ಮಳೆಗಾಲ ಬರುತ್ತಿದ್ದಂತೆ ಬಹಳಷ್ಟು ಜನರಿಗೆ ಅಜೀರ್ಣದ ಸಮಸ್ಯೆ ಕಾಡುತ್ತದೆ. ಶುಂಠಿ, ಜೀರಿಗೆ ಮತ್ತು ನಾಲ್ಕು ಎಲೆ ತುಳಸಿಯ ಕಷಾಯ ಮಾಡಿ ನಿರಂತರವಾಗಿ ಮೂರು ದಿನ ಕುಡಿದರೆ ಜೀರ್ಣಕ್ರಿಯೆ ಹೆಚ್ಚಿ ತುಂಬಾ ಅನುಕೂಲವಾಗುತ್ತದೆ. ಬ್ಯಾಕ್ಟೀರಿಯಾ, ವೈರಸ್, ಫಂಗಸ್ ಮುಂತಾದ ಸೂಕ್ಷ್ಮ ಜೀವಿಗಳಿಂದ ನಮಗೆ ತೊಂದರೆ ಆಗುತ್ತಿದ್ದರೆ ಅದನ್ನು ನಿವಾರಿಸುವ ಶಕ್ತಿ ತುಳಸಿಗೆ ಇದೆ. ಹಾಗಾಗಿ ನಾವು ಆಗಾಗ ಇದನ್ನು ಸೇವಿಸುತ್ತಿದ್ದರೆ ನಮಗೆ ಸೋಂಕಿನಿಂದ ಉಂಟಾಗುವ ತೊಂದರೆಗಳು ದೂರವಾಗುತ್ತವೆ. ಯಾವುದೇ ಕಾರಣದಿಂದ ದೇಹದಲ್ಲಿ ವಿಷದ ಪ್ರವೇಶ ಆಗಿದ್ದರೆ
ಅದನ್ನು ಕಡಿಮೆ ಮಾಡಲು ತುಳಸಿ ಸಹಕಾರಿ. ಅರ್ಧ ಚಮಚ ತುಳಸಿಯ ರಸಕ್ಕೆ ಅರ್ಧ ಚಮಚ ಜೇನುತುಪ್ಪ ಹಾಕಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ವಿಷವು ಕಡಿಮೆಯಾಗಲು ಸಹಾಯವಾಗುತ್ತದೆ. ಆಧುನಿಕ ಸಂಶೋಧನೆಗಳ ಪ್ರಕಾರ ಕೂಡ ತುಳಸಿಯು ಸೂಕ್ಷ್ಮಾಣು ಜೀವಿಗಳನ್ನು ನಿಯಂತ್ರಿಸಿ ನಮ್ಮನ್ನು ರೋಗಗಳಿಂದ ಕಾಪಾಡುತ್ತದೆ. ಚಿಕ್ಕ ಮಕ್ಕಳಿಗೂ ಇದನ್ನು ಆಗಾಗ ಕೊಟ್ಟರೆ ಅನುಕೂಲವಾಗುತ್ತದೆ; ಏಕೆಂದರೆ ಸಾಮಾನ್ಯವಾಗಿ ಮಕ್ಕಳಿಗೆ ಕಾಡುವ ಕ್ರಿಮಿ ಸಮಸ್ಯೆ, ಪದೇಪದೇ ನೆಗಡಿ ಜ್ವರ ಕಫದ ತೊಂದರೆಗಳು ಮತ್ತು ಲಿವರ್ ಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಇದು ಕಡಿಮೆ ಮಾಡುತ್ತದೆ. ಪದೇ ಪದೇ ಕಿಡ್ನಿಯಲ್ಲಿ ಕಲ್ಲಾಗುವವರು ಕೂಡ ಇದನ್ನು ಆಗಾಗ ಸೇವಿಸಿದರೆ ಆ ಸಮಸ್ಯೆಗಳು ಬರದಂತೆ ಇದು ತಡೆಯಲು ಸಹಾಯ ಮಾಡುತ್ತದೆ. ಹಲವರ ಪ್ರಕಾರ ಇದು ಮಾನಸಿಕ ಕಾಯಿಲೆಗಳಲ್ಲಿಯೂ ಅನುಕೂಲಕರ. ಬಹುಶಃ ಇದೆಲ್ಲ ಕಾರಣಗಳಿಂದಾಗಿಯೇ ತುಳಸಿಯನ್ನು ಹಾಕಿದ ನೀರನ್ನು ತೀರ್ಥವೆಂದು ನಿತ್ಯವೂ ಸೇವಿಸುವ ಪದ್ಧತಿ ನಮ್ಮಲ್ಲಿರುವುದು. ಊಟವಾದ ನಂತರ ಬಾಯಿ ವಾಸನೆಯನ್ನು ಕಡಿಮೆ ಮಾಡಲು ಒಂದು ಅಥವಾ ಎರಡು ತುಳಸಿ ಎಲೆಗಳನ್ನು ಅಗಿಯುವುದು ತುಂಬಾ ಅನುಕೂಲಕರ. ಸೈನಸೈಟಿಸ್ ಅಥವಾ ತಲೆನೋವು ಇದ್ದು ಜತೆಗೆ ಮೂಗು ಕಟ್ಟಿಕೊಂಡಿದ್ದರೆ ತುಳಸಿಯ ರಸ ತೆಗೆದು ಎರಡೆರಡು ಹನಿಗಳನ್ನು ಎರಡೂ ಹೊಳ್ಳೆಗಳಲ್ಲಿ ಹೊಟ್ಟೆ ಖಾಲಿ ಇರುವಾಗ ಹಾಕಿದರೆ ಕಟ್ಟಿದ ಮೂಗು ತೆರೆದುಕೊಂಡು ತಲೆನೋವು ಮತ್ತು ಸೈನಸೈಟಿಸ್ ಕಡಿಮೆಯಾಗಿ ಕಫವೆಲ್ಲ ಹೊರಗೆ ಬರಲು ಅನುಕೂಲವಾಗುತ್ತದೆ.