Mysuru Traditional Food: ನಾಡಹಬ್ಬ ಮೈಸೂರು ದಸರಾ ಅಂದ್ರೆ ಕೇವಲ ಜಂಬೂಸವಾರಿ, ಅರಮನೆಯ ದೀಪಾಲಂಕಾರ ಅಷ್ಟೇ ಅಲ್ಲ. ಬಗೆಬಗೆಯ ತಿಂಡಿ-ತಿನಿಸುಗಳನ್ನು ಸವಿಯೋದಕ್ಕೂ ಇದು ಒಳ್ಳೆಯ ಅವಕಾಶ. ಮೈಸೂರು ಭಾಗದ ವಿಶೇಷ ಖಾದ್ಯಗಳಿಂದ ಹಿಡಿದು ಕರ್ನಾಟಕದ ಜನಪ್ರಿಯ ಆಹಾರಗಳವರೆಗೆ, ಇಲ್ಲಿನ ಆಹಾರ ಸಂಸ್ಕೃತಿಯ ರುಚಿ ಸವಿಯಬಹುದು. ನೀವು ದಸರಾ ಸಮಯದಲ್ಲಿ ಮೈಸೂರಿಗೆ ಭೇಟಿ ಕೊಡೋ ಪ್ಲ್ಯಾನ್ನಲ್ಲಿದ್ದರೆ, ಈ 7 ಖಾದ್ಯಗಳನ್ನು ನಿಮ್ಮ ಫುಡ್ ಟ್ರಿಪ್ನಲ್ಲಿ ಸೇರಿಸಿಕೊಳ್ಳಿ.
ಮೈಸೂರಿನ ಹೆಸರು ಕೇಳಿದ ತಕ್ಷಣ ನೆನಪಾಗೋ ಸಿಹಿ ಅಂದ್ರೆ ಮೈಸೂರು ಪಾಕ್. ಸಾಂಪ್ರದಾಯಿಕ ರುಚಿಯ ಈ ಸಿಹಿ ದಸರಾ ಪ್ರವಾಸದಲ್ಲಿ ಸವಿಯಲೇಬೇಕಾದ ತಿನಿಸು. ಇದರ ಹೊಸ ಸವಿಯನ್ನೂ ಪ್ರಯತ್ನಿಸಬಹುದು. ಮೈಸೂರು ಪಾಕ್ನ ಸಾಂಪ್ರದಾಯಿಕ ರುಚಿ ಸವಿಯಿರಿ. ಜಾಸ್ಮಿನ್ ಕ್ರೀಮ್ ಮತ್ತು ಕ್ಯಾಂಡಿಡ್ ಆರೆಂಜ್ ಬಳಸಿ ತಯಾರಿಸಿದ ಹೊಸ ಬಗೆಯ ಸಿಹಿ ಆಸ್ವಾದಿಬಹುದು.
ಅನ್ನ, ಬೇಳೆ, ತರಕಾರಿ ಮತ್ತು ಮಸಾಲೆಗಳ ಮಿಶ್ರಣದಿಂದ ತಯಾರಾಗುವ ಬಿಸಿಬೇಳೆ ಬಾತ್ ಕರ್ನಾಟಕದ ಜನಪ್ರಿಯ ಖಾದ್ಯಗಳಲ್ಲಿ ಒಂದು. ಬಿಸಿ ಬಿಸಿಯಾಗಿ ತುಪ್ಪ ಹಾಕಿಕೊಂಡು, ಗರಿಗರಿಯಾದ ತಿಂಡಿಗಳ ಜತೆ ಇದನ್ನು ಸವಿಯೋದರ ಮಜಾನೇ ಬೇರೆ.
ಕರ್ನಾಟಕದ ಸಾಂಪ್ರದಾಯಿಕ ಆಹಾರಗಳಲ್ಲಿ ರಾಗಿ ಮುದ್ದೆಗೆ ವಿಶೇಷ ಸ್ಥಾನವಿದೆ. ರಾಗಿ ಹಿಟ್ಟಿನಿಂದ ತಯಾರಿಸುವ ಈ ಖಾದ್ಯವನ್ನು ಸಾಮಾನ್ಯವಾಗಿ ಸಾರು ಅಥವಾ ಗಟ್ಟಿಯಾದ ಗ್ರೇವಿಗಳ ಜತೆ ತಿನ್ನುತ್ತಾರೆ. ಸ್ಥಳೀಯ ಆಹಾರ ಸಂಸ್ಕೃತಿಯ ರುಚಿ ನೋಡಬೇಕು ಅನ್ನೋರಿಗೆ ಇದು ಉತ್ತಮ ಆಯ್ಕೆ.
