ಹುಣಸೂರು: ಜಾತೀಯ ಮನಸುಗಳಿಗೆ ತಮ್ಮ ಕೀರ್ತನೆಗಳ ಮೂಲಕ ಚಾಟಿ ಬೀಸಿದ್ದ ದಾಸಶ್ರೇಷ್ಠ ಕನಕದಾಸರ ಸಂದೇಶಗಳು ಸಮಾಜದಲ್ಲಿ ಇಂದಿಗೂ ಪ್ರಸ್ತುತ ಎಂದು ಸಾಹಿತಿ ಜೆ.ಮಹದೇವ್ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 536ನೇ ಕನಕದಾಸ ಜಯಂತಿ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.
ಜಾತೀಯತೆ, ಶೋಷಣೆಯೇ ಮೈವೆತ್ತಂತಿದ್ದ 15ನೇ ಶತಮಾನದ ಕಾಲಘಟ್ಟದಲ್ಲಿ ಕನಕದಾಸರು ಸಮಾಜದ ಅನಿಷ್ಠಗಳನ್ನು ಅನುಭವಿಸಿ ಸಮಾಜದ ಒಳಿತಿಗಾಗಿ ಸಂತರಾಗಿ ಸಂದೇಶಗಳನ್ನು ನೀಡಿದರು. ಕನಕದಾಸರು ಎಲ್ಲ ಐಭೋಗಗಳನ್ನು ಹೊಂದಿದ್ದರೂ ಎಲ್ಲವನ್ನು ತ್ಯಜಿಸುವ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಮ್ಮ ಸಾಹಿತ್ಯದ ಮೂಲಕ ತಿದ್ದುವ ಕಾರ್ಯಕ್ಕೆ ಸಮರ್ಪಿಸಿಕೊಂಡ ಸ್ವಭಾವ ವೈರಾಗಿಯಾಗಿದ್ದಾರೆ. 5 ಮಹಾಕಾವ್ಯಗಳು, 354 ಕೀರ್ತನೆಗಳ ಮೂಲಕ ಜಗತ್ತಿಗೆ ಸಮಾನತೆಯ ಸಾರವನ್ನು ಸಾರಿದರು. ಕನ್ನಡ ಸಾರಸ್ವತ ಲೋಕಕ್ಕೆ ಉಗಾಭೋಗ, ಸುಳಾವಿ ಮತ್ತು ಅಸಂಗತಗಳೆಂಬ ಪ್ರಾಕಾರಗಳನ್ನು ನೀಡಿದ ಮಹಾನ್ ದಾರ್ಶನಿಕರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ದಾಸಶ್ರೇಷ್ಠ ಕನಕದಾಸರು ತಮ್ಮ ಜೀವನ ಸಂದೇಶವನ್ನು ಕೀರ್ತನೆಗಳ ಮೂಲಕ ನೀಡಿದರು. ದೇಶದಲ್ಲಿ ಆಗಿಹೋದ ಮಹನೀಯರನ್ನು ಒಂದು ಜಾತಿಯ ಸಂಕೋಲೆಯೊಂದಿಗೆ ಬಂಧಿಸುವುದು ಸರಿಯಲ್ಲ. ಮಹನೀಯರ ಜೀವನಾದರ್ಶಗಳು ಜಯಂತಿಗಳ ಆಚರಣೆಯ ಮೂಲಕ ಎಲ್ಲರ ಮನಸನ್ನು ಸೇರಬೇಕು. ಪ್ರತಿ ಮನೆಯಲ್ಲೂ ಇಂತಹ ಜಯಂತಿಗಳು ಆಚರಿಸುವಂತಾದಲ್ಲಿ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.
ಸಮಾರಂಭದಲ್ಲಿ ಕುರುಬರ ಅಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಡಿ.ಕೆ.ಕುನ್ನೇಗೌಡ, ದಲಿತ ಮುಖಂಡ ನಿಂಗರಾಜ ಮಲ್ಲಾಡಿ, ಡಿ.ಕುಮಾರ್, ಬಸವಲಿಂಗಯ್ಯ, ಮುಖಂಡರಾದ ಜಯರಾಂ, ಗಣೇಶ್‌ಕುಮಾರಸ್ವಾಮಿ, ಕಾಯಿ ಶೇಖರ್, ಕಣಗಾಲ್ ರಾಮೇಗೌಡ, ವಾಸೇಗೌಡ, ತಹಸೀಲ್ದಾರ್ ಮಂಜುನಾಥ್, ಇಒ ಬಿ.ಕೆ.ಮನು, ಪೌರಾಯುಕ್ತೆ ಕೆ.ಎಂ.ಮಾನಸ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಎಸ್.ಜಯರಾಂ, ಪಿ.ಆರ್.ರಾಚಪ್ಪ, ಭಾಸ್ಕರ್, ಅಧಿಕಾರಿಗಳು ಹಾಜರಿದ್ದರು.