ಚೆನ್ನೈ: ಕೊವಿಡ್-19ರಿಂದ ಮೃತಪಟ್ಟ ಚೆನ್ನೈ ಮೂಲದ ವೈದ್ಯನೋರ್ವನ ಪತ್ನಿಯ ಅಳಲು ಇದು..ನನ್ನ ಗಂಡ ಮೃತಪಟ್ಟಿದ್ದಾರೆ. ಈಗವರಿಗೆ ಅವಮಾನ ಮಾಡಲಾಗುತ್ತಿದೆ..ಅಗೌರವದಿಂದ ನೋಡಲಾಗುತ್ತಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಡಾ. ಸೈಮನ್ ಹರ್ಕ್ಯುಲಸ್ ಎಂಬುವರು ಕರೊನಾ ವೈರಸ್ನಿಂದಲೇ ಮೃತಪಟ್ಟಿದ್ದಾರೆ. ಆದರೆ ಅವರ ಮೃತದೇಹ ಸಮಾಧಿ ಮಾಡಲು ಎರಡು ಸ್ಮಶಾನಗಳು ನಿರಾಕರಿಸಿದವು. ಕೊವಿಡ್-19 ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡಿ, ಅವರನ್ನು ಕಾಳಜಿ ಮಾಡಿದ ನನ್ನ ಪತಿ ಅದೇ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಅವರ ತ್ಯಾಗಕ್ಕೆ ಈಗ ಹೀಗೆ ಬೆಲೆ ನೀಡಲಾಗಿದೆ ಎಂದು ಮಾಧ್ಯಮವೊಂದರ ಎದುರು ಅಳಲು ತೋಡಿಕೊಂಡಿದ್ದಾರೆ.
ಡಾ. ಸೈಮನ್ ಅವರ ಪತ್ನಿ ಆನಂದಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಕೊವಿಡ್-19ರಿಂದ ಮೃತಪಟ್ಟ ನನ್ನ ಪತಿಯ ಅಂತ್ಯಕ್ರಿಯೆಗಾಗಿ ಕಿಲ್ಪಾಕ್ ರುದ್ರಭೂಮಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅಲ್ಲಿನ ಸ್ಥಳೀಯರು ರುದ್ರಭೂಮಿ ನಿರ್ವಹಣಾ ಸಿಬ್ಬಂದಿಗೆ ಬೆದರಿಕೆ ಹಾಕಿದರು. ಇದರಿಂದಾಗಿ ಅವರೂ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದುಬಿಟ್ಟರು.
ಅಲ್ಲಿಂದ ಅಣ್ಣಾ ನಗರ ರುದ್ರಭೂಮಿಗೆ ಆಂಬುಲೆನ್ಸ್ನಲ್ಲಿ ಮೃತದೇಹ ಕೊಂಡೊಯ್ಯಲಾಯಿತು. ಅಲ್ಲೂ ಕೂಡ ಹೀಗೇ ಆಯಿತು. ಅಲ್ಲಿನ ಜನರು ಆಂಬುಲೆನ್ಸ್ ಮೇಲೆ ಕೂಡ ದಾಳಿ ಮಾಡಿದರು. ಶವವನ್ನು ತರಬೇಡಿ ಎನ್ನುತ್ತ ಆಂಬುಲೆನ್ಸ್ನ ಗ್ಲಾಸ್ಗಳಿಗೆಲ್ಲ ಕಲ್ಲು ಹೊಡೆದರು. ಇದರಿಂದಾಗಿ ವಾಹನದ ಡ್ರೈವರ್ ಸೇರಿ ಇನ್ನೂ ಕೆಲವರು ಗಾಯಗೊಂಡಿದ್ದಾರೆ ಎಂದು ಆನಂದಿ ತಿಳಿಸಿದ್ದಾರೆ.
ನಂತರ ವೆಲ್ಲಪ್ಪಂಚವಡಿಗೆ ತೆಗೆದುಕೊಂಡು ಹೋಗಲಾಯಿತು. ಈಗವರ ಮೃತದೇಹ ಸಮಾಧಿ ಮಾಡಲು ಕಾರ್ಪೋರೇಶನ್ ಕ್ರಮ ಕೈಗೊಳ್ಳುತ್ತಿದೆ. ನನಗೇನೋ ಅವರನ್ನು ನಮ್ಮ ಮನೆ ಸಮೀಪವೇ ಹೂಳಬೇಕು ಎಂದು ಆಸೆ. ನಾನು ಅವರೊಟ್ಟಿಗೆ 30 ವರ್ಷ ಜೀವಿಸಿದ್ದೇನೆ. ಈಗ ಅಲ್ಲೆಲ್ಲೋ ಅನಾಥವಾಗಿ ಅವರನ್ನು ಸಮಾಧಿ ಮಾಡಲು ಇಷ್ಟವಿಲ್ಲ. ಅಧಿಕಾರಿಗಳು ಹೇಳುವ ನಿಯಮದ ಪ್ರಕಾರ ನಮ್ಮ ಮನೆ ಬಳಿಯೇ ಹೂಳಲಿ ಎಂದು ಆನಂದಿ ಹೇಳಿದ್ದಾರೆ.
ವೈದ್ಯರನ್ನು ಸಮಾಧಿ ಮಾಡಲು ಅವಕಾಶ ಕೊಡದೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಣ್ಣಾ ನಗರದಲ್ಲಿ 20 ಮಂದಿಯನ್ನು ಬಂಧಿಸಲಾಗಿದೆ.(ಏಜೆನ್ಸೀಸ್)