ಮೈಸೂರಿನ ಪ್ರಸಿದ್ಧ ಆಹಾರಗಳ ಪಟ್ಟಿಯಲ್ಲಿ ಹನುಮಂತು ಪಲಾವ್ ಕೂಡ ಪ್ರಮುಖ ಸ್ಥಾನ ಪಡೆದಿದೆ. ಸಾಂಪ್ರದಾಯಿಕ ಮರದ ಒಲೆಯ ಅಡುಗೆ ಶೈಲಿ ಮತ್ತು ವಿಶಿಷ್ಟ ಪಲಾವ್ಗಾಗಿ ಇದು ಹೆಸರುವಾಸಿ. ಈ ಖಾದ್ಯವನ್ನ ಟ್ರೈ ಮಾಡಿ. ರೋಸ್ಟ್ ಲ್ಯಾಂಬ್ ಮತ್ತು ಶೆರ್ವಾ ಫೋಮ್ ಜತೆ ನೀಡುವ ವಿಭಿನ್ನ ರುಚಿಯನ್ನು ಪ್ರಯತ್ನಿಸಬಹುದು.
ಹೊರಗೆ ಗರಿಗರಿಯಾಗಿ, ಒಳಗೆ ಮಸಾಲೆ ಆಲೂಗಡ್ಡೆ ಪಲ್ಯ ಹೊಂದಿರುವ ಮೈಸೂರು ಮಸಾಲೆ ದೋಸೆ ತಿಂಡಿ ಪ್ರಿಯರ ನೆಚ್ಚಿನ ಆಯ್ಕೆ. ಕೆಂಪು ಚಟ್ನಿಯ ಲೇಯರ್, ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್ ಜತೆ ಸವಿಯುವ ಈ ದೋಸೆ ಮೈಸೂರು ಫುಡ್ ಟ್ರಿಪ್ನಲ್ಲಿ ಇರಲೇಬೇಕು.
ಬೆಂಗಳೂರು-ಮೈಸೂರು ಪ್ರಯಾಣದ ವೇಳೆ ಮದ್ದೂರು ವಡೆ ಸವಿಯದೇ ಇರೋರು ಕಡಿಮೆ. ಮದ್ದೂರು ಪಟ್ಟಣದ ಹೆಸರನ್ನೇ ಪಡೆದಿರುವ ಈ ವಡೆ, ಹೊರಗೆ ಗರಿಗರಿಯಾಗಿ ಮತ್ತು ಈರುಳ್ಳಿಯ ರುಚಿಯಿಂದ ಕೂಡಿರುತ್ತದೆ. ಪ್ರಯಾಣದ ಮಧ್ಯೆ ಬಿಸಿ ಚಹಾ ಜತೆ ಸವಿಯಲು ಇದು ಸೂಕ್ತವಾದ ತಿಂಡಿ.
ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುವ ಮೈಸೂರು ಬೋಂಡಾ ಕೂಡ ಜನಪ್ರಿಯ ತಿಂಡಿ. ತೆಂಗಿನಕಾಯಿ ಚಟ್ನಿಯ ಜತೆ ಇದನ್ನು ಸವಿಯಬಹುದು. ಲಘು ತಿಂಡಿ ಇಷ್ಟಪಡುವವರಿಗೆ ಇದು ಒಳ್ಳೆಯ ಆಯ್ಕೆ, ಒಮ್ಮೆ ಟ್ರೈ ಮಾಡಿ.
ಮೈಸೂರು ದಸರಾ ವೇಳೆ ಅರಮನೆ, ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡೋದು ಎಷ್ಟು ವಿಶೇಷವೋ, ಅಲ್ಲಿನ ಆಹಾರಗಳ ರುಚಿ ಸವಿಯುವುದೂ ಅಷ್ಟೇ ಖುಷಿ ಕೊಡುತ್ತದೆ. ಮೈಸೂರು ಪಾಕ್, ಬಿಸಿಬೇಳೆ ಬಾತ್, ರಾಗಿ ಮುದ್ದೆ, ಮೈಸೂರು ಮಸಾಲೆ ದೋಸೆ, ಮದ್ದೂರು ವಡೆಯಂತಹ ಖಾದ್ಯಗಳ ಮೂಲಕ ಕರ್ನಾಟಕದ ಆಹಾರ ಪರಂಪರೆಯನ್ನು ಇನ್ನಷ್ಟು ಹತ್ತಿರದಿಂದ ಅನುಭವಿಸಬಹುದು.