ನ್ಯೂಸ್

ಲಿವ್-ಇನ್ ಸಂಬಂಧ ಕೊಲೆಯಲ್ಲಿ ಅಂತ್ಯಗೊಂಡದ್ದೇಕೆ?

sspmiracle1982

ಪುಣೆ: ಯುವಕನೋರ್ವ ಗರ್ಭಿಣಿಯಾದ ಲಿವ್-ಇನ್ ಸಂಗಾತಿಯನ್ನು ಕೊಂದು ಪೊಲೀಸರಿಗೆ ಶರಣಾದ ಘಟನೆ  ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ.

ರಂಜನ್​​ಗಾಂವ್ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕರೇಗಾಂವ್ ಗ್ರಾಮದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.

27 ವರ್ಷದ ಆ ಯುವಕ ಆಕೆಯನ್ನು ಕೊಲೆ ಗೈದು ಪೊಲೀಸ್ ಠಾಣೆಗೆ ತೆರಳಿ 24 ವರ್ಷದ ಲಿವ್ -ಇನ್ ಸಂಗಾತಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ರಂಜಂಗಾಂವ್ ಪೊಲೀಸರು ದಾಖಲಿಸಿದ್ದಾರೆ.

ಆತ ಪೊಲೀಸ್ ಠಾಣೆಗೆ ಬಂದು ಒಂದು ತುಂಡು ಕಾಗದ ಮತ್ತು ಪೆನ್ನು ಕೇಳಿ ಪಡೆದ. ನಂತರ ಅದರಲ್ಲಿ ತಾನು ಖಿನ್ನತೆಯಿಂದ ಬಳಲುತ್ತಿರುವ ರೋಗಿಯಾಗಿದ್ದು. ಗರ್ಭಿಣಿ ಲಿವ್ - ಇನ್ ಸಂಗಾತಿಯನ್ನು ಕತ್ತು ಹಿಸುಕಿ ಕೊಂದಿದ್ದು, ತನಗೆ ಶಿಕ್ಷೆ ನೀಡಬೇಕೆಂದು ಕೋರಿದ.

ನಂತರ ಆತ ಆಕೆಯೊಂದಿಗೆ ವಾಸಿಸುತ್ತಿದ್ದ ಮನೆಯ ಕೀಲಿಗಳನ್ನು ಹಸ್ತಾಂತರಿಸಿದ.

ಮನೆ ತಲುಪಿ ಬಾಗಿಲು ತೆರೆದು ನೋಡಿದಾಗ ಮಹಿಳೆ ನೆಲದ ಮೇಲೆ ಸತ್ತು ಬಿದ್ದಿರುವುದು ಕಂಡು ಬಂದಿತು ಎಂದು ಪೊಲೀಸ್ ಪಿ.ಎನ್. ಸುತಾರ್ ತಿಳಿಸಿದ್ದಾರೆ. ಮೃತ ಮಹಿಳೆ ಮತ್ತು ಆರೋಪಿ ಕಳೆದ ನಾಲ್ಕೈದು ತಿಂಗಳಿನಿಂದ ಲಿವ್ ಇನ್ ಸಂಬಂಧದಲ್ಲಿದ್ದು, ಈ ಅವಧಿಯಲ್ಲಿ ಆಕೆ ಗರ್ಭಿಣಿಯಾಗಿದ್ದಳು ಎಂಬುದು ಬೆಳಕಿಗೆ ಬಂದಿದೆ.

ಗರ್ಭಪಾತಕ್ಕೆ ಹೋಗಲು ಅವರಿಬ್ಬರಿಗೂ ಹಣವಿಲ್ಲದ ಕಾರಣ, ಅವರು ಆಗಾಗ್ಗೆ ಜಗಳವಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಅವರ ಮಧ್ಯೆ ನಡೆದ ವಾಗ್ವಾದ ತಾರಕಕ್ಕೇರಿ ಆ ವ್ಯಕ್ತಿ ಕೋಪದಿಂದ, ಅವಳ ಕತ್ತು ಹಿಸುಕಿ, ಹೊರಗಿನಿಂದ ಬಾಗಿಲನ್ನು ಲಾಕ್ ಮಾಡಿ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಬ್ ಇನ್ಸ್‌ಪೆಕ್ಟರ್ ಶುಭಾಂಗಿ ಕುಟೆ ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.