ಮಂಡ್ಯ: ತಾಯಿ ಮಗುವಿಗೆ ಜನನ ನೀಡಿದ ನಂತರ ಸರಿಯಾದ ಕ್ರಮದಲ್ಲಿ ಹಾಲುಣಿಸಬೇಕು. ಇಲ್ಲದಿದ್ದರೆ ಮಗು ಮರಣ ಹೊಂದುವ ಸಂಭವವಿರುತ್ತದೆ. ಆದ್ದರಿಂದ ಹಾಲುಣಿಸುವ ಕ್ರಮದ ಬಗ್ಗೆ ತಾಯಿಗೆ ಆಸ್ಪತ್ರೆಯಲ್ಲಿ ಸರಿಯಾದ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಸೂಚನೆ ನೀಡಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಇನ್ನು ಮಗುವಿಗೆ ಸುರಕ್ಷಿತವಾಗಿ ಹಾಲುಣಿಸುವ ಸಂಬಂಧ ನಾಮಫಲಕ ಹಾಗೂ ವಿಡಿಯೋಗಳನ್ನು ಆಸ್ಪತ್ರೆಗಳಲ್ಲಿ ಗಭೀರ್ಣಿಯರು ವೀಕ್ಷಿಸಲು ಅನುಕೂಲವಾಗುವ ರೀತಿ ಅನಾವರಣಗೊಳಿಸಿರಬೇಕು ಎಂದರು.
ರಾಷ್ಟ್ರೀಯ ಬಾಲ ಸ್ವಾಸ್ಥೃ ಕಾರ್ಯಕ್ರಮದಡಿ ನಾಲ್ಕು ಮೊಬೈಲ್ ತಂಡಗಳಿವೆ. ಈ ತಂಡ 0 ಯಿಂದ 18 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆಯನ್ನು ಅಂಗನವಾಡಿ ಹಾಗೂ ಶಾಲೆಗಳಿಗೆ ಭೇಟಿ ನೀಡಿ ನಡೆಸಬೇಕು. ನಂತರ ಅವರಿಗೆ ವೈದ್ಯಕೀಯ ತಪಾಸಣೆ ಅಥವಾ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಆಸ್ಪತ್ರೆಗಳಿಗೆ ಸಂಪರ್ಕಿಸುವಂತೆ ತಿಳಿಸಲಾಗುತ್ತಿದೆ. ಇದರಲ್ಲಿ ಗಂಭೀರವಾದ ಪರಿಸ್ಥಿತಿ ಇರುವ ಮಕ್ಕಳಿಗೆ ಸರಿಯಾದ ಚಿಕಿತ್ಸೆ ಪಡೆದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಚಿಕ್ಕ ವಯಸ್ಸಿನಲ್ಲೇ ಮಗುವಿನಲ್ಲಿರುವ ಆರೋಗ್ಯ ತೊಂದರೆಯನ್ನು ಪತ್ತೆ ಮಾಡುವುದು ಮುಖ್ಯ. ಈ ನಿಟ್ಟಿನಲ್ಲಿ ಮಾರ್ಗಸೂಚಿಯ ಪ್ರಕಾರ ಚೆಕ್ ಲಿಸ್ಟ್ ಮಾಡಿಕೊಂಡು ತಪಾಸಣೆ ನಡೆಸುವುದು ಉತ್ತಮ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಪಿ.ವಿ.ಶ್ರೀಧರ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ, ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್‌ಕುಮಾರ್, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಸೋಮಶೇಖರ್, ಮದ್ದೂರು ಟಿಎಚ್‌ಒ ಡಾ.ರವೀಂದ್ರ ಬಿ.ಗೌಡ, ಮಂಡ್ಯ ಟಿಎಚ್‌ಒ ಡಾ.ಜವರೇಗೌಡ ಇತರರಿದ್ದರು.