ನ್ಯೂಸ್

ಉಚಿತ ಶಿಬಿರಗಳ ಮೂಲಕ ಹಳ್ಳಿ ಜನರಿಗೂ ಆರೋಗ್ಯ ಸೇವೆ ತಲುಪಿಸಿ; ಅಧಿಕಾರಿಗಳಿಗೆ ದಿನೇಶ್ ಗುಂಡೂರಾವ್ ಸೂಚನೆ

ಬೆಂಗಳೂರು: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದಲೇ ಉಚಿತ ಆರೋಗ್ಯ ಶಿಬಿರಗಳನ್ನ ರಾಜ್ಯದಾದ್ಯಂತ ನಡೆಸಲು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನ ಗಾಂಧಿನಗರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಉಚಿತ ಶಿಬಿರಗಳ ಮೂಲಕ ಆರೋಗ್ಯ ಸೇವೆಗಳು ರಾಜ್ಯದ ಹಳ್ಳಿಗಾಡಿನ ಜನರಿಗೂ ತಲುಪಬೇಕು. ಈ ನಿಟ್ಟಿನಲ್ಲಿ ರಾಜ್ಯದ ಜಿಲ್ಲೆಗಳು ಹಾಗೂ ತಾಲೂಕು ಮಟ್ಟಕ್ಕೂ ಉಚಿತ ಆರೋಗ್ಯ ಶಿಬಿರಗಳನ್ನ ಕೊಂಡೊಯ್ಯುವಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.‌

ಮುಂಜಾಗೃತವಾಗಿ ಕಾಯಿಲೆಗಳನ್ನ ತಡೆಗಟ್ಟುವುದು ಬಹುಮುಖ್ಯ. ಜನರ ಜೀವನ ಶೈಲಿ ಬದಲಾದಂತೆ, ಇವತ್ತಿನ ದಿನಮಾನಗಳಲ್ಲಿ ಬಿ.ಪಿ, ಶೂಗರ್, ಕ್ಯಾನ್ಸರ್, ಕಿಡ್ನಿ ಸಮಸ್ಯೆಯ ಕಾಯಿಲೆಗಳು ಜ‌ನರನ್ನ ಕಾಡುತ್ತಿವೆ. ಈ ಕಾಯಿಲೆಗಳನ್ನ ಮೊದಲೇ ಪತ್ತೆ ಹಚ್ಚಿದರೇ, ಚಿಕಿತ್ಸೆ ಮೂಲಕ ಆರಂಭದಲ್ಲೇ ಗುಣಪಡಿಸಬಹುದು. ಹೀಗಾಗಿ ಉಚಿತ ಆರೋಗ್ಯ ಶಿಬಿರಗಳು ಹೆಚ್ವು ಅವಶ್ಯಕವಾಗಿದ್ದು, ಜನಸಾಮಾನ್ಯರಿಗೆ ಹೆಚ್ವು ಸದುಪಯೋಗವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.