ನ್ಯೂಸ್

ಆರೋಗ್ಯ-ಪೊಲೀಸ್ ಇಲಾಖೆ ಪತ್ತೇದಾರಿಕೆ ಮುಂದುವರಿಕೆ: 42 ಸಾವಿರ ಮಂದಿಯನ್ನು ಪರಿವೀಕ್ಷಣೆಯಲ್ಲಿಟ್ಟ ಸಾಹಸಿಗಳು | ಅಸಹಕಾರ, ಆತಂಕಗಳ ನಡುವೆಯೂ ಕಾರ್ಯನಿರ್ವಹಣೆ

ಬೆಂಗಳೂರು: ಕರೊನಾ ನಿಯಂತ್ರಣ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ಪತ್ತೇದಾರಿಕೆ ಕೆಲಸ ಕಳೆದ 10 ದಿನಗಳಿಂದ ಮುಂದುವರಿದಿದ್ದು, ದೊಡ್ಡಮಟ್ಟದಲ್ಲಿ ಸೋಂಕು ಹರಡದಂತೆ ತಡೆಯುವಲ್ಲಿ ಭಾರಿ ಸಾಹಸವನ್ನೇ ಮಾಡಿದ್ದಾರೆ.

41 ಸಾವಿರ ಆಶಾ ಕಾರ್ಯಕರ್ತೆಯರು ಸರ್ವೆ ಮೂಲಕ ಮನೆ ಮನೆಗೆ ಎಡ ತಾಕಿದ್ದಲ್ಲದೆ, ಆರೋಗ್ಯ ವಿಚಾರಣೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಅವರು ಭೇಟಿಕೊಟ್ಟ ಪ್ರದೇಶಕ್ಕೆ ಹೊರಗಿನಿಂದ ಬಂದವರ (ವಿದೇಶ ಅಥವಾ ಪರ ಊರು) ಮಾಹಿತಿ ಹೆಕ್ಕಿ ತೆಗೆಯುವ ಮೂಲಕ ಒಂದು ಸಣ್ಣ ಪತ್ತೇದಾರಿಕೆ ಮಾಡಿದ್ದಾರೆ. ಇದರಿಂದ ಸುಲಭವಾಗಿ ಮನೆಯಿಂದ ಬಂದವರು ಮತ್ತು ಹೊರಗಿನಿಂದ ಬಂದವರನ್ನು ಪ್ರತ್ಯೇಕಿಸುವ ಕೆಲಸವನ್ನು ಯಶಸ್ವಿಯಾಗಿಸಲು ಸಾಧ್ಯವಾಗಿದೆ. ವಾಹನಗಳೇ ತೆರಳದ ಕುಗ್ರಾಮದ ಒಂಟಿ ಮನೆಗೂ ತೆರಳಿ, ಆ ಮನೆಗಳಲ್ಲಿ ಹೊರಗಿನಿಂದ ಬಂದವರನ್ನು ಪತ್ತೆಹಚ್ಚಿದ್ದಾರೆ. ಜತೆಗೆ ಸ್ವಯಂ ದಿಗ್ಭಂಧನದ ಅವಶ್ಯಕತೆಯನ್ನೂ ತಿಳಿಹೇಳಿದ್ದಾರೆ.

ಆಶಾ ಕಾರ್ಯಕರ್ತರು ಒಂದು ರೀತಿಯಲ್ಲಿ ದೊಡ್ಡ ಪ್ರಯತ್ನ ಮಾಡಿದರೆ, ಪೊಲೀಸರದ್ದು ಮತ್ತೊಂದು ಸಾಹಸಗಾಥೆ. ಅಂದಾಜು 78 ಸಾವಿರ ಪೊಲೀಸ್ ಸಿಬ್ಬಂದಿ ತಮ್ಮ ದಿನನಿತ್ಯದ ಎಲ್ಲ ಕೆಲಸ ಬದಿಗೊತ್ತಿ ಕರೊನಾ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಇವರಲ್ಲಿ ಸಾವಿರಾರು ಪೊಲೀಸರು ರಸ್ತೆಯಲ್ಲಿ ನಿಂತರೆ ಮತ್ತೆ ಕೆಲವರು ಕ್ವಾರಂಟೈನ್ ಮಾಡಿಸುವಲ್ಲಿ ಸಫಲರಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಲಭ್ಯವಾಗುವ ಪ್ರಯಾಣಿಕರ ಮಾಹಿತಿ ದಾಖಲೆ ಮತ್ತು ಮೊಬೈಲ್​ಫೋನ್ ನೆಟ್​ವರ್ಕ್ (ದೆಹಲಿ ಪ್ರಕರಣ) ಆಧಾರದಲ್ಲಿ ಸೋಂಕು ಶಂಕಿತರನ್ನು ಹಗಲು ರಾತ್ರಿ ಎನ್ನದೆ ಹುಡುಕುವ ಜತೆಗೆ, ಸ್ವಯಂ ದಿಗ್ಬಂಧನ ಮಾಡಿಸಿ ಬಂದಿದ್ದಾರೆ.

ಇನ್ನೊಂದು ವಿಶೇಷವೆಂದರೆ, ಕ್ವಾರಂಟೈನ್ ಉಲ್ಲಂಘಿಸುವವರನ್ನು ಪತ್ತೆ ಮಾಡಿ ಅವರಿಗೆ ಒಂದು ಬಾರಿ ಎಚ್ಚರಿಕೆ ಕೊಡುವ ಹಾಗೂ ಎರಡನೇ ಬಾರಿ ಪ್ರಕರಣ ದಾಖಲಿಸುವ ಕೆಲಸ ಮಾಡಿದ್ದಾರೆ. ಈ ಚಟುವಟಿಕೆಯಲ್ಲೂ ಒಂದಷ್ಟು ತಂತ್ರ ಪ್ರಯೋಗಿಸಿದ್ದಾರೆ. ಕ್ವಾರಂಟೈನ್​ನಲ್ಲಿರುವ ವ್ಯಕ್ತಿಯ ಚಲನವಲನದ ಮೇಲೆ ಗಮನ ಇಡಲು ಸ್ಥಳೀಯರ ನೆರವು ಕೋರಿ ಆಗಿಂದಾಗ್ಯೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ಮೂಲಕ ಕ್ವಾರಂಟೈನಿಗಳನ್ನು ನಿಯಂತ್ರಿಸುವಲ್ಲಿ ಸಫಲರಾಗಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಈ ಕೆಲಸಕ್ಕೆ ಕೈಜೋಡಿಸಿದ್ದಾರೆ.

ವಿಶೇಷವೆಂದರೆ ಇಡೀ ಭಾರತ ಲಾಕ್​ಡೌನ್ ಆಗಿದ್ದು, ಬಹುತೇಕರು ಮನೆಯಲ್ಲಿದ್ದಾರೆ. ಆಶಾ ಕಾರ್ಯಕರ್ತೆಯರು, ಪೊಲೀಸರು ಸೋಂಕಿತರ ಹುಡುಕಾಟದಲ್ಲಿ ಪತ್ತೇದಾರಿಕೆ ಕೆಲಸ ಮುಂದುವರಿಸಿದ್ದಾರೆ. ತಮಗೆ ಬೆಂಬಲ ಸಿಗದೆ, ಅವಾಚ್ಯ ಮಾತುಗಳು ಕೇಳಿಬಂದರೂ ಕರ್ತವ್ಯ ಮುಂದು ವರಿಸಿದ್ದಾರೆ. 2 ದಿನದ ಹಿಂದೆ ಸೋಂಕಿತರ ಬಗ್ಗೆ ಮಾಹಿತಿ ಕಲೆ ಹಾಕುವಾಗಲೇ ಆಶಾ ಕಾರ್ಯಕರ್ತರು ಆಪತ್ತಿಗೆ ಸಿಲುಕಿರುವುದು ಅವರ ಕಾರ್ಯಾಚರಣೆ ಹೇಗಿರುತ್ತದೆ ಎಂಬುದಕ್ಕೊಂದು ತಾಜಾ ಉದಾಹರಣೆ.

ಆತಂಕದಲ್ಲಿ ಸಾಹಸಿಗಳು

ನ್ಯೂಯಾರ್ಕ್​ನಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಪೊಲೀಸರಲ್ಲಿ ಒಂದು ಸಾವಿರ ಜನರಲ್ಲಿ ಕರೊನಾ ಸೋಂಕು ಕಂಡುಬಂದಿದೆ. ಜತೆಗೆ ಆರೋಗ್ಯ ಪರಿಸ್ಥಿತಿ ನಿರ್ವಹಿಸುತ್ತಿರುವ ಸಿಬ್ಬಂದಿಗೂ ಸೋಂಕು ತಗುಲಿದ್ದು, ಈ ವಿಚಾರ ರಾಜ್ಯದ ಆರೋಗ್ಯ ಇಲಾಖೆ ಗಮನಕ್ಕೂ ಬಂದಿದ್ದು, ಇಲ್ಲಿ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಪ್ರಾಥಮಿಕ ಹಂತದ ಚರ್ಚೆಗಳು ನಡೆದಿವೆ. ನ್ಯೂಯಾರ್ಕ್​ನಲ್ಲಿ ಬರೋಬ್ಬರಿ 47 ಸಾವಿರ ಕರೊನಾ ಪ್ರಕರಣಗಳು ಕಂಡುಬಂದಿದ್ದು, ಅಲ್ಲಿ ಸಮುದಾಯಕ್ಕೆ ಸೋಂಕು ಹಬ್ಬಿದೆ. ಹೀಗಾಗಿ ಕರ್ತವ್ಯದಲ್ಲಿರುವ ಭದ್ರತಾ ಸಿಬ್ಬಂದಿಗೂ ದೊಡ್ಡ ಪ್ರಮಾಣದಲ್ಲಿ ಸೋಂಕು ಹಬ್ಬಿರಲಿಕ್ಕೂ ಸಾಕು. ಆದರೆ, ಇಲ್ಲಿ ಇನ್ನೂ ಆ ಹಂತ ತಲುಪಿಲ್ಲ. ತಲುಪದಂತೆ ಪ್ರಯತ್ನಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.