ನ್ಯೂಸ್

ಏಡ್ಸ್ ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಯಶಸ್ವಿ; ಗರ್ಭಿಣಿಯರಲ್ಲಿ ಸೋಂಕಿನ ಪ್ರಮಾಣ ಶೇ.0.05ಕ್ಕೆ ಇಳಿಕೆ

| ಪಂಕಜ ಕೆ.ಎಂ. ಬೆಂಗಳೂರು

ರಾಜ್ಯದಲ್ಲಿ ಎಚ್​ಐವಿ ಹರಡುವಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಪ್ರಮುಖವಾಗಿ ಗರ್ಭಿಣಿಯರಲ್ಲಿ ಸೋಂಕಿನ ಪ್ರಮಾಣ ಶೇಕಡ 0.05ಕ್ಕೆ ಇಳಿಕೆಯಾಗಿದೆ. ಸೋಂಕಿತ ತಾಯಿಯಿಂದ ಮಕ್ಕಳಿಗೆ ಹರಡುವುದನ್ನು ಶೇ. 97ರಷ್ಟು ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ರಾಜ್ಯಾದ್ಯಂತ ಇರುವ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ (ಐಸಿಟಿಸಿ) ಪ್ರಸಕ್ತ ಸಾಲಿನ ಅಂಕಿ-ಅಂಶಗಳಿಂದ ಇದು ರುಜುವಾತಾಗಿದೆ. 2025ರ ವೇಳೆ ಸೋಂಕಿತ ಗರ್ಭಿಣಿಯಿಂದ ಜನಿಸುವ ಶಿಶುವಿಗೆ ಸೋಂಕು ತಗಲದಂತೆ ಕ್ರಮವಹಿಸಲು ರಾಜ್ಯ ಆರೋಗ್ಯ ಇಲಾಖೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿದೆ. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ (ಕೆಸಾಪ್ಸ್ ) 2020-21ರಲ್ಲಿ ರಾಜ್ಯದ ಎಲ್ಲ ಐಸಿಟಿಸಿ ಕೇಂದ್ರಗಳಿಂದ 12,09,010 ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸುವ ಗುರಿ ಹಾಕಿಕೊಂಡಿತ್ತು. ಅದಕ್ಕಿಂತ ಹೆಚ್ಚುವರಿಯಾಗಿ 12,13,520 ಜನರಿಗೆ ಪರೀಕ್ಷೆ ನಡೆಸಲಾಗಿದ್ದು, ಇವರಲ್ಲಿ 575 ಗರ್ಭಿಣಿಯರಲ್ಲಿ ಎಚ್​ಐವಿ ಸೋಂಕು ಕಂಡುಬಂದಿದೆ. ಸೋಂಕಿತರ ಪ್ರಮಾಣ ಶೇ. 0.05ಕ್ಕೆ ಇಳಿಕೆಯಾಗಿದ್ದು, ಏಡ್ಸ್ ಪತ್ತೆ ಕಾರ್ಯದಲ್ಲಿ ಶೇ.100.4 ಪ್ರಗತಿ ಸಾಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಎಚ್​ಐವಿಗೆ 87 ಸಾವಿರ ಬಲಿ: ರಾಜ್ಯದಲ್ಲಿ ಒಟ್ಟು 64 ಎಆರ್​ಟಿ ಕೇಂದ್ರಗಳು ಹಾಗೂ 314 ಲಿಂಕ್ ಎಆರ್​ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಅಡಿಯಲ್ಲಿ 3.60 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಪತ್ತೆ ಹಚ್ಚಿ 2.93 ಲಕ್ಷ ಮಂದಿಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಇದರಲ್ಲಿ ಮಕ್ಕಳು, ವಯಸ್ಕರು ಸೇರಿದಂತೆ ಎಲ್ಲ ವಯೋಮಾನದವರೂ ಇದ್ದಾರೆ. ಚಿಕಿತ್ಸೆ ಫಲಿಸದೆ 2,651 ಮಕ್ಕಳು ಸೇರಿದಂತೆ 87,514ಮಂದಿ ಮೃತಪಟ್ಟಿದ್ದಾರೆ.

ಸೋಂಕಿತರಿಗೆ ಸರ್ಕಾರಿ ಸೌಲಭ್ಯಗಳು: ಎಚ್​ಐವಿ ಸೋಂಕಿತರಿಗೆ ಅಂತ್ಯೋದಯ ಯೋಜನೆಯಡಿ 35 ಕೆ.ಜಿ. ಆಹಾರಧಾನ್ಯ ನೀಡಲಾಗುತ್ತಿದ್ದು, ವಿಶೇಷ ಪಾಲನಾ ಯೋಜನೆ (ಕಾಬಾ) ಅಡಿಯಲ್ಲಿ ಸೋಂಕಿತ ಹಾಗೂ ಬಾಧಿತ ಮಕ್ಕಳಿಗೆ (ಪೋಷಕರಿರುವವರಿಗೆ 650 ರೂ. ಹಾಗೂ ಪೋಷಕರಿಲ್ಲದವರಿಗೆ 750 ರೂ.) ನೀಡಲಾಗುತ್ತಿದೆ. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ವಿುಸಿ ಕೊಡುವುದು, ಮೈತ್ರಿ ಯೋಜನೆಯಡಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ 500 ರೂ. ಪಿಂಚಣಿ, ಎಆರ್​ಟಿ ಚಿಕಿತ್ಸೆಗಾಗಿ ಪ್ರಯಾಣ ಭತ್ಯೆ, ಕಾನೂನು ಸೇವೆ ಸೇರಿದಂತೆ ಸರ್ಕಾರದಿಂದ ಹಲವು ಸೌಲಭ್ಯ ಕಲ್ಪಿಸ ಲಾಗುತ್ತಿದೆ ಎಂದು ಕೆಸಾಪ್ಸ್ ತಿಳಿಸಿದೆ.

