ನ್ಯೂಸ್

ಆರೋಗ್ಯ ಇಲಾಖೆ ಅಸ್ವಸ್ಥ: 30 ಸಾವಿರ ಹುದ್ದೆ ಖಾಲಿ; ಸಿಬ್ಬಂದಿಗೆ ಹೊರೆ, ರೋಗಿಗೆ ಬರೆ..

| ನವೀನ್ ಬಿಲ್ಗುಣಿ ಶಿವಮೊಗ್ಗ

ಕರೊನಾ ತಂದಿಟ್ಟ ಸವಾಲು, ಬಿಕ್ಕಟ್ಟುಗಳಿಂದ ಹೈರಾಣಾಗಿರುವ ಆರೋಗ್ಯ ಇಲಾಖೆ, ಸಿಬ್ಬಂದಿ ಕೊರತೆಯಿಂದಲೂ ಅಸ್ವಸ್ಥಗೊಳ್ಳುವಂತಾಗಿದೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇವೆಯೇ ಪ್ರಮುಖವಾಗಿದ್ದು, ಈ ಕಾರ್ಯದಲ್ಲಿ ಹಲವರು ಕರೊನಾಕ್ಕೆ ಬಲಿಯಾಗಿದ್ದಾರೆ. ಇಂತಹ ಇಲಾಖೆಯಲ್ಲಿ ಕಾಯಂ ಹುದ್ದೆಗಳು ಅರ್ಧಕ್ಕರ್ಧ ಖಾಲಿ ಇವೆ. ಒಟ್ಟು 69,667 ಕಾಯಂ ಹುದ್ದೆಗಳಿದ್ದು, ಸದ್ಯ 39,139 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಸಾವಿರಕ್ಕೂ ಅಧಿಕ ಹಂಗಾಮಿ ನೌಕರರಾಗಿದ್ದಾರೆ. 30,528 ಹುದ್ದೆಗಳು ಹಲವು ವರ್ಷಗಳಿಂದ ಭರ್ತಿಯಾಗಿಲ್ಲ. ಕರೊನಾ ಕಾಲಿಟ್ಟ ಬಳಿಕವಂತೂ ವೈದ್ಯರು, ಶುಶ್ರೂಷಕಿಯರನ್ನು ಒಳಗೊಂಡಂತೆ ಇಡೀ ಇಲಾಖೆ ಸಿಬ್ಬಂದಿ ಕರೊನಾ ಎದುರಿಸುವಲ್ಲಿ ಶ್ರಮಿಸುತ್ತಿದ್ದಾರೆ. ಹೀಗಿದ್ದರೂ, ಸರ್ಕಾರ ಖಾಲಿ ಇರುವ ಕಾಯಂ ಹುದ್ದೆ ಭರ್ತಿಗೆ ಮುಂದಾಗದಿರುವುದು ಇಲಾಖೆಗೆ ತಲೆಬಿಸಿ ತಂದಿಟ್ಟಿದೆ.

ಇರುವವರಿಗೆ ಭಾರ: ಸರ್ಕಾರ ಕಾಯಂ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಮೀನಮೇಷ ಎಣಿಸುತ್ತಿದೆ. ಹಾಗಾಗಿ ಹಾಲಿ ಇರುವ ವೈದ್ಯಕೀಯ ಸಿಬ್ಬಂದಿ ಮೇಲೆ ಹೊರೆ ಹೆಚ್ಚಾಗುತ್ತಿದೆ. ಇದರಿಂದ ರಜೆ ಇಲ್ಲದೆ ಕೆಲಸ ನಿರ್ವಹಣೆ ಮಾಡುವುದೂ ಸೇರಿ ಹಲವು ಸಮಸ್ಯೆ ಎದುರಿಸುವಂತಾಗಿದೆ. ಇದರಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವಂತಾಗಿದೆ. ಅಷ್ಟೇ ಅಲ್ಲ, 3 ದಿನದೊಳಗೆ ನೀಡಬೇಕಿದ್ದ ಕರೊನಾ ವರದಿಯನ್ನು ವಾರ, 15 ದಿನವಾದರೂ ಕೊಡದಂತಹ ಸ್ಥಿತಿಗೆ ವ್ಯವಸ್ಥೆ ತಲುಪಿದೆ. ಪ್ರತಿದಿನದ ಮಾದರಿಯನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ.

800 ವೈದ್ಯರೀಗ ಅಧಿಕಾರಿಗಳು: ರಾಜ್ಯದಲ್ಲಿ 18 ವೃಂದಗಳಲ್ಲಿ 39 ಸಾವಿರಕ್ಕೂ ಅಧಿಕ ವೈದ್ಯಕೀಯ ಸಿಬ್ಬಂದಿ ಕರ್ತವ್ಯ ನಿರ್ವ ಹಿಸುತ್ತಿದ್ದಾರೆ. ಅದರಲ್ಲಿ 800 ವೈದ್ಯರು ಇದೀಗ ಅಧಿಕಾರಿಗಳಾಗಿ ಬಡ್ತಿ ಹೊಂದಿದ್ದಾರೆ. ಡಿಎಚ್​ಒಗಳು, ತಾಲೂಕು ವೈದ್ಯಾಧಿಕಾರಿಗಳು ಒಳಗೊಂಡಂತೆ ಕಾಗದಕ್ಕೆ ಸಹಿ ಮಾಡುವ ಕೆಲಸಕ್ಕಷ್ಟೇ ಸೀಮಿತವಾಗಿದ್ದಾರೆ. ಹಾಗಾಗಿ ಅವರಿಂದಲೂ ಈಗ ರಾಜ್ಯದ ಜನಸಾಮಾನ್ಯರಿಗೆ ಚಿಕಿತ್ಸೆ ಸಿಗುತ್ತಿಲ್ಲ ಎಂಬುದು ವಾಸ್ತವ.

ಯಾವ ಹುದ್ದೆ, ಎಷ್ಟು ಖಾಲಿ?

ಆಸ್ಪತ್ರೆ ಅಟೆಂಡರ್(ಗ್ರೇಡ್-2)- 9381, ಕಿರಿಯ ಆರೋಗ್ಯ ಸಹಾಯಕಿಯರು- 2079, ನರ್ಸಿಂಗ್ ಅಧಿಕಾರಿಗಳು- 1996, ಎಫ್​ಡಿಎ- 1600, ಸ್ಪೆಷಲಿಸ್ಟ್​ಗಳು- 1404, ಕಿರಿಯ ಲ್ಯಾಬ್ ಟೆಕ್ನಿಕಲ್ ಅಧಿಕಾರಿಗಳು- 1343, ಹಿರಿಯ ಆರೋಗ್ಯ ಸಹಾಯಕಿಯರು- 1185, ಎಸ್​ಡಿಎ- 1193, ಫಾರ್ಮಸಿ ಅಧಿಕಾರಿಗಳು- 1122, ಕಿರಿಯ ಆರೋಗ್ಯ ಸಹಾಯಕರು- 1015, ಆಸ್ಪತ್ರೆ ಅಟೆಂಡರ್(ಗ್ರೇಡ್-1)- 1196, ಹಿರಿಯ ನರ್ಸಿಂಗ್ ಅಧಿಕಾರಿಗಳು- 983, ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್- 868, ಹಿರಿಯ ಆರೋಗ್ಯ ಸಹಾಯಕರು- 714, ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು- 574, ಚಾಲಕರು- 554, ಹಿರಿಯ ಫಾರ್ಮಸಿ ಅಧಿಕಾರಿಗಳು- 317, ನರ್ಸಿಂಗ್ ವೈದ್ಯಕೀಯ ಅಧೀಕ್ಷಕರು(ಗ್ರೇಡ್ 2)- 304, ಬ್ಲಾಕ್ ಹೆಲ್ತ್ ಶಿಕ್ಷಣಾಧಿಕಾರಿಗಳು- 231, ಕಚೇರಿ ಅಧೀಕ್ಷಕರು- 199, ಹಿರಿಯ ಲ್ಯಾಬ್ ಟೆಕ್ನಿಕಲ್ ಅಧಿಕಾರಿಗಳು- 183, ಫಿಸಿಯೋಥೆರಪಿಸ್ಟ್- 173, ಫುಡ್ ಸೇಫ್ಟಿ ಆಫೀಸರ್- 173 ಹುದ್ದೆಗಳು ಖಾಲಿ ಇವೆ.

ಸಮಸ್ಯೆ-ಸವಾಲು

  • ರಜೆ ಇಲ್ಲದೆ ವಾರ, ತಿಂಗಳು ಕೆಲಸ ಮಾಡಬೇಕು
  • ಮೂಲಸೌಕರ್ಯ ಗಳಿಲ್ಲದೆ ಹಳ್ಳಿಗೆ ತೆರಳಲು ವೈದ್ಯರ ಹಿಂದೇಟು
  • ಹೊರಗುತ್ತಿಗೆ ನೌಕರರೊಂದಿಗೆ ಮಾಡಬೇಕಿದೆ ಕೆಲಸ
  • ಬಿಡುವಿಲ್ಲದ ಕೆಲಸದಿಂದ ಸಿಬ್ಬಂದಿ ನಿತ್ರಾಣ
  • ಸಕಾಲಕ್ಕೆ ಕರೊನಾ ವರದಿ ಕೊಡಲಿಕ್ಕೂ ಆಗದ ಸ್ಥಿತಿ, ಕರೊನಾ ಮಾದರಿ ಸಂಗ್ರಹಿಸಲು ಮೀನಮೇಷ

ಬೇಡಿಕೆಗಳು

  • ಸಿಬ್ಬಂದಿಗೆ ಮನೋಲ್ಲಾಸ ನೀಡಲು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದು
  • ನೌಕರರಿಗೆ ಕನಿಷ್ಠ ರಿಸ್ಕ್ ಭತ್ಯೆ ನೀಡುವುದು
  • ಸೇನಾನಿಗಳಿಗೆ ಆರ್ಥಿಕ ಕೊಡುಗೆ ಘೊಷಣೆ
  • ಮಾನಸಿಕ ಒತ್ತಡ ನಿವಾರಣೆಗೆ ಶಿಬಿರ ಆಯೋಜನೆ
  • ಇಂಡಿಯನ್ ಮೆಡಿಕಲ್ ಸರ್ವೀಸಸ್ ಮಾಡಬೇಕು

ಆರೋಗ್ಯ ಇಲಾಖೆಯಲ್ಲಿ ಕಾಯಂ ಹುದ್ದೆ ಖಾಲಿ ಇರುವುದರಿಂದ ಹಾಲಿ ಸಿಬ್ಬಂದಿ ಮೇಲೆ ಒತ್ತಡ ಬೀಳುತ್ತಿದೆ. ಹೀಗಾಗಿ ತಜ್ಞ ವೈದ್ಯರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು, ದಂತ ಆರೋಗ್ಯಾಧಿಕಾರಿಗಳನ್ನು ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಚಾಲನೆಯಲ್ಲಿದೆ. ಹಣಕಾಸಿನ ಇತಿಮಿತಿಯಲ್ಲಿ ಉಳಿದ ಹುದ್ದೆಗಳಿಗೂ ನೇಮಕ ಮಾಡಲಾಗುವುದು. | ಡಾ. ಕೆ.ಸುಧಾಕರ್ ಆರೋಗ್ಯ ಸಚಿವ

ಗುತ್ತಿಗೆ ಸಿಬ್ಬಂದಿ ಸೇವಾವಧಿ ವಿಸ್ತರಣೆ

  • ಮಾರ್ಚ್​ವರೆಗೂ ವಿಸ್ತರಿಸಿ ಆದೇಶಿಸಿದ ಆರೋಗ್ಯ ಇಲಾಖೆ

ಕೋವಿಡ್ ಹಿನ್ನೆಲೆಯಲ್ಲಿ ಸೂಕ್ತ ವೈದ್ಯಕೀಯ ಸೇವೆ ಒದಗಿಸಲು ನೇಮಕಗೊಂಡಿದ್ದ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಸೇವಾ ಅವಧಿಯನ್ನು ಮಾರ್ಚ್​ವರೆಗೆ ವಿಸ್ತರಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಹಿಂದೆ ಪ್ರತಿ ಜಿಲ್ಲೆಗೆ ತಾತ್ಕಾಲಿಕವಾಗಿ 45 ಹುದ್ದೆಗಳಂತೆ 18 ಜಿಲ್ಲೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ಇದರಲ್ಲಿ 10 ವೈದ್ಯರು, 20 ಶುಶ್ರೂಷಕರು, 5 ಪ್ರಯೋಗಶಾಲಾ ತಂತ್ರಜ್ಞರು ಹಾಗೂ 10 ಗ್ರೂಪ್ ಡಿ ಸಿಬ್ಬಂದಿ ಸೇರಿದ್ದಾರೆ. ನೇರ ಸಂದರ್ಶನದ ಮೂಲಕ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಒಟ್ಟು 12 ಆಸ್ಪತ್ರೆಗಳಿಗೆ ತಾತ್ಕಾಲಿಕವಾಗಿ 707 ವೈದ್ಯರು ಹಾಗೂ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ಅದೇ ರೀತಿ, ಪ್ರಯೋಗಾಲಯಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ವಿವಿಧೆಡೆ ಅಗತ್ಯ ಇರುವ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿತ್ತು. ಇಲಾಖೆಯಲ್ಲಿ ಖಾಲಿ ಇರುವ 2,196 ಕಿರಿಯ ಮಹಿಳಾ ಸಹಾಯಕಿಯರ ಹುದ್ದೆಯನ್ನೂ ಮಾಸಿಕ 15 ಸಾವಿರ ರೂ. ಸಂಚಿತ ವೇತನದಲ್ಲಿ ಆರು ತಿಂಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ಜಿಲ್ಲಾ ಆಸ್ಪತ್ರೆಗಳಿಗೆ 820 ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ 1,545 ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಿಕೊಳ್ಳಲಾಗಿತ್ತು. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅವಶ್ಯಕತೆಗೆ ಅನುಗುಣವಾಗಿ ಗುತ್ತಿಗೆ ಹಾಗೂ ಹೊರಗುತ್ತಿಗೆಯಡಿ ನೇಮಕವಾಗಿರುವ ಸಿಬ್ಬಂದಿಯ ಸೇವಾ ಅವಧಿಯನ್ನು ಮಾರ್ಚ್​ವರೆಗೆ ವಿಸ್ತರಿಸುವಂತೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಸೂಚಿಸಿದ್ದಾರೆ.

ರಾಜ್ಯದ ಆರೋಗ್ಯ ಇಲಾಖೆಯಲ್ಲಿ 30 ಸಾವಿರಕ್ಕೂ ಅಧಿಕ ಕಾಯಂ ಹುದ್ದೆಗಳು ಖಾಲಿ ಇರುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ. ಅದರಲ್ಲೂ ಕರೊನಾ ಕಾಲದಲ್ಲಿ ವೈದ್ಯಕೀಯ ಸಿಬ್ಬಂದಿ ಬಿಡುವಿಲ್ಲದೆ ಕೆಲಸ ಮಾಡಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಹಣಕಾಸಿನ ನೆಪವೊಡ್ಡದೆ ಖಾಲಿ ಇರುವ ಕಾಯಂ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.

| ಮಾ.ಸ.ನಂಜುಂಡಸ್ವಾಮಿ ಆರೋಗ್ಯ ಇಲಾಖೆ ಮತ್ತು ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