ಶಿವಮೊಗ್ಗ ನಗರದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬ ಸದಸ್ಯರಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರವನ್ನು ಎಂಎಲ್‌ಸಿ ಬಲ್ಕಿಷ್ ಬಾನು ಉದ್ಘಾಟಿಸಿದರು. ಎಚ್.ಎಸ್.ಸುಂದರೇಶ್, ಆರ್.ಮೋಹನ್‌ಕುಮಾರ್, ಡಾ. ಪೃಥ್ವಿ, ಡಾ. ದಯಾನಂದ, ಡಾ. ನಾಗಮಣಿ, ಡಾ. ಮಹೇಶ್‌ಮೂರ್ತಿ, ಕೆ.ವಿ.ಶಿವಕುಮಾರ್, ವಿ.ಟಿ.ಅರುಣ್ ಇದ್ದರು. 
ನ್ಯೂಸ್

ಎಲ್ಲ ಸಂಪತ್ತಿಗಿಂತ ಆರೋಗ್ಯವೇ ಮಿಗಿಲು

ಶಿವಮೊಗ್ಗ: ಅನಾರೋಗ್ಯಕ್ಕೆ ಕಾರಣವಾಗುತ್ತಿರುವ ಆಹಾರ ಪದ್ಧತಿ, ಜೀವನ ಶೈಲಿ ಕುರಿತು ಆರೋಗ್ಯಕರ ಚಿಂತನೆಗಳು ನಡೆಯಬೇಕಿದೆ. ಎಲ್ಲ ಸಂಪತ್ತಿಗಿಂತ ಆರೋಗ್ಯವೇ ದೊಡ್ಡದು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಹೇಳಿದರು.

ನಗರದ ಮಾತೃವಾತ್ಸಲ್ಯ ಆಸ್ಪತ್ರೆಯಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಮೆಟ್ರೋ ಆಸ್ಪತ್ರೆ, ಹೃದಯ ಸ್ಪೆಷಾಲಿಟಿ ಕ್ಲಿನಿಕ್ ಹಾಗೂ ಕ್ರಿಷ ಕಿಡ್ನಿಕೇರ್ ಸೆಂಟರ್ ಸಹಭಾಗಿತ್ವದಲ್ಲಿ ಜಿಲ್ಲೆಯ ಪತ್ರಕರ್ತರು ಮತ್ತು ಅವರ ಕುಟುಂಬ ಸದಸ್ಯರಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಮಾತ್ರವಲ್ಲ, ಆರೋಗ್ಯಕರ ಶಿಕ್ಷಣ ನೀಡಬೇಕಿದೆ. ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಬೇಕು. ಆಹಾರ ಪದ್ಧತಿ ಮತ್ತು ಜೀವನ ಶೈಲಿ ಬದಲಾವಣೆಯಿಂದ ಆರೋಗ್ಯ ಸುಧಾರಣೆ ಸಾಧ್ಯವಿದೆ ಎಂದರು.

ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಆರೋಗ್ಯ ಇಲ್ಲದಿದ್ದರೆ ಎಷ್ಟೇ ಹಣವಿದ್ದರೂ ಪ್ರಯೋಜನವಿಲ್ಲ. ಹೀಗಾಗಿ ಸರ್ಕಾರ ಕೂಡ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿದೆ. ಕರೊನಾ ಸಂದರ್ಭ ಬಹಳಷ್ಟು ಜನರು ಜೀವ ಕಳೆದುಕೊಳ್ಳಬೇಕಾಯಿತು. ಇಂತಹ ಸಂದರ್ಭದಲ್ಲೂ ಪತ್ರಕರ್ತರು ಕೂಡ ಕ್ಷೇತ್ರದಲ್ಲಿದ್ದು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಮೆಟ್ರೋ ಆಸ್ಪತ್ರೆ ವೈದ್ಯ ಡಾ. ಪೃಥ್ವಿ ಮಾತನಾಡಿ, ಕಾಯಿಲೆಗಳ ಬಗ್ಗೆ ಮೊದಲೇ ತಿಳಿದುಕೊಳ್ಳಲು ಆರೋಗ್ಯ ತಪಾಸಣೆ ಶಿಬಿರಗಳು ಅನುಕೂಲವಾಗಲಿವೆ ಎಂದರು. 160ಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್, ಪ್ರಮುಖರಾದ ರಮೇಶ್ ಶಂಕರಘಟ್ಟ, ಡಾ. ದಯಾನಂದ, ಡಾ. ನಾಗಮಣಿ, ಡಾ. ಮಹೇಶ್‌ಮೂರ್ತಿ, ವಿ.ಟಿ.ಅರುಣ್ ಉಪಸ್ಥಿತರಿದ್ದರು.