ನ್ಯೂಸ್

ಆರೋಗ್ಯ ಸಹಾಯಕಿ ಪತಿ ಮೇಲೆ ಹಲ್ಲೆಗೆ ಯತ್ನ ಕಿಡಿಗೇಡಿ ಯುವಕನ ಬಂಧನ | ಕರೊನಾ ಸೋಂಕು ತಗುಲಿದೆ ಎಂದು ವದಂತಿ

ಶ್ರೀರಂಗಪಟ್ಟಣ: ತಾಲೂಕಿನ ಮೇಳಾಪುರ ಗ್ರಾಮದ ಮಂಟಿಯಲ್ಲಿ ಬುಧವಾರ ರಾತ್ರಿ ಆರೋಗ್ಯ ಸಹಾಯಕಿಯನ್ನು ನಿಂದಿಸಿ, ಆಕೆಯ ಪತಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಯುವಕನನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಗ್ರಾಮದ ಅಭಿಷೇಕ್ (21) ಬಂಧಿತ ಯುವಕ.

ಗ್ರಾಮದಲ್ಲಿ ಜನರಿಗೆ ಚಿಕಿತ್ಸೆ ನೀಡುವ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಸಹಾಯಕಿ ತಸ್ಮಿಯಾ ಬಾನುಗೆ ಕರೊನಾ ವೈರಸ್ ಸೋಂಕಿದೆ ಎಂದು ಅಭಿಷೇಕ್ ಸುಳ್ಳು ಸುದ್ದಿ ಹರಡಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ತಸ್ಮಿಯಾ ಪತಿ ಬುಧವಾರ ಸಂಜೆ ಅಭಿಷೇಕ್ ಬಳಿ ತೆರಳಿ ವದಂತಿ ಹಬ್ಬಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಜಗಳ ಬಿಡಿಸಲು ಯತ್ನಿಸಿದ ಆರೋಗ್ಯ ಸಹಾಯಕಿಯನ್ನೂ ಯುವಕ ನಿಂದಿಸಿದ. ವಿಷಯ ತಿಳಿದು ಗ್ರಾಮಕ್ಕೆ ಧಾವಿಸಿದ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

ತಹಸೀಲ್ದಾರ್ ಎಂ.ವಿ.ರೂಪಾ, ತಾಪಂ ಇಒ ನಾಗವೇಣಿ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಗ್ಯ ಸಹಾಯಕಿ ತಸ್ಮಿಯಾ ಬಾನು ಜತೆ ಮಾತನಾಡಿ ಧೈರ್ಯ ಹೇಳಿದರು.

ಆಶಾ ಕಾರ್ಯಕರ್ತೆಗೆ ಥಳಿತ: ಕರೊನಾ ತಡೆಗಟ್ಟಲು ಬುಧವಾರ ಸರ್ವೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಆಶಾ ಕಾರ್ಯಕರ್ತೆ ಮೇಲೆ ಇಬ್ಬರು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಹೊಸಪೇಟ ಗಲ್ಲಿ ನಿವಾಸಿ ಆಶಾ ಕಾರ್ಯಕರ್ತೆ ಗೀತಾ ಸುನೀಲ್ ಬುಯೆ ಹಲ್ಲೆಗೆ ಒಳಗಾದವರು. ವಾರ್ಡ್ 14ರ ಕೈಕಾಡಿ ಗಲ್ಲಿಯಲ್ಲಿ ಸಮೀಕ್ಷೆ ಮಾಡಿ ಸಹೋದ್ಯೋಗಿ ಜತೆ ನಡೆದು ಮನೆಗೆ ಬರುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಬುದ್ಧಿ ಹೇಳಿದ್ದಕ್ಕೆ ಪೊಲೀಸ್​ಗೇ ಜೀವ ಬೆದರಿಕೆ: ಪಟ್ಟಣದ ಜೋಪಡಪಟ್ಟಿ ಪ್ರದೇಶದ ಮಸೀದಿ ಎದುರು ಬುಧವಾರ ಸಂಜೆ ಕುಳಿತಿದ್ದ ಜನರಿಗೆ ಮಾಸ್ಕ್ ಹಾಕಿಕೊಳ್ಳಿ, ಗುಂಪು ಗುಂಪಾಗಿ ಕೂರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ತಿಳಿಹೇಳಿದ ಪೊಲೀಸ್ ಪೇದೆ ಉಮೇಶ ಹಳಿಮನಿ ಮೇಲೆಯೇ ಹಲ್ಲೆ ನಡೆಸಲಾಗಿದೆ. ಜತೆಗೆ ಕೆಲವರು ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಈ ಸಂಬಂಧ ಗಫೂರ್ ಖಾಸೀಂ ಮಿಠಾಯಿ ಎಂಬಾತನನ್ನು ಬಂಧಿಸಿದ ಪೊಲೀಸರು, ಅಬ್ದುಲ್ ರಹಿಮಾನ್ ಮಾಡಲ್, ಬಾಬಾ ಚಾಂದಪಾಶಾ ಕೂಡಿ ಎಂಬುವರ ಶೋಧ ನಡೆಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಕೇಸ್ ದಾಖಲಾಗಿದೆ.