ಶೇ.62.3 ಸಾಧನೆ: ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ಕೆಸಾಪ್ಸ್ 2020-21ನೇ ಸಾಲಿನಲ್ಲಿ ರಾಜ್ಯದಲ್ಲಿನ ಎಲ್ಲ 472 ಐಸಿಟಿಸಿ ಕೇಂದ್ರ ಗಳಿಂದ 26,34,744 ಮಂದಿಯನ್ನು ಪರೀಕ್ಷೆಗೆ ಒಳಪಡಿಸುವ ಗುರಿಯನ್ನು ಹೊಂದಿತ್ತು. ಅದರಂತೆ 16,34,419 ಮಂದಿಯನ್ನು ಪರೀಕ್ಷೆಗೊಳಪಡಿಸುವ ಮೂಲಕ ಶೇ. 62.3 ಗುರಿ ಸಾಧಿಸಿದೆ. ಪರೀಕ್ಷೆಗೆ ಒಳಗಾದವರಲ್ಲಿ 9,520 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಏಡ್ಸ್ ಕೊನೆಗಾಣಿಸಿ ಘೋಷವಾಕ್ಯ: ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಡಿ.1ರಂದು ವಿಶ್ವ ಏಡ್ಸ್ ದಿನ ಆಚರಿಸುತ್ತಿದ್ದು, ಈ ಬಾರಿ ‘ಅಸಮಾನತೆಗಳನ್ನು ಕೊನೆಗೊಳಿಸಿ ಏಡ್ಸ್​ನ್ನು ಕೊನೆಗಾಣಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆ ಗೊಳಿಸಿ’ ಎಂಬ ಘೋಷವಾಕ್ಯದೊಂದಿಗೆ ಆಚರಿಸುತ್ತಿದೆ.

16ನೇ ಸ್ಥಾನದಲ್ಲಿ ರಾಜ್ಯ: ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ 1998ರಿಂದ ಎಚ್​ಐವಿ/ಏಡ್ಸ್ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರಸವಪೂರ್ವ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡುವ ಸ್ತ್ರೀಯರಲ್ಲಿ 2004ರಲ್ಲಿ ಎಚ್​ಐವಿ ಸೋಂಕು ಶೇ.1.5 ಇದ್ದು, 2018-19ರಲ್ಲಿ ಶೇ. 0.22ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಹೆಚ್ಚು ಸೋಂಕಿರುವ ರಾಜ್ಯಗಳಲ್ಲಿ ಕರ್ನಾಟಕ 16ನೇ ಸ್ಥಾನದಲ್ಲಿದೆ.

ಎಚ್​ಐವಿ ಸೋಂಕಿತರಿಗೆ ಮದುವೆ

ಪ್ರತಿ ವರ್ಷ ಡಿ.1ರಂದು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸುತ್ತಿದ್ದು, ಈ ವರ್ಷ ಎಚ್​ಐವಿ ಸೋಂಕಿತರ ಮದುವೆಗಾಗಿ ಜಿಲ್ಲೆಯಲ್ಲಿ ವಿಶೇಷ ಪ್ರಯತ್ನ ನಡೆಸುತ್ತಿದ್ದೇವೆ. ಇದಕ್ಕಾಗಿ ಪ್ರತ್ಯೇಕ ವೆಬ್​ಸೈಟ್ ರಚಿಸಿದ್ದು, ಡಿಸಿ ಎಸ್.ವಿಕಾಸ್ ಕಿಶೋರ್ ಬುಧವಾರ ಬಿಡುಗಡೆಗೊಳಿಸುವರು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಜಿ.ಮಹೇಶ ತಿಳಿಸಿದರು. ಏಡ್ಸ್ ಪೀಡಿತರಲ್ಲಿ ಎಲ್ಲ ವಯೋಮಾನದವರಿದ್ದಾರೆ. ಅವರಿಗೂ ಎಲ್ಲರಂತೆ ಬದುಕುವ ಹಕ್ಕಿದೆ. ಹೀಗಾಗಿ ಎಚ್​ಐವಿ ಪೀಡಿತರಿಗೆ ಪರಸ್ಪರ ಒಪ್ಪಿಗೆ ಮೇರೆಗೆ ಮದುವೆ ಮಾಡಲು ನಿರ್ಧರಿಸಲಾಗಿದೆ. ಆನ್​ಲೈನ್​ನಲ್ಲೇ ಅವರಿಂದ ಅರ್ಜಿ ಆಹ್ವಾನಿಸಿ, ಮದುವೆಗೆ ವ್ಯವಸ್ಥೆ ಮಾಡಲಾಗುವುದು. ಸೋಂಕಿತರ ವಿವರಗಳು ಗೌಪ್ಯವಾಗಿರಲಿದೆ. ರಾಜ್ಯದಲ್ಲಿರುವ ಸೋಂಕಿತರು ತಮಗೆ ನೀಡಿರುವ ಎಆರ್​ಟಿ ಸಂಖ್ಯೆ ಸೇರಿ ಅಗತ್ಯ ದಾಖಲೆ ಸಲ್ಲಿಸಬೇಕು. ಅಧಿಕಾರಿಗಳ ತಂಡ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದರು.