ನ್ಯೂಸ್

ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನ್ಯುಮೋನಿಯಾ ಪ್ರಕರಣ! ವೈದ್ಯರಿಂದ ಎಚ್ಚರಿಕೆ; Pneumonia

Pneumonia | ಬೇಸಿಗೆಯ ಸಂದರ್ಭದಲ್ಲಿ ಮನುಷ್ಯನ ದೇಹದಲ್ಲಿ ವಾತಾವರಣಕ್ಕೆ ಅನುಗುಣವಾಗಿ ಖಾಯಿಲೆಗಳು ಕಾಣಿಸಿಕೊಳ್ಳುವುದು ಸಹಜ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನ್ಯುಮೋನಿಯಾ ಪ್ರಕರಣಗಳು ಅತೀ ಹೆಚ್ಚಾಗಿ ಕಂಡು ಬರುತ್ತಿವೆ ಎಂದು ತಿಳಿದು ಬಂದಿದೆ. ಹಾಗಿದ್ರೆ ಈ ಒಂದು ಖಾಯಿಲೆಗೆ ಕಾರಣ ಏನು, ಇದನ್ನು ತಡೆಗಟ್ಟುವುದು ಹೇಗೆ ಎಂಬುದನ್ನ ತಿಳಿಯೋಣ.

ಈ ಬಗ್ಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಪಲ್ಮನಾಲಜಿಸ್ಟ್ ಮತ್ತು ಸ್ಲೀಪ್ ಸ್ಪೆಷಲಿಸ್ಟ್ ಆಗಿರುವ ಡಾ. ಪದ್ಮಾ ಸುಂದರಂ, ಈ ಬಗ್ಗೆ ಮಾತನಾಡಿದ್ದು, ಮಕ್ಕಳು ಮತ್ತು ವೃದ್ಧರಲ್ಲಿ ಹಿಂದೆ ವಾರಕ್ಕೆ ಒಂದು ಅಥವಾ ಎರಡಕ್ಕೆ ಸೀಮಿತವಾಗಿದ್ದ ಪ್ರಕರಣಗಳು, ಈಗ ವಾರಕ್ಕೆ 15 ರಿಂದ 20 ಪ್ರಕರಣಗಳಿಗೆ ಹೆಚ್ಚಾಗಿದೆ. ನ್ಯುಮೋನಿಯಾ ಮೊದಲು ಚಳಿಗಾಲದಲ್ಲಿ ಕಂಡು ಬರುತ್ತಿತ್ತು. ಆದರೆ ಈಗ ಬೇಸಿಗೆಯಲ್ಲೂ ಮುಂದುವರಿಯುತ್ತಿದೆ ಎಂದಿದ್ದಾರೆ.

ಬೇಸಿಗೆಯ ಹಿನ್ನಲೆ ಬೆಂಗಳೂರಿನಲ್ಲಿ ಈ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 10 ರಿಂದ 15 ರಷ್ಟು ನ್ಯುಮೋನಿಯಾ ಹೆಚ್ಚಳವಾಗಿದೆ. ಅಕಾಲಿಕ ಹವಾಮಾನ, ಮಾಲಿನ್ಯ, ವಿಳಂಬವಾದ ವೈದ್ಯಕೀಯ ಆರೈಕೆ, ವ್ಯಾಕ್ಸಿನೇಷನ್, ನೈರ್ಮಲ್ಯ, ಸ್ವಯಂ-ಔಷಧಿಗಳನ್ನು ತಪ್ಪಿಸುವುದು ಮುಂತಾದವುಗಳೇ ಈ ಖಾಯಿಲೆಗೆ ಕಾರಣ ಎಂದು ವೈಧ್ಯರು ಹೇಳಿದ್ದಾರೆ. ಮಕ್ಕಳು ಮತ್ತು ವಯಸ್ಕರಲ್ಲಿ ಈ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.

ನ್ಯುಮೋನಿಯಾದ ಲಕ್ಷಣಗಳು?

ಉಸಿರಾಡುವಾಗ ಅಥವಾ ಕೆಮ್ಮುವಾಗ ಎದೆಯಲ್ಲಿ ತೀವೃವಾದ ನೋವು ಕಾಣಿಸಿಕೊಳ್ಳುವುದು.

ಹಸಿರು, ಹಳದಿ ಅಥವಾ ರಕ್ತದ ಕಫದೊಂದಿಗೆ ಕೆಮ್ಮು, ಉಸಿರಾಟದ ತೊಂದರೆ ಉಂಟಾಗುವುದು.

ಹೆಚ್ಚಿನ ತಾಪಮಾನದೊಂದಿಗೆ ಶೀತ ಮತ್ತು ಕೆಲವೊಮ್ಮೆ ಬೆವರುವುದು.

ಅತಿಯಾದ ಆಯಾಸದ ಭಾವನೆ.

ನ್ಯುಮೋನಿಯಾ ತಡೆಗಟ್ಟುವಿಕೆ

ಸಾಧ್ಯವಾದಾಗಲೆಲ್ಲಾ ಅನಾರೋಗ್ಯ ಪೀಡಿತ ವ್ಯಕ್ತಿಗಳಿಂದ ದೂರವಿರುವುದು.

ನಿಯಮಿತ ವ್ಯಾಯಾಮವು ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸೀನುವಾಗ ಅಥವಾ ಕೆಮ್ಮುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು.

ತೊಳೆಯದ ಕೈಗಳಿಂದ ನಿಮ್ಮ ಮುಖವನ್ನು ಮುಟ್ಟುವುದನ್ನು ತಪ್ಪಿಸುವುದು.

ಬಿಸಿಲಿನಲ್ಲಿ ಸಮಯದಲ್ಲಿ ಅತೀ ಹೆಚ್ಚು ಹೊರಗೆ ಹೋಗುವುದನ್ನು ತಪ್ಪಿಸುವುದು.

ನೀರಿನಂಶ ಕಾಪಾಡಿಕೊಳ್ಳುವುದು ಹಾಗೂ ಆರೋಗ್ಯಕರ ಆಹಾರವನ್ನು ಕಾಪಾಡಿಕೊಂಡು ಉತ್ತಮ ನೈರ್ಮಲ್ಯದಲ್ಲಿರುವುದು.

ನಿಮ್ಮ ವೈದ್ಯರ ಮಾರ್ಗಸೂಚಿಗಳನ್ನು ಅನುಸರಿಸಿ ಮತ್ತು ಸೂಚಿಸಲಾದ ಔಷಧಿಗಳ ಕೋರ್ಸ್ ಅನ್ನು ಪೂರ್ಣಗೊಳಿಸಿ.

ಧೂಮಪಾನ ಅಭ್ಯಾಸವಿದ್ದರೆ ಧೂಮಪಾನ ಮಾಡುವುದನ್ನು ನಿಲ್ಲಿಸುವುದು.