ನ್ಯೂಸ್

ಕರೊನಾ ಹೋರಾಟದ ಮುಂಚೂಣಿಯಲ್ಲಿರುವ ಡಾ. ಹರ್ಷ್​ ವರ್ಧನ್ ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ಮಂಡಳಿಗೆ ಅಧ್ಯಕ್ಷ

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಖಾತೆ ಸಚಿವ ಡಾ. ಹರ್ಷ್​ ವರ್ಧನ್ ಅವರು ನೇಮಕಗೊಂಡಿದ್ದು. ಅವರು ಇದೇ 22ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಭಾರತದಲ್ಲಿ ಕರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಂಗಳವಾರ (ಮೇ 19) ನಡೆದ 73 ನೇ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಎ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾರ್ಯಕಾರಿ ಮಂಡಳಿ ಮೂರು ವರ್ಷಗಳ ಅವಧಿಗೆ 34 ಸದಸ್ಯರನ್ನು ಇದೇ ವೇಳೆ ಆಯ್ಕೆ ಮಾಡಲಾಗಿದೆ. ಈ ಸಭೆಯು ಮೇ 22 ರಂದು ನಡೆಯಲಿದ್ದು, ಅಂದು ಡಾ.ಹರ್ಷ್​ ವರ್ಧನ್​ ಅಧಿಕಾರ ಸ್ವೀಕರಿಸಲಿದ್ದಾರೆ.

ಜಪಾನ್​ನ ಡಾ. ಹಿರೋಕಿ ನಕಟಾನಿ ಅವರು ಇಲ್ಲಿಯವರೆಗೆ ಈ ಹುದ್ದೆಯಲ್ಲಿದ್ದರು. ಭಾರತದ ಪ್ರತಿನಿಧಿಯನ್ನು ಕಾರ್ಯಕಾರಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಪ್ರಸ್ತಾವನೆಗೆ 194 ದೇಶಗಳನ್ನೊಳಗೊಂಡ ವಿಶ್ವ ಆರೋಗ್ಯ ಸಭೆಯಲ್ಲಿ ಸಹಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಈ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗುತ್ತದೆ. ಆದರೆ, ಕೇಂದ್ರ ಸರ್ಕಾರವು ತನ್ನ ಸಚಿವರನ್ನೇ ಆ ಸ್ಥಾನಕ್ಕೆ ನೇಮಿಸಲು ನಿರ್ಧರಿಸಿದೆ.

ಈ ಹುದ್ದೆಯನ್ನು ಭಾರತ ಸೇರಿದಂತೆ ಮೂರು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ನೀಡಲು ಕಳೆದ ವರ್ಷವೇ ನಿರ್ಧರಿಸಲಾಗಿತ್ತು. ಇದು ಪೂರ್ಣ ಸಮಯದ ಹುದ್ದೆ ಅಲ್ಲ. ಪೂರ್ಣಾವಧಿ ಕರ್ತವ್ಯ ನಿಭಾಯಿಸುವ ಅಗತ್ಯ ಸಂಸ್ಥೆಯಲ್ಲಿ ಇರುವುದಿಲ್ಲ. ವರ್ಷಕ್ಕೆ ಎರಡು ಬಾರಿ ನಡೆಯುವ (ದ್ವಿ-ವಾರ್ಷಿಕ) ಸಭೆಗಳ ನೇತೃತ್ವ ವಹಿಸುವುದು ಪ್ರಮುಖ ಕರ್ತವ್ಯವಾಗಿರುತ್ತದೆ. ಆರೋಗ್ಯ ಕ್ಷೇತ್ರಗಳಲ್ಲಿ ತಾಂತ್ರಿಕವಾಗಿ ಪರಿಣತರಾಗಿರುವ ವ್ಯಕ್ತಿಗಳನ್ನು ಇದಕ್ಕೆ ಆಯ್ಕೆ ಮಾಡಲಾಗುತ್ತದೆ.

ಮಾಜಿ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು 2016 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಇದೇ ರೀತಿಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.