿ.ಮೀ. ನಡಿಗೆ ಮಾಡಿ ಎಂದು ಈ ಹಿಂದೆ ವೈದ್ಯರು ಸಲಹೆ ನೀಡಿರಬಹುದು. ಈಗ ಮನೆಯಿಂದ ಹೊರಗೆ ಹೋಗಲು ಸಾಧ್ಯವಿಲ್ಲ. ಮನೆಯ ಕಾಂಪೌಂಡ್​ನಲ್ಲಿ, ಮನೆಯ ಹಾಲ್​ನಲ್ಲೇ ಅರ್ಧ ಗಂಟೆ ನಡೆದರೂ ಸಾಕು. ಒಟ್ಟಿನಲ್ಲಿ ದೈಹಿಕವಾಗಿ ಸಕ್ರಿಯವಾಗಿರುವಂತೆ ಕಾಳಜಿ ವಹಿಸಬೇಕು ಎಂದಿದ್ದಾರೆ.