ನವದೆಹಲಿ: ಐಸ್ ಕ್ರೀಮ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರಿಗೂ ಐಸ್ಕ್ರೀಮ್ ರುಚಿಯಂದರೆ ಬಲು ಇಷ್ಟ. ಮಕ್ಕಳಿಗಂತೂ ಪಂಚ ಪ್ರಾಣ ಎಂದರೆ ತಪ್ಪಾಗಲಾರದು. ಐಸ್ಕ್ರೀಮ್ ಪ್ರಮುಖ ಅಂಶವೆಂದರೆ ಸಿಹಿ ಮತ್ತು ಅದರ ಕೂಲ್ನೆಸ್. ಆದರೆ, ಮಸಾಲೆಯುಕ್ತ ಐಸ್ ಕ್ರೀಮ್ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಕೇಳಿಲ್ಲ ಎಂದಾದರೆ, ನಾವು ಹೇಳುತ್ತೇವೆ ಕೇಳಿ. ಇದರ ಹೆಸರು "ರೆಸ್ಪಿರೊ ಡೆಲ್ ಡಯಾವೊಲೊ" ಅಥವಾ "ಡೆವಿಲ್ಸ್ ಬ್ರೀತ್".
ಡೆವಿಲ್ಸ್ ಬ್ರೀತ್ ಐಸ್ ಕ್ರೀಮ್ ಅನ್ನು ವಿಶ್ವದ ಅತ್ಯಂತ ಖಾರವಾದ ಮೆಣಸಿನಕಾಯಿಗಳಲ್ಲಿ ಒಂದಾದ ಕೆರೊಲಿನಾ ರೀಪರ್ ಬಳಸಿ ತಯಾರಿಸಲಾಗುತ್ತದೆ. ಈ ಐಸ್ ಕ್ರೀಮ್ ತಯಾರಕರು ಯಾರೆಂದರೆ, ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿರುವ ಆಲ್ಡ್‌ವಿಚ್ ಕೆಫೆ ಮತ್ತು ಐಸ್ ಕ್ರೀಮ್ ಪಾರ್ಲರ್.
ಈ ಐಸ್ ಕ್ರೀಮ್ನಲ್ಲಿರುವ ವಿಪರೀತ ಮಸಾಲೆ ಕಾರಣದಿಂದಾಗಿ ಇದನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಐಸ್ ಕ್ರೀಮ್ ತಿಂದ ನಂತರ ಏನಾದರೂ ಸಂಭವಿಸಿದರೆ ಅದಕ್ಕೆ ತಿಂದವರೇ ಜವಬ್ದಾರರು ಹೊರತು, ಕಂಪನಿಯಲ್ಲ. ಹೀಗಂತ ಐಸ್ ಕ್ರೀಮ್ ತಿನ್ನುವ ಮೊದಲೇ ಪತ್ರವೊಂದರ ಮೇಲೆ ಹೇಳಿಕೆ ಬರೆದು ಅದಕ್ಕೆ ಸಹಿ ಹಾಕಬೇಕು.
ಇನ್ನು ರೆಸ್ಪಿರೊ ಡೆಲ್ ಡಯಾವೊಲೊ ಐಸ್ ಕ್ರೀಮ್ನ ಪಾಕವಿಧಾನವೇ ತುಂಬಾ ರಹಸ್ಯವಾಗಿದೆ. 2018ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಈ ಐಸ್ ಕ್ರೀಮ್ ಸ್ಕೂಪ್ ಬೆಲೆ 235 ರೂ.ವರೆಗೆ ಇದೆ. ಐಸ್ ಕ್ರೀಮ್ ಅನ್ನು ಪ್ರಯತ್ನಿಸಿದ ಕೆಲವರು ಮಸಾಲೆಯುಕ್ತ ಆಹಾರಗಳ ಅಭ್ಯಾಸ ಇಲ್ಲದವರು ಈ ಐಸ್ ಕ್ರೀಮ್ ಬಳಿ ಹೋಗದಿರುವುದೇ ಉತ್ತಮ ಎಂದು ಹೇಳುತ್ತಾರೆ.
ಇನ್ನು ಈ ಐಸ್ ಕ್ರೀಂ ತಿಂದ ಕೆಲವರು ಮೂರ್ಛೆ ಹೋಗಿ ಭಯಭೀತರಾಗಿದ್ದರು ಎನ್ನಲಾಗಿದೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ಐಸ್ ಕ್ರೀಮ್ ಎಂದು ಬಣ್ಣಿಸಲಾಗಿದೆ. (ಏಜೆನ್ಸೀಸ್